
ಎಲ್‌ಪಿಜಿ ಗ್ರಾಹಕರಿಗೆ ಮಹತ್ವದ ಮಾಹಿತಿ: ಅಡುಗೆ ಅನಿಲ ಸಂಪರ್ಕಕ್ಕೆ ಬಯೋಮೆಟ್ರಿಕ್ ಇ-ಕೆವೈಸಿ ಕಡ್ಡಾಯ
ಗ್ರಾಹಕರು ತಮ್ಮ ಸಮೀಪದ ಎಲ್‌ಪಿಜಿ ವಿತರಕರನ್ನು ಖುದ್ದಾಗಿ ಭೇಟಿ ಮಾಡುವ ಮೂಲಕವೂ ಇ-ಕೆವೈಸಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಚಿವಾಲಯವು ಸಹಾಯವಾಣಿ ಸಂಖ್ಯೆಯನ್ನೂ ಬಿಡುಗಡೆ ಮಾಡಿದೆ.
ಗೃಹ ಬಳಕೆಯ ಅಡುಗೆ ಅನಿಲ ವಿತರಣೆಯಲ್ಲಿ ನಡೆಯುತ್ತಿರುವ ಅಕ್ರಮಗಳು ಹಾಗೂ ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಲು ದೇಶದ ಎಲ್ಲ ಎಲ್‌ಪಿಜಿ ಗ್ರಾಹಕರಿಗೆ ಬಯೋಮೆಟ್ರಿಕ್ ಆಧಾರ್ ಇ-ಕೆವೈಸಿ (e-KYC) ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ.
ಈ ಕುರಿತು ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಪ್ರತಿಯೊಬ್ಬ ಗ್ರಾಹಕರು ತಮ್ಮ ಆಧಾರ್ ದೃಢೀಕರಣವನ್ನು ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ಸೂಚಿಸಿದೆ.
ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡುವ ಅವಕಾಶ
ಗ್ರಾಹಕರು ಇ-ಕೆವೈಸಿ ಪ್ರಕ್ರಿಯೆಗಾಗಿ ಗ್ಯಾಸ್ ಏಜೆನ್ಸಿಗಳಿಗೆ ಅಲೆಯುವ ಅಗತ್ಯವಿಲ್ಲ. ಬದಲಾಗಿ, ಮನೆಯಲ್ಲೇ ಕುಳಿತು ಆಯಾ ತೈಲ ಕಂಪನಿಗಳ ಮೊಬೈಲ್ ಆ್ಯಪ್ ಹಾಗೂ ‘ಆಧಾರ್ ಫೇಸ್‌ಆರ್‌ಡಿ’ (Aadhaar FaceRD) ಅಪ್ಲಿಕೇಶನ್ ಬಳಸಿ ಮುಖದ ಗುರುತಿನ ಮೂಲಕ ದೃಢೀಕರಣವನ್ನು ಪೂರ್ಣಗೊಳಿಸಬಹುದು. ಇದಲ್ಲದೆ, ಗ್ರಾಹಕರು ತಮ್ಮ ಸಮೀಪದ ಎಲ್‌ಪಿಜಿ ವಿತರಕರನ್ನು ಖುದ್ದಾಗಿ ಭೇಟಿ ಮಾಡುವ ಮೂಲಕವೂ ಇ-ಕೆವೈಸಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಚಿವಾಲಯವು ಸಹಾಯವಾಣಿ ಸಂಖ್ಯೆಯನ್ನೂ ಬಿಡುಗಡೆ ಮಾಡಿದೆ.
ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ, ಹೋಟೆಲ್‌ಗಳು ಬಂದ್
ಮತ್ತೊಂದೆಡೆ, ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಯುದ್ಧದ ಪರಿಣಾಮವಾಗಿ ದೇಶಾದ್ಯಂತ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಅಗತ್ಯ ಪ್ರಮಾಣದಲ್ಲಿ ಗ್ಯಾಸ್ ಪೂರೈಕೆಯಾಗದ ಕಾರಣ, ಹಲವೆಡೆ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳು ಅನಿವಾರ್ಯವಾಗಿ ಬಾಗಿಲು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ.

