ಕೊಲ್ಕತ್ತಾ ಏರ್‌ಪೋರ್ಟ್‌ನಲ್ಲಿ 136 ವರ್ಷದ ಮಸೀದಿಗೆ ಬೀಗ; ಹೊಸ ವಿವಾದದ ಅಸಲಿ ಕಥೆ ಏನು?
ರಾಷ್ಟ್ರೀಯ ಭದ್ರತೆ, ತಾಂತ್ರಿಕ ಅಡಚಣೆಗಳು ಹಾಗೂ ಧಾರ್ಮಿಕ ಹಕ್ಕುಗಳ ನಡುವಿನ ಈ ದಶಕಗಳ ಹಳೆಯ ಸಂಘರ್ಷ ಈಗ ಹೊಸ ತಿರುವು ಪಡೆದುಕೊಂಡಿದೆ.
ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದೊಳಗೆ ಇರುವ 136 ವರ್ಷಗಳ ಇತಿಹಾಸವಿರುವ ಗೌರಿಪುರ ಜಾಮಾ ಮಸೀದಿ (ಬ್ಯಾಂಕ್ರಾ ಮಸೀದಿ) ಸ್ಥಳಾಂತರದ ಬೇಡಿಕೆ ಮತ್ತು ಸಾರ್ವಜನಿಕ ಪ್ರವೇಶ ನಿರ್ಬಂಧ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ.
ರಾಷ್ಟ್ರೀಯ ಭದ್ರತೆ, ತಾಂತ್ರಿಕ ಅಡಚಣೆಗಳು ಹಾಗೂ ಧಾರ್ಮಿಕ ಹಕ್ಕುಗಳ ನಡುವಿನ ಈ ದಶಕಗಳ ಹಳೆಯ ಸಂಘರ್ಷ ಈಗ ಹೊಸ ತಿರುವು ಪಡೆದುಕೊಂಡಿದೆ.
ಈ ವಿವಾದ ಸೃಷ್ಟಿಯಾದ ಬಳಿಕ ಮೂಡಿದ ಮೊದಲ ಪ್ರಶ್ನೆಯೇ "ಬಿಗಿ ಭದ್ರತೆಯ ವಿಮಾನ ನಿಲ್ದಾಣದ ರನ್ವೇ ಪಕ್ಕದಲ್ಲೇ ಮಸೀದಿ ಕಟ್ಟಲು ಯಾರು ಅನುಮತಿ ಕೊಟ್ಟರು?" ಎಂಬುದು. ಆದರೆ, ಇತಿಹಾಸದ ಪುಟಗಳನ್ನು ತಿರುವಿದರೆ ಸತ್ಯವೇ ಬೇರೆಯಾಗಿದೆ. ಇಲ್ಲಿ ವಿಮಾನ ನಿಲ್ದಾಣದ ಒಳಗೆ ಮಸೀದಿ ನಿರ್ಮಾಣವಾಗಿಲ್ಲ; ಬದಲಾಗಿ ಮಸೀದಿಯ ಸುತ್ತಲೂ ವಿಮಾನ ನಿಲ್ದಾಣವು ಬೆಳೆದಿದೆ.
ತಾಂತ್ರಿಕ ಸವಾಲುಗಳು ಯಾವುವು?
ಅಂದಿನ ರಾಜಕೀಯ ಹಾಗೂ ಸಾಮಾಜಿಕ ತಾರ್ಕಿಕತೆಗೆ ತಕ್ಕಂತೆ ಮಸೀದಿಯನ್ನು ಉಳಿಸಿಕೊಳ್ಳಲಾಯಿತಾದರೂ, ಇಂದು ಅದು ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಅತ್ಯಂತ ದೊಡ್ಡ ತಾಂತ್ರಿಕ ತಲೆನೋವಾಗಿ ಪರಿಣಮಿಸಿದೆ.
ಅಂತರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ (ICAO) ಸುರಕ್ಷತಾ ಮಾನದಂಡಗಳ ಪ್ರಕಾರ, ರನ್ವೇಯಿಂದ ಯಾವುದೇ ಕಟ್ಟಡವು ಕನಿಷ್ಠ 240 ಮೀಟರ್ ದೂರದಲ್ಲಿರಬೇಕು. ಆದರೆ, ಈ ಮಸೀದಿ ಎರಡನೇ ರನ್ವೇಯಿಂದ ಕೇವಲ 165 ಮೀಟರ್ ದೂರದಲ್ಲಿದೆ. ಅಂದರೆ ನಿಯಮಗಳಿಗಿಂತ 75 ಮೀಟರ್ ಹತ್ತಿರದಲ್ಲಿದೆ. ಈ ತಾಂತ್ರಿಕ ಅಡಚಣೆಯಿಂದಾಗಿ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಎರಡು ರನ್ವೇಗಳಿದ್ದರೂ ಎರಡನೇ ರನ್ವೇಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಲು ಸಾಧ್ಯವಾಗುತ್ತಿಲ್ಲ. ಇದರ ರನ್ವೇ ಉದ್ದ 2,832 ಮೀಟರ್ಗೆ ಸೀಮಿತವಾಗಿದ್ದು, ಮುಖ್ಯ ರನ್ವೇ (3,633 ಮೀಟರ್) ಹೋಲಿಕೆಯಲ್ಲಿ ತುಂಬಾ ಚಿಕ್ಕದಾಗಿದೆ.
ಈಗ ವಿವಾದ ಭುಗಿಲೇಳಲು ಕಾರಣವೇನು? ಎಂಬುದನ್ನು ನೋಡುವುದಾದರೆ, ರಾಷ್ಟ್ರೀಯ ಭದ್ರತಾ ಪ್ರಶ್ನೆ. ಇಷ್ಟು ದಿನ ಕೇವಲ ತಾಂತ್ರಿಕ ಅಡಚಣೆಯಾಗಿದ್ದ ಈ ಮಸೀದಿ, ಇತ್ತೀಚಿನ ದಿನಗಳಲ್ಲಿ ದೇಶದ ಆಂತರಿಕ ಭದ್ರತೆಯ ದೊಡ್ಡ ಚರ್ಚಾ ವಿಷಯವಾಗಿದೆ.
ಪ್ರತಿದಿನ ಸುಮಾರು 50 ಹಾಗೂ ಪ್ರತಿ ಶುಕ್ರವಾರದ ಪ್ರಾರ್ಥನೆಗೆ (ನಮಾಜ್) 80ಕ್ಕೂ ಹೆಚ್ಚು ಹೊರಗಿನ ಮುಸ್ಲಿಮರು ಕೇವಲ ಆಧಾರ್ ಕಾರ್ಡ್ ಪ್ರದರ್ಶಿಸಿ ಈ ಹೈ-ಸೆಕ್ಯುರಿಟಿ ವಲಯದೊಳಗೆ ಪ್ರವೇಶಿಸುತ್ತಿದ್ದರು. ವಿಮಾನ ನಿಲ್ದಾಣದ ನಿಯಮಗಳ ಪ್ರಕಾರ ಕಟ್ಟುನಿಟ್ಟಾದ ಬಯೋಮೆಟ್ರಿಕ್ ತಪಾಸಣೆ ಇಲ್ಲದೆ ಸಾರ್ವಜನಿಕರಿಗೆ ಇಷ್ಟು ಸುಲಭವಾಗಿ ಪ್ರವೇಶ ನೀಡುವುದು ಗಂಭೀರ ಭದ್ರತಾ ಲೋಪ ಎಂದು ಕೇಂದ್ರ ಭದ್ರತಾ ಸಂಸ್ಥೆಗಳು ಎಚ್ಚರಿಸಿದ್ದವು. ಈ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ಮಸೀದಿಗೆ ಹೊರಗಿನ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿದೆ.

