
ಇಂಡಿಗೋ ವಿಮಾನ
ಲಕ್ನೋ-ದೆಹಲಿ ಇಂಡಿಗೋ ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ: ಶೌಚಾಲಯದಲ್ಲಿ ಪತ್ತೆಯಾಯ್ತು ಪತ್ರ!
ವಿಮಾನದ ಶೌಚಾಲಯದ ಒಳಗೆ "ಬಾಂಬ್" ಎಂದು ಬರೆದಿದ್ದ ಟಿಶ್ಯೂ ಪೇಪರ್ ಒಂದು ಪತ್ತೆಯಾಗಿದ್ದು, ಇದು ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಆದರೆ ತನಿಖೆಯ ಬಳಿಕ ಇದೊಂದು ಹುಸಿ ಬೆದರಿಕೆ ಎಂಬುದು ತಡವಾಗಿ ಬೆಳಕಿಗೆ ಬಂದಿದೆ.
ವಿಮಾನ ಹಾರಾಟ ಆರಂಭಿಸಲು ಕೆಲವೇ ಕ್ಷಣಗಳು ಬಾಕಿ ಇರುವಾಗ ಬಂದ ಹುಸಿ ಬಾಂಬ್ ಬೆದರಿಕೆಯಿಂದಾಗಿ ಲಕ್ನೋ-ದೆಹಲಿ ವಿಮಾನದ ಹಾರಾಟ ಶುಕ್ರವಾರ ತಡವಾಗಿ ಆರಂಭವಾದ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಸುಮಾರು 180 ಪ್ರಯಾಣಿಕರನ್ನು ಹೊತ್ತಿದ್ದ ಇಂಡಿಗೋ ಸಂಸ್ಥೆಗೆ ಸೇರಿದ ಈ ವಿಮಾನವು ಬೆಳಗ್ಗೆ 10.45 ಕ್ಕೆ ಲಕ್ನೋದಿಂದ ದೇಶದ ರಾಜಧಾನಿ ದೆಹಲಿಗೆ ಹೊರಡಬೇಕಿತ್ತು. ಆದರೆ, ವಿಮಾನದ ಸಿಬ್ಬಂದಿಗೆ ಬಾಂಬ್ ಬೆದರಿಕೆ ಇರುವ ಬಗ್ಗೆ ಕೊನೆ ಕ್ಷಣದಲ್ಲಿ ಮಾಹಿತಿ ಲಭ್ಯವಾಗಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಶೌಚಾಲಯದಲ್ಲಿ ಪತ್ತೆಯಾಯ್ತು ಪತ್ರ!
ವಿಮಾನದ ಶೌಚಾಲಯದ ಒಳಗೆ "ಬಾಂಬ್" ಎಂದು ಬರೆದಿದ್ದ ಟಿಶ್ಯೂ ಪೇಪರ್ ಒಂದು ಪತ್ತೆಯಾಗಿದ್ದು, ಇದು ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಆದರೆ ತನಿಖೆಯ ಬಳಿಕ ಇದೊಂದು ಕಿಡಿಗೇಡಿಗಳು ಮಾಡಿದ ಹುಸಿ ಬೆದರಿಕೆ ಎಂಬುದು ತಡವಾಗಿ ಬೆಳಕಿಗೆ ಬಂದಿದೆ ಎಂದು ಮತ್ತೊಂದು ಮೂಲಗಳು ಸ್ಪಷ್ಟಪಡಿಸಿವೆ.
ಭದ್ರತಾ ಸಿಬ್ಬಂದಿಯಿಂದ ತೀವ್ರ ಶೋಧ
ಬೆದರಿಕೆ ಕರೆ ಬರುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು, ವಿಮಾನವನ್ನು ತಕ್ಷಣವೇ ಏಪ್ರನ್‌ನಲ್ಲಿ (ವಿಮಾನ ನಿಲುಗಡೆ ಜಾಗ) ತಡೆಹಿಡಿದು, ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತಾ ಸಿಬ್ಬಂದಿ ವಿಮಾನದ ಮೂಲೆ ಮೂಲೆಗಳನ್ನು ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ತೀವ್ರ ತಪಾಸಣೆಗೆ ಒಳಪಡಿಸಿದರು. "ವಿವರವಾದ ತಪಾಸಣೆಯ ನಂತರ ವಿಮಾನದಲ್ಲಿ ಯಾವುದೇ ಬಾಂಬ್ ಅಥವಾ ಹಾನಿಕಾರಕ ವಸ್ತುಗಳು ಪತ್ತೆಯಾಗಿಲ್ಲ. ಸದ್ಯಕ್ಕೆ ಹೆಚ್ಚಿನ ಕಾನೂನು ಮತ್ತು ಭದ್ರತಾ ಪ್ರಕ್ರಿಯೆಗಳು ಮುಂದುವರಿದಿವೆ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

