2004ರ ನಂತರ ಇದೇ ಮೊದಲು: ಪ್ರಧಾನಿ ಉತ್ತರವಿಲ್ಲದೆಯೇ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯಕ್ಕೆ ಅಂಗೀಕಾರ
x

2004ರ ನಂತರ ಇದೇ ಮೊದಲು: ಪ್ರಧಾನಿ ಉತ್ತರವಿಲ್ಲದೆಯೇ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯಕ್ಕೆ ಅಂಗೀಕಾರ

ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯವನ್ನು ಲೋಕಸಭೆ ಅಂಗೀಕರಿಸಿದರೂ, ಪ್ರಧಾನಿ ಪ್ರತಿಕ್ರಿಯೆ ತಪ್ಪಿಸಿಕೊಂಡ ಕ್ರಮಕ್ಕೆ ವಿರೋಧಪಕ್ಷಗಳ ಆಕ್ರೋಶ, ಸಂಸತ್ತಿನ ಸಂಪ್ರದಾಯಕ್ಕೆ ಧಕ್ಕೆ ಎನ್ನುವ ಟೀಕೆಯೂ ಕೇಳಿ ಬಂದಿದೆ.


Click the Play button to hear this message in audio format

ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಗುರುವಾರ ಮಹತ್ವದ ಮತ್ತು ಅಪರೂಪದ ವಿದ್ಯಮಾನವೊಂದು ನಡೆದಿದೆ. 2004ರ ನಂತರ ಇದೇ ಮೊದಲ ಬಾರಿಗೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣಕ್ಕೆ ಪ್ರಧಾನ ಮಂತ್ರಿಗಳ ಉತ್ತರವಿಲ್ಲದೆಯೇ ಲೋಕಸಭೆಯು 'ವಂದನಾ ನಿರ್ಣಯ'ವನ್ನು ಅಂಗೀಕರಿಸಿದೆ.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರವೇ ಉತ್ತರ ನೀಡುವ ನಿರೀಕ್ಷೆಯಿತ್ತು. ಆದರೆ, ವಿರೋಧ ಪಕ್ಷಗಳ ಸದಸ್ಯರ ಸತತ ಘೋಷಣೆ ಮತ್ತು ಗದ್ದಲದ ಕಾರಣ, ಸ್ಪೀಕರ್ ಕಲಾಪವನ್ನು ಮುಂದೂಡಿದ್ದರು. ಗುರುವಾರವೂ ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಪ್ರಧಾನಿಗಳ ಭಾಷಣವಿಲ್ಲದೆಯೇ ನಿರ್ಣಯವನ್ನು ಅಂಗೀಕರಿಸಲಾಯಿತು.

ನಡೆದಿದ್ದೇನು?

ಗುರುವಾರ ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗುತ್ತಿದ್ದಂತೆಯೇ, 'ಇಂಡಿಯಾ' (INDIA) ಒಕ್ಕೂಟದ ಸಂಸದರು ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಈ ಗದ್ದಲದ ನಡುವೆಯೇ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು, ಜನವರಿ 28 ರಂದು ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ ಭಾಷಣದ ವಂದನಾ ನಿರ್ಣಯ ಓದಿದರು. ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಧ್ವನಿ ಮತದ ಮೂಲಕ ಈ ನಿರ್ಣಯಕ್ಕೆ ಅಂಗೀಕಾರ ಪಡೆಯಲಾಯಿತು. ಪ್ರತಿಭಟನೆ ಮುಂದುವರಿದ ಕಾರಣ ಸ್ಪೀಕರ್ ಮಧ್ಯಾಹ್ನ 2 ಗಂಟೆಯವರೆಗೆ ಕಲಾಪವನ್ನು ಮುಂದೂಡಿದರು.

ವಿಪಕ್ಷಗಳ ಆಕ್ರೋಶಕ್ಕೆ ಕಾರಣವೇನು?

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನಿರಾಕರಿಸಲಾಗಿದೆ ಎಂಬುದು ಪ್ರತಿಭಟನೆಯ ಮುಖ್ಯ ಕಾರಣವಾಗಿತ್ತು. 2020ರ ಚೀನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಜನರಲ್ ಎಂ.ಎಂ. ನರವಣೆ ಅವರ ಅಪ್ರಕಟಿತ ಆತ್ಮಚರಿತ್ರೆಯ ಭಾಗಗಳನ್ನು ಸಂಸತ್ತಿನಲ್ಲಿ ಉಲ್ಲೇಖಿಸಲು ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸರ್ಕಾರ ತಡೆಯೊಡ್ಡಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಇದಲ್ಲದೆ, ಅಶಿಸ್ತಿನ ವರ್ತನೆ ತೋರಿದ ಆರೋಪದ ಮೇಲೆ ಮಂಗಳವಾರ ಎಂಟು ಕಾಂಗ್ರೆಸ್ ಸಂಸದರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಿದ್ದು, ಸರ್ಕಾರ ಮತ್ತು ವಿಪಕ್ಷಗಳ ನಡುವಿನ ಸಂಘರ್ಷವನ್ನು ತಾರಕಕ್ಕೇರಿಸಿತ್ತು.

2004ರಲ್ಲಿ ಏನಾಗಿತ್ತು?

ಸದ್ಯದ ಪರಿಸ್ಥಿತಿಯು 2004ರ ಘಟನೆಯನ್ನು ನೆನಪಿಸಿದೆ. ಅಂದು ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರ ನೀಡಲು ಮುಂದಾದಾಗ, ಬಿಜೆಪಿ ಸದಸ್ಯರು ಅಡ್ಡಿಪಡಿಸಿದ್ದರು. ಹೀಗಾಗಿ ಅಂದು ಕೂಡ ಪ್ರಧಾನಿಗಳ ಉತ್ತರವಿಲ್ಲದೆಯೇ ನಿರ್ಣಯವನ್ನು ಅಂಗೀಕರಿಸಲಾಗಿತ್ತು.

ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಮಾರ್ಚ್ 10, 2005 ರಂದು ಮಾತನಾಡಿದ್ದ ಮನಮೋಹನ್ ಸಿಂಗ್ ಅವರು, "ಜೂನ್ 10, 2004 ರಂದು ನನಗೆ ವಂದನಾ ನಿರ್ಣಯಕ್ಕೆ ಉತ್ತರ ನೀಡಲು ಅವಕಾಶ ನೀಡಲಿಲ್ಲ," ಎಂದು ಪ್ರಸ್ತಾಪಿಸಿದ್ದ ದೃಶ್ಯ ಆ ವಿಡಿಯೋದಲ್ಲಿದೆ.

Read More
Next Story