
ಮಹಾರಾಷ್ಟ್ರದಲ್ಲಿ ಹೊಸ ಅಧ್ಯಾಯ: ಮೊದಲ ಮಹಿಳಾ ಡಿಸಿಎಂ ಆಗಿ ಸುನೇತ್ರಾ ಪವಾರ್ ಪ್ರಮಾಣ
ಮುಂಬೈನಲ್ಲಿರುವ 'ಲೋಕಭವನ'ದಲ್ಲಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಅವರು ಸುನೇತ್ರಾ ಪವಾರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಮಹಾರಾಷ್ಟ್ರದ ರಾಜಕೀಯ ಇತಿಹಾಸದಲ್ಲಿ ಶನಿವಾರ (ಜ.31) ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ. ಎನ್‌ಸಿಪಿ (ಅಜಿತ್ ಪವಾರ್ ಬಣ) ನಾಯಕಿ ಸುನೇತ್ರಾ ಪವಾರ್ ಅವರು ರಾಜ್ಯದ ನೂತನ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಹಾರಾಷ್ಟ್ರದ ಇತಿಹಾಸದಲ್ಲಿ ಈ ಉನ್ನತ ಹುದ್ದೆಗೇರಿದ 'ಮೊದಲ ಮಹಿಳೆ' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ತಮ್ಮ ಪತಿ ಹಾಗೂ ಪಕ್ಷದ ಹಿರಿಯ ನಾಯಕ ಅಜಿತ್ ಪವಾರ್ ಅವರ ನಿಧನದಿಂದ ತೆರವಾಗಿದ್ದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಸುನೇತ್ರಾ ಪವಾರ್ ಅವರನ್ನು ನೇಮಕ ಮಾಡಲಾಗಿದ್ದು, ಮಹಾಯುತಿ ಸರ್ಕಾರದಲ್ಲಿ ಎನ್‌ಸಿಪಿ ಪ್ರಾತಿನಿಧ್ಯ ಮುಂದುವರಿದಿದೆ.
ಮುಂಬೈನಲ್ಲಿರುವ 'ಲೋಕಭವನ'ದಲ್ಲಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಅವರು ಸುನೇತ್ರಾ ಪವಾರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಗಣ್ಯರ ಉಪಸ್ಥಿತಿ
ಈ ಐತಿಹಾಸಿಕ ಕ್ಷಣಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಮತ್ತೊಬ್ಬರು ಉಪಮುಖ್ಯಮಂತ್ರಿ ಏಕನಾಥ ಶಿಂದೆ ಸಾಕ್ಷಿಯಾದರು. ಬಳಿಕ ಉಭಯ ನಾಯಕರು ಸುನೇತ್ರಾ ಅವರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಎನ್‌ಸಿಪಿ (ಅಜಿತ್ ಬಣ) ಪ್ರಮುಖ ನಾಯಕರಾದ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್, ರಾಜ್ಯಾಧ್ಯಕ್ಷ ಸುನಿಲ್ ತತ್ಕರೆ ಮತ್ತು ಹಿರಿಯ ಸಚಿವ ಛಗನ್ ಭುಜಬಲ್ ಸೇರಿದಂತೆ ಸಚಿವ ಸಂಪುಟದ ಹಲವು ಸಹೋದ್ಯೋಗಿಗಳು ಮತ್ತು ಮೈತ್ರಿಕೂಟದ ಮುಖಂಡರು ಸಮಾರಂಭದಲ್ಲಿ ಹಾಜರಿದ್ದರು.
ರಾಜಕೀಯ ಮಹತ್ವ
ಅಜಿತ್ ಪವಾರ್ ಅವರ ಅಕಾಲಿಕ ನಿಧನವು ಮಹಾರಾಷ್ಟ್ರ ರಾಜಕೀಯದಲ್ಲಿ, ವಿಶೇಷವಾಗಿ ಎನ್‌ಸಿಪಿ ಪಾಳಯದಲ್ಲಿ ದೊಡ್ಡ ಶೂನ್ಯ ಸೃಷ್ಟಿಸಿತ್ತು. ಇದೀಗ ಸುನೇತ್ರಾ ಪವಾರ್ ಅವರ ನೇಮಕದ ಮೂಲಕ ಬಾರಾಮತಿ ಪವರ್ ಪಾಲಿಟಿಕ್ಸ್ ಮತ್ತು ಪಕ್ಷದ ಮೇಲಿನ ಹಿಡಿತವನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಕಾರ್ಯಕರ್ತೆಯಾಗಿ ಮತ್ತು ಅಜಿತ್ ಪವಾರ್ ಅವರ ರಾಜಕೀಯ ಜೀವನದ ಹಿಂದಿನ ಶಕ್ತಿಯಾಗಿ ಗುರುತಿಸಿಕೊಂಡಿದ್ದ ಸುನೇತ್ರಾ ಪವಾರ್, ಈಗ ನೇರವಾಗಿ ಆಡಳಿತದ ಮುಂಚೂಣಿಗೆ ಬಂದಿದ್ದಾರೆ. ಪಕ್ಷದ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬುವುದು ಮತ್ತು ಮುಂಬರುವ ದಿನಗಳಲ್ಲಿ ಪಕ್ಷವನ್ನು ಬಲಪಡಿಸುವುದು ಅವರ ಮುಂದಿರುವ ಪ್ರಮುಖ ಸವಾಲಾಗಿದೆ. ಮಹಿಳಾ ನಾಯಕಿಯೊಬ್ಬರು ಮಹಾರಾಷ್ಟ್ರದಂತಹ ದೊಡ್ಡ ರಾಜ್ಯದ ಉಪಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿರುವುದು ರಾಜ್ಯದ ಮಹಿಳಾ ಸಮುದಾಯದಲ್ಲಿ ಹರ್ಷ ಮೂಡಿಸಿದೆ.

