
ರಾಜ್ ಕುಮಾರ್ ಕಿಡ್ನಾಪ್ ಪ್ರಕರಣ: ತಮಿಳುನಾಡು ಸರ್ಕಾರದ ಮೇಲ್ಮನವಿ ವಜಾ, 9 ಮಂದಿ ಆರೋಪಿಗಳು ಖುಲಾಸೆ
ಡಾ. ರಾಜ್‌ಕುಮಾರ್ ಅಪಹರಣ ಪ್ರಕರಣದಲ್ಲಿ ವೀರಪ್ಪನ್ ಸಹಚರರ ಖುಲಾಸೆ ತೀರ್ಪನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದ್ದು, ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.
ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರ ಅಪಹರಣ ಪ್ರಕರಣದಲ್ಲಿ ಒಂಬತ್ತು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ. ಈ ಮೂಲಕ ಸುದೀರ್ಘ ಕಾನೂನು ಹೋರಾಟದ ನಂತರ ವೀರಪ್ಪನ್ ಸಹಚರರ ಖುಲಾಸೆ ಆದೇಶವನ್ನು ನ್ಯಾಯಾಲಯವು ಎತ್ತಿಹಿಡಿದಿದೆ.
ಏನಿದು ಪ್ರಕರಣ?
ಜುಲೈ 30, 2000 ರಂದು ತಮಿಳುನಾಡು ಮತ್ತು ಕರ್ನಾಟಕ ಗಡಿಭಾಗದ ದೊಡ್ಡಗಜನೂರಿನ ತೋಟದ ಮನೆಯಲ್ಲಿದ್ದ ಡಾ. ರಾಜ್‌ಕುಮಾರ್ ಹಾಗೂ ಅವರೊಂದಿಗೆ ಇದ್ದ ಮೂವರನ್ನು ವೀರಪ್ಪನ್ ನೇತೃತ್ವದ ತಂಡ ಅಪಹರಿಸಿತ್ತು. ಸತತ 108 ದಿನಗಳ ಕಾಲ ಕಾಡಿನಲ್ಲಿ ಒತ್ತೆಯಾಳಾಗಿರಿಸಿಕೊಂಡಿದ್ದ ವೀರಪ್ಪನ್, ಉಭಯ ಸರ್ಕಾರಗಳ ಸಂಧಾನದ ನಂತರ ನವೆಂಬರ್ 15 ರಂದು ಅವರನ್ನು ಬಿಡುಗಡೆ ಮಾಡಿದ್ದನು. ಈ ಘಟನೆಗೆ ಸಂಬಂಧಿಸಿದಂತೆ ತಾಳವಾಡಿ ಪೊಲೀಸರು ವೀರಪ್ಪನ್ ಸೇರಿದಂತೆ 14 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಂತರ ಪ್ರಕರಣದ ತನಿಖೆಯನ್ನು ಸಿಬಿ-ಸಿಐಡಿಗೆ ವಹಿಸಲಾಗಿತ್ತು. ಇವರಲ್ಲಿ ವೀರಪ್ಪನ್, ಸೇತುಕುಳಿ ಗೋವಿಂದನ್, ಚಂದ್ರಗೌಡ ಮತ್ತು ಸೇತುಮಣಿ 2004 ರಲ್ಲಿ ಎನ್‌ಕೌಂಟರ್‌ನಲ್ಲಿ ಹತರಾಗಿದ್ದರೆ, ರಮೇಶ್ ಎಂಬ ಆರೋಪಿ ಇಂದಿಗೂ ಪತ್ತೆಯಾಗಿಲ್ಲ.
ಸತತ 108 ದಿನಗಳ ಕಾಲ ಕಾಡಿನಲ್ಲಿ ಡಾ. ರಾಜ್‌ಕುಮಾರ್ ಅವರನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ವೀರಪ್ಪನ್, ಉಭಯ ಸರ್ಕಾರಗಳ ಸಂಧಾನದ ನಂತರ ನವೆಂಬರ್ 15 ರಂದು ಅವರನ್ನು ಬಿಡುಗಡೆ ಮಾಡಿದ್ದನು.
ಸಾಕ್ಷ್ಯಾಧಾರ ಕೊರತೆ
ಸೆಪ್ಟೆಂಬರ್ 25, 2018 ರಂದು ಗೋಪಿಚೆಟ್ಟಿಪಾಳ್ಯಂನ ಸೆಷನ್ಸ್ ನ್ಯಾಯಾಲಯವು ಈ ಪ್ರಕರಣದಲ್ಲಿ ಬದುಕುಳಿದಿದ್ದ ಒಂಬತ್ತು ಆರೋಪಿಗಳಾದ ಗೋವಿಂದರಾಜ್, ಆಂಡ್ರಿಲ್, ಪಸುವಣ್ಣ, ಪುಟ್ಟುಸಾಮಿ, ಕಲ್ಮಂಡಿರಾಮನ್, ಮಾರನ್, ಸೆಲ್ವಂ, ಅಮೃತಲಿಂಗಂ ಮತ್ತು ನಾಗರಾಜ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆ ಮಾಡಿತ್ತು. ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ 2004ರಲ್ಲಿ ವೀರಪ್ಪನ್ ಹಾಗೂ ಅವನ ಪ್ರಮುಖ ಸಹಚರರು ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದರು. ಮುಖ್ಯ ಸಾಕ್ಷಿಗಳಾದ ಡಾ. ರಾಜ್‌ಕುಮಾರ್ ಮತ್ತು ಅವರ ಪತ್ನಿ ಪಾರ್ವತಮ್ಮ ಅವರ ವಿಚಾರಣೆ ನಡೆಯದಿರುವುದು ಹಾಗೂ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಆಡಿಯೋ ಕ್ಯಾಸೆಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸದ ಹಿನ್ನೆಲೆಯಲ್ಲಿ ಉಳಿದ ಒಂಬತ್ತು ಮಂದಿ ಆರೋಪಿಗಳ ವಿರುದ್ಧ 2018ರ ಸೆಪ್ಟೆಂಬರ್ 25ರಂದು ತೀರ್ಪು ನೀಡಿದ್ದ ಗೋಬಿಚೆಟ್ಟಿಪಾಳಯಂ ನ್ಯಾಯಾಲಯ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಎಲ್ಲರನ್ನೂ ಬಿಡುಗಡೆ ಮಾಡಿತ್ತು.
ಸುದೀರ್ಘ ಕಾನೂನು ಹೋರಾಟಕ್ಕೆ ತೆರೆ
ಆದರೆ ಈ ಆದೇಶದ ವಿರುದ್ಧ ಪ್ರಾಸಿಕ್ಯೂಷನ್ 2019 ರಲ್ಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಐದು ವರ್ಷಗಳ ನಂತರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ವೇಲ್ಮುರುಗನ್ ಮತ್ತು ನ್ಯಾಯಮೂರ್ತಿ ಎಂ. ಜ್ಯೋತಿರಾಮನ್ ಅವರಿದ್ದ ವಿಭಾಗೀಯ ಪೀಠವು, ಕೆಳ ನ್ಯಾಯಾಲಯದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು. 18 ವರ್ಷಗಳ ಸುದೀರ್ಘ ಕಾಲ ನಡೆದ ಈ ಪ್ರಕರಣದ ವಿಚಾರಣೆಯಲ್ಲಿ ಸುಮಾರು 10 ಮಂದಿ ನ್ಯಾಯಾಧೀಶರು ಬದಲಾಗಿದ್ದರು. ಅಂತಿಮವಾಗಿ ಪ್ರಾಸಿಕ್ಯೂಷನ್ ಸರಿಯಾದ ಸಾಕ್ಷ್ಯಗಳನ್ನು ಒದಗಿಸಲು ವಿಫಲವಾದ ಕಾರಣ ಕೆಳ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆಗೊಳಿಸಿತ್ತು, ಈಗ ಹೈಕೋರ್ಟ್ ಕೂಡ ಅದೇ ತೀರ್ಪನ್ನು ಎತ್ತಿಹಿಡಿದಿದೆ.
ಈಗ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಪಿ. ವೇಲ್ಮುರುಗನ್ ಮತ್ತು ಎಂ. ಜ್ಯೋತಿರಾಮನ್ ಅವರಿದ್ದ ಪೀಠವು ಕೆಳ ನ್ಯಾಯಾಲಯದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ್ದು, ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿ ಈ ಸುದೀರ್ಘ ಕಾನೂನು ಹೋರಾಟಕ್ಕೆ ತೆರೆ ಎಳೆದಿದೆ.
ಡಾ. ರಾಜ್‌ಕುಮಾರ್ ಅವರ ಅಪಹರಣವು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಇತಿಹಾಸದಲ್ಲಿ ಅತ್ಯಂತ ಆತಂಕಕಾರಿ ಮತ್ತು ಸಂಕೀರ್ಣವಾದ ವಿದ್ಯಮಾನಗಳಲ್ಲಿ ಒಂದಾಗಿದೆ. 2000ನೇ ಇಸವಿಯ ಜುಲೈ 30ರ ಭಾನುವಾರ ರಾತ್ರಿ ಸುಮಾರು 9.30ರ ಸಮಯದಲ್ಲಿ, ಕಾಡುಗಳ್ಳ ವೀರಪ್ಪನ್ ತನ್ನ ತಂಡದೊಂದಿಗೆ ಚಾಮರಾಜನಗರ ಜಿಲ್ಲೆಯ ಗಾಜನೂರಿನಲ್ಲಿದ್ದ ರಾಜ್‌ಕುಮಾರ್ ಅವರ ಫಾರ್ಮ್‌ಹೌಸ್‌ಗೆ ನುಗ್ಗಿದ್ದ. ಆ ಸಮಯದಲ್ಲಿ ರಾಜ್‌ಕುಮಾರ್ ಅವರು ತಮ್ಮ ಪತ್ನಿ ಪಾರ್ವತಮ್ಮ ಅವರೊಂದಿಗೆ ಊಟ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದರು. ವೀರಪ್ಪನ್ ಮತ್ತು ಅವನ ಸಶಸ್ತ್ರ ತಂಡವು ಕೇವಲ ರಾಜ್‌ಕುಮಾರ್ ಅವರನ್ನು ಮಾತ್ರವಲ್ಲದೆ, ಅವರ ಅಳಿಯ ಎಸ್.ಎ. ಗೋವಿಂದರಾಜ್, ನಟ ನಾಗಪ್ಪ ಮತ್ತು ಸಹಾಯಕ ನಾಗರಾಜು ಅವರನ್ನು ಕೂಡ ಅಪಹರಿಸಿ ದಟ್ಟಾರಣ್ಯಕ್ಕೆ ಕರೆದೊಯ್ದರು.
ಈ ಸುದ್ದಿ ತಿಳಿಯುತ್ತಿದ್ದಂತೆಯೇ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ಮತ್ತು ಆತಂಕದ ವಾತಾವರಣ ನಿರ್ಮಾಣವಾಯಿತು. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಜನಜೀವನ ಸ್ತಬ್ಧವಾಯಿತು, ಚಿತ್ರಮಂದಿರಗಳು ಮುಚ್ಚಲ್ಪಟ್ಟವು ಮತ್ತು ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಅಂದಿನ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಪರಿಸ್ಥಿತಿಯನ್ನು ನಿಭಾಯಿಸಲು ತಕ್ಷಣವೇ ಸಭೆಗಳನ್ನು ನಡೆಸಿದರು. ವೀರಪ್ಪನ್ ಕೇವಲ ಹಣಕ್ಕಾಗಿ ಈ ಅಪಹರಣ ಮಾಡಿರಲಿಲ್ಲ. ಬದಲಿಗೆ ತಮಿಳು ಕೈದಿಗಳ ಬಿಡುಗಡೆ, ಕಾವೇರಿ ನೀರಿನ ವಿವಾದಕ್ಕೆ ಸಂಬಂಧಿಸಿದ ಬೇಡಿಕೆಗಳು ಮತ್ತು ತಮಿಳು ಭಾಷೆಯ ಹಿತರಕ್ಷಣೆಗೆ ಸಂಬಂಧಿಸಿದಂತೆ ಸುಮಾರು 10ಕ್ಕೂ ಹೆಚ್ಚು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದನು.
ಸಂಧಾನಕಾರರಾಗಿ ನಕ್ಕೀರನ್ ಪತ್ರಿಕೆಯ ಸಂಪಾದಕ ಆರ್.ಆರ್. ಗೋಪಾಲ್ ಅವರು ಕಾಡಿಗೆ ಹೋಗಲು ಸರ್ಕಾರಗಳು ನಿರ್ಧರಿಸಿದವು. ಅವರು ಹಲವಾರು ಬಾರಿ ಕಾಡಿಗೆ ಭೇಟಿ ನೀಡಿ ವೀರಪ್ಪನ್ ಮತ್ತು ಸರ್ಕಾರದ ನಡುವೆ ಸಂವಹನ ನಡೆಸಿದರು. ನಂತರದ ದಿನಗಳಲ್ಲಿ ಪಿ. ನೆಡುಮಾರನ್ ಮತ್ತು ಇತರ ಮಾನವ ಹಕ್ಕುಗಳ ಕಾರ್ಯಕರ್ತರು ಕೂಡ ಈ ಸಂಧಾನ ಪ್ರಕ್ರಿಯೆಯಲ್ಲಿ ಭಾಗಿಯಾದರು. ಈ ಮಧ್ಯೆ, ಸುಪ್ರೀಂ ಕೋರ್ಟ್ ವೀರಪ್ಪನ್ ಬೇಡಿಕೆಯಂತೆ ಕೆಲವು ಟಾಡಾ ಕೈದಿಗಳನ್ನು ಬಿಡುಗಡೆ ಮಾಡಲು ಕಾನೂನಾತ್ಮಕ ಅಡ್ಡಿಗಳನ್ನು ಒಡ್ಡಿದ್ದರಿಂದ ಬಿಕ್ಕಟ್ಟು ಮತ್ತಷ್ಟು ದೀರ್ಘವಾಯಿತು. ರಾಜ್‌ಕುಮಾರ್ ಅವರು ಕಾಡಿನಲ್ಲಿದ್ದ ಸಮಯದಲ್ಲಿ ರೆಕಾರ್ಡ್ ಮಾಡಿದ ಆಡಿಯೋ ಟೇಪ್‌ಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಂತಿಯಿಂದ ಇರುವಂತೆ ಮತ್ತು ಹಿಂಸಾಚಾರಕ್ಕೆ ಇಳಿಯದಂತೆ ಮನವಿ ಮಾಡುತ್ತಿದ್ದರು.
ಒಟ್ಟು 108 ದಿನಗಳ ಕಾಲ ಕಾಡಿನಲ್ಲಿ ಕಳೆದ ನಂತರ, ಅಂತಿಮವಾಗಿ ನವೆಂಬರ್ 15, 2000 ರಂದು ಡಾ. ರಾಜ್‌ಕುಮಾರ್ ಅವರು ಸುರಕ್ಷಿತವಾಗಿ ಬಿಡುಗಡೆಯಾದರು. ಅವರು ಬಿಡುಗಡೆಯಾದ ನಂತರ ಬೆಂಗಳೂರಿನಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು.

