
ಓಂ ಬಿರ್ಲಾ ಪದಚ್ಯುತಿ ನಿರ್ಣಯಕ್ಕೆ ಸೋಲು: ಸಂಸತ್ತಿನಲ್ಲಿ ಆಡಳಿತ-ಪ್ರತಿಪಕ್ಷಗಳ ವಾಕ್ಸಮರ
ಸಚಿವ ಅಮಿತ್ ಶಾ ಭಾಷಣದ ಬಹುಪಾಲು ಸಮಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಲು ಬಳಸಿಕೊಂಡರು. ಅಧಿವೇಶನದ ವೇಳೆ ಹೆಚ್ಚಾಗಿ ವಿದೇಶ ಪ್ರವಾಸದಲ್ಲಿರುತ್ತಿದ್ದರು ಎಂದು ಕಿಡಿಕಾರಿದರು.
ಲೋಕಸಭೆಯ ಸಭಾಧ್ಯಕ್ಷ ಓಂ ಬಿರ್ಲಾ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಮತ್ತು ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಅಂತಿಮವಾಗಿ ಧ್ವನಿ ಮತದ ಮೂಲಕ ವಜಾಗೊಂಡಿದೆ.
ಪ್ರತಿಪಕ್ಷಗಳ ತೀವ್ರ ಪ್ರತಿಭಟನೆ, ಘೋಷಣೆಗಳು ಮತ್ತು ನಾಟಕೀಯ ಬೆಳವಣಿಗೆಗಳ ನಡುವೆಯೇ ಈ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಆಡಳಿತ ಪಕ್ಷವು ಸಭಾಧ್ಯಕ್ಷರ ಗೌರವವನ್ನು ಎತ್ತಿಹಿಡಿದರೆ, ಪ್ರತಿಪಕ್ಷಗಳು ತಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿ ಸಭಾತ್ಯಾಗ ಮಾಡಲಾಯಿತು.
ಸಭಾಧ್ಯಕ್ಷರ ಪದಚ್ಯುತಿ ಕೋರಿ ಕಾಂಗ್ರೆಸ್ ಸಂಸದ ಡಾ. ಮೊಹಮ್ಮದ್ ಜಾವೇದ್ ಮಂಡಿಸಿದ್ದ ನಿರ್ಣಯವನ್ನು ಸದನವು ಧ್ವನಿ ಮತದ ಮೂಲಕ ತಿರಸ್ಕರಿಸಲಾಯಿತು. ಇದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಸರ್ಕಾರದ ಪರವಾಗಿ ಸುದೀರ್ಘ ಉತ್ತರ ನೀಡಿದರು. ಅಮಿತ್ ಶಾ ಭಾಷಣದ ನಂತರ, ನಿಯಮದಂತೆ ನಿರ್ಣಯ ಮಂಡಿಸಿದ ಸಂಸದರಿಗೆ ಅಂತಿಮವಾಗಿ ಭಾಷಣ ಮಾಡಲು ಅವಕಾಶ ನೀಡಬೇಕಿತ್ತು. ಆದರೆ, ಯಾವುದೇ ಭಾಷಣಕ್ಕೆ ಅವಕಾಶ ನೀಡದೆ ನೇರವಾಗಿ ಧ್ವನಿ ಮತ ಪ್ರಕ್ರಿಯೆಯನ್ನು ಕೈಗೊಳ್ಳಲಾಯಿತು. ತಮಗೆ ಮಾತನಾಡಲು ಅವಕಾಶ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮೊಹಮ್ಮದ್ ಜಾವೇದ್, ಸಚಿವ ಅಮಿತ್ ಶಾ ತಮ್ಮ ಭಾಷಣದಲ್ಲಿ ಅಸಂಸದೀಯ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿ, ಕ್ಷಮೆಯಾಚನೆಗೆ ಒತ್ತಾಯಿಸಿದರು.
ಸಂಸತ್ತು ಮಾರುಕಟ್ಟೆಯಲ್ಲ
ಅವಿಶ್ವಾಸ ನಿರ್ಣಯದ ವಿರುದ್ಧ ಕಿಡಿಕಾರಿದ ಅಮಿತ್ ಶಾ, ಇದು ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ ಎಂದರು. ಕಳೆದ ನಾಲ್ಕು ದಶಕಗಳಲ್ಲಿ ಸಭಾಧ್ಯಕ್ಷರ ವಿರುದ್ಧ ಇಂತಹ ನಿರ್ಣಯ ಬಂದಿರಲಿಲ್ಲ. ಇದು ಸಾಮಾನ್ಯ ನಿರ್ಣಯವಲ್ಲ, ಇದು ನಮ್ಮ ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಹಾಕುತ್ತಿರುವ ಪ್ರಶ್ನೆ ಎಂದು ಕಿಡಿಕಾರಿದರು.
ಸಭಾಧ್ಯಕ್ಷ ಪೀಠವು ಕೇವಲ ಒಂದು ಆಸನವಲ್ಲ, ಅದು ಸಂಸತ್ತಿನ ಪಾಲಕ ಮತ್ತು ನ್ಯಾಯಾಧೀಶ ಸ್ಥಾನ. ಸಭಾಧ್ಯಕ್ಷರ ನಿರ್ಧಾರಗಳು ಇಷ್ಟವಾಗದಿರಬಹುದು. ಆದರೆ ಅವುಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ನಿಯಮಗಳ ಪ್ರಕಾರ ಸಭಾಧ್ಯಕ್ಷರ ನಿರ್ಧಾರವೇ ಅಂತಿಮ. ಒಂದು ವೇಳೆ ಸಭಾಧ್ಯಕ್ಷರ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದರೆ, ಸಂಸತ್ತು ಹೇಗೆ ನಡೆಯಲು ಸಾಧ್ಯ? ಈ ಸದನವು ಮಾರುಕಟ್ಟೆಯಲ್ಲ , ಇಲ್ಲಿ ಎಲ್ಲರೂ ನಿಯಮಗಳಿಗೆ ಬದ್ಧರಾಗಿರಬೇಕು ಎಂದು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
ಪ್ರತಿಪಕ್ಷಗಳು ತಮ್ಮ ಭಾಷಣಗಳನ್ನು ಕಡತದಿಂದ ತೆಗೆದುಹಾಕಲಾಗುತ್ತಿದೆ ಎಂಬ ಆರೋಪ ಮಾಡುತ್ತಿವೆ. ಕಡತದಿಂದ ತೆಗೆದುಹಾಕುವ ಅಧಿಕಾರ ಸಭಾಧ್ಯಕ್ಷರಿಗೆ ಸಂವಿಧಾನಬದ್ಧವಾಗಿ ಸಿಕ್ಕಿದೆ. ಅಸಂಸದೀಯ ಪದಗಳನ್ನು ಬಳಸಿದರೆ, ನಿಯಮಬಾಹಿರವಾಗಿ ಮಾತನಾಡಿದರೆ ಅದನ್ನು ಉಳಿಸಿಕೊಳ್ಳಲು ಸಾಧ್ಯವೇ? ಈ ನಿಯಮಗಳು ಮಾಜಿ ಪ್ರಧಾನಿ ಜವಹಾರಲಾಲ್ ನೆಹರೂ ಕಾಲದಿಂದಲೂ ಜಾರಿಯಲ್ಲಿವೆ. ಪ್ರತಿಪಕ್ಷಗಳಿಗೆ ಹಕ್ಕುಗಳಿವೆ ನಿಜ, ಆದರೆ ನಿಯಮಕ್ಕಿಂತ ಮಿಗಿಲಾದ ವಿಶೇಷ ಹಕ್ಕುಗಳನ್ನು ಹೊಂದಿಲ್ಲ. ಇದು 1975ರ ತುರ್ತು ಪರಿಸ್ಥಿತಿಯಲ್ಲ ಎಂದು ಟೀಕಾಪ್ರಹಾರ ನಡೆಸಿದರು.
ಸಭಾಧ್ಯಕ್ಷರ ನೈತಿಕತೆ ಶ್ಲಾಘನೆ
ಸಭಾಧ್ಯಕ್ಷ ಓಂ ಬಿರ್ಲಾ ಪ್ರದರ್ಶಿಸಿದ ಸಂಸದೀಯ ನೈತಿಕತೆಯನ್ನು ಶ್ಲಾಘಿಸಿದ ಅಮಿತ್ ಶಾ, ಓಂ ಬಿರ್ಲಾ ಅವರು ತಮ್ಮ ವಿರುದ್ಧ ನೋಟಿಸ್ ಸಲ್ಲಿಕೆಯಾದ ಮರುಕ್ಷಣವೇ ಪೀಠದಿಂದ ಕೆಳಗಿಳಿದರು. ಇದು ಅವರ ಉನ್ನತ ನೈತಿಕ ಮೌಲ್ಯಗಳನ್ನು ತೋರಿಸುತ್ತದೆ. ಇಂತಹ ನಾಯಕನಿಗೆ ಪ್ರತಿಪಕ್ಷಗಳು ನೈತಿಕತೆಯ ಪಾಠ ಮಾಡುವುದು ಹಾಸ್ಯಾಸ್ಪದ. ಪ್ರತಿಪಕ್ಷಗಳು ನೀಡಿದ ನೋಟಿಸ್‌ಗಳಲ್ಲಿ ತಾಂತ್ರಿಕ ದೋಷಗಳಿದ್ದವು. ಅಂತಹ ದೋಷಪೂರಿತ ನೋಟಿಸ್ ಅನ್ನು ಬಿರ್ಲಾ ಅವರು ತಿರಸ್ಕರಿಸುವ ಬದಲು, ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡುವ ಮೂಲಕ ತಮ್ಮ ಔದಾರ್ಯ ಮೆರೆದಿದ್ದಾರೆ ಎಂದರು.
ರಾಹುಲ್ ಗಾಂಧಿ ವಿರುದ್ಧ ಕಿಡಿ
ಅಮಿತ್ ಶಾ ಭಾಷಣದ ಬಹುಪಾಲು ಸಮಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಲು ಬಳಸಿಕೊಂಡರು. ರಾಹುಲ್ ಗಾಂಧಿ ಅವರು ತಮಗೆ ಮಾತನಾಡಲು ಅವಕಾಶ ಸಿಗುತ್ತಿಲ್ಲ ಎಂಬುದಾಗಿ ದೂರುತ್ತಾರೆ. ಆದರೆ ಅವರ ಹಾಜರಾತಿಯನ್ನು ಗಮನಿಸಿದರೆ 17ನೇ ಲೋಕಸಭೆಯಲ್ಲಿ ಅವರ ಹಾಜರಾತಿ ಶೇ. 51 ಮಾತ್ರ ಇದೆ. 16ನೇ ಲೋಕಸಭೆಯಲ್ಲಿ ಶೇ. 52 ಮತ್ತು 15ನೇ ಲೋಕಸಭೆಯಲ್ಲಿ ಕೇವಲ ಶೇ. 45 ಹಾಜರಾತಿ ಹೊಂದಿದ್ದಾರೆ. ಸಂಸತ್ತಿನಲ್ಲಿ ಇಲ್ಲದ ಸದಸ್ಯರಿಗೆ ಮಾತನಾಡಲು ಹೇಗೆ ಸಾಧ್ಯ? ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ರಾಹುಲ್ ಗಾಂಧಿ ಅವರು ಜರ್ಮನಿ ಅಥವಾ ಇತರ ವಿದೇಶಿ ಪ್ರವಾಸಗಳಲ್ಲಿರುತ್ತಾರೆ. ಪ್ರಮುಖ ಚರ್ಚೆಗಳು ನಡೆಯುವಾಗ ಅವರು ದೇಶದಲ್ಲಿ ಇರುವುದಿಲ್ಲ. ಅಧಿವೇಶನದ ಅವಧಿಯಲ್ಲಿ ವಿದೇಶದಲ್ಲಿರುವ ಅವರು, ಇಲ್ಲಿ ಧ್ವನಿ ಹತ್ತಿಕ್ಕಲಾಗುತ್ತಿದೆ ಎಂದು ಹೇಳುವುದು ಎಷ್ಟು ಸರಿ? ಎಂದು ವ್ಯಂಗ್ಯವಾಡಿದರು.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಅಥವಾ ಕೇಂದ್ರ ಬಜೆಟ್‌ನಂತಹ ಪ್ರಮುಖ ವಿಷಯಗಳ ಚರ್ಚೆಯಲ್ಲಿ ರಾಹುಲ್ ಗಾಂಧಿ ಅವರು ಎಂದೂ ಸಕ್ರಿಯವಾಗಿ ಭಾಗವಹಿಸಿಲ್ಲ. ಸದನದ ಒಳಗೆ ಪ್ರಧಾನಿಯವರನ್ನು ತಬ್ಬಿಕೊಳ್ಳುವುದು, ಕಣ್ಣು ಮಿಟುಕಿಸುವುದು ಮತ್ತು ಸದಸ್ಯರ ಕಡೆಗೆ ಫ್ಲೈಯಿಂಗ್ ಕಿಸ್ ನೀಡುವುದು ಸಂಸದೀಯ ನಡವಳಿಕೆಯೇ? ಇದು ಸಂಸತ್ತಿನ ಘನತೆಗೆ ತಕ್ಕುದಾದದ್ದೇ?" ಎಂದು ಹೇಳಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಕೆ.ಸಿ. ವೇಣುಗೋಪಾಲ್ ಆಕ್ರೋಶ
ಅಮಿತ್ ಶಾ ಅವರು ರಾಹುಲ್ ಗಾಂಧಿಯ ವೈಯಕ್ತಿಕ ವಿವರಗಳನ್ನು ಮತ್ತು ಹಾಜರಾತಿಯನ್ನು ಪ್ರಸ್ತಾಪಿಸಿದಾಗ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ಸಭಾಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯೋ ಅಥವಾ ಪ್ರತಿಪಕ್ಷದ ನಾಯಕರ ವಿರುದ್ಧದ ಚರ್ಚೆಯೋ? ಗೃಹ ಸಚಿವರು ವಿಷಯಾಂತರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

