ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ: ಕಾಶ್ಮೀರದಲ್ಲಿ ಬಿಗಿ ಭದ್ರತೆ, ಶಾಲಾ-ಕಾಲೇಜು ಬಂದ್
x

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಹತ್ಯೆಯ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಕಾನ್ಸರ್ಟಿನಾ ವೈರ್ ಬಳಿ ಗಸ್ತು ತಿರುಗುತ್ತಿರುವ ಭದ್ರತಾ ಸಿಬ್ಬಂದಿ.

ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ: ಕಾಶ್ಮೀರದಲ್ಲಿ ಬಿಗಿ ಭದ್ರತೆ, ಶಾಲಾ-ಕಾಲೇಜು ಬಂದ್

ಕಾಶ್ಮೀರದ ಪ್ರಮುಖ ವಾಣಿಜ್ಯ ಕೇಂದ್ರವಾದ ಲಾಲ್ ಚೌಕ್‌ನಲ್ಲಿರುವ ಐತಿಹಾಸಿಕ 'ಘಂಟಾ ಘರ್' (ಗಡಿಯಾರ ಗೋಪುರ) ಸುತ್ತಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಸಂಪೂರ್ಣವಾಗಿ ಸೀಲ್ ಮಾಡಲಾಗಿದೆ.


Click the Play button to hear this message in audio format

ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಖಂಡಿಸಿ ಕಾಶ್ಮೀರದಾದ್ಯಂತ ಭಾರಿ ಪ್ರತಿಭಟನೆಗಳು ಭುಗಿಲೆದ್ದಿರುವ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳು ಸೋಮವಾರ (ಮಾರ್ಚ್ 2) ಹಲವೆಡೆ ಬಿಗಿ ನಿರ್ಬಂಧಗಳನ್ನು ಹೇರಿದ್ದಾರೆ. ಜನರ ಸಂಚಾರವನ್ನು ಸೀಮಿತಗೊಳಿಸಲಾಗಿದ್ದು, ಎರಡು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ದಂತಿಗಳನ್ನು ತಡೆಯಲು ಮೊಬೈಲ್ ಇಂಟರ್ನೆಟ್ ಸೇವೆಯ ವೇಗವನ್ನು ಕಡಿತಗೊಳಿಸಿ ಆದೇಶ ಹೊರಡಿಸಲಾಗಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಖಮೇನಿ ಹತ್ಯೆಯಾಗಿದ್ದು, ಇದು ಕಾಶ್ಮೀರ ಸೇರಿದಂತೆ ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕಣಿವೆ ರಾಜ್ಯದಲ್ಲಿ ಹೈ ಅಲರ್ಟ್ ಮತ್ತು ಭದ್ರತೆ

ಕಾಶ್ಮೀರದ ಪ್ರಮುಖ ವಾಣಿಜ್ಯ ಕೇಂದ್ರವಾದ ಲಾಲ್ ಚೌಕ್‌ನಲ್ಲಿರುವ ಐತಿಹಾಸಿಕ 'ಘಂಟಾ ಘರ್' (ಗಡಿಯಾರ ಗೋಪುರ) ಸುತ್ತಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಸಂಪೂರ್ಣವಾಗಿ ಸೀಲ್ ಮಾಡಲಾಗಿದೆ. ಪ್ರತಿಭಟನಾಕಾರರು ಒಟ್ಟುಗೂಡುವುದನ್ನು ತಡೆಯಲು ನಗರದ ಪ್ರಮುಖ ಕೂಡುರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಶನಿವಾರ ಟೆಹ್ರಾನ್‌ನಲ್ಲಿ ನಡೆದ ವಾಯುದಾಳಿಯಲ್ಲಿ ಖಮೇನಿ ಹತ್ಯೆಯಾಗಿದ್ದಾರೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ಭಾನುವಾರ ಖಚಿತಪಡಿಸಿತ್ತು. ಸುಮಾರು 15 ಲಕ್ಷ ಶಿಯಾ ಮುಸ್ಲಿಮರಿರುವ ಕಾಶ್ಮೀರದ ಲಾಲ್ ಚೌಕ್, ಸೈದಾ ಕಡಲ್, ಬದ್ಗಾಮ್, ಬಂಡಿಪೋರಾ, ಅನಂತನಾಗ್ ಮತ್ತು ಪುಲ್ವಾಮಾಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆಗಳು ನಡೆದಿವೆ. ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಎದೆ ಬಡಿದುಕೊಂಡು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಮುಷ್ಕರಕ್ಕೆ ಕರೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ಬಂದ್

ಮುತಾಹಿದಾ ಮಜ್ಲಿಸ್-ಎ-ಉಲೇಮಾ (ಎಂಎಂಯು) ಅಧ್ಯಕ್ಷ ಮಿರ್ವೈಜ್ ಉಮರ್ ಫಾರೂಕ್ ಅವರು ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದು, ಜನರು ಒಗ್ಗಟ್ಟು ಮತ್ತು ಘನತೆಯಿಂದ ಸಂಪೂರ್ಣ ಶಾಂತಿಯುತವಾಗಿ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಮುಷ್ಕರಕ್ಕೆ ಪ್ರತಿಪಕ್ಷ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಖಾಸಗಿ ಶಾಲೆಗಳು ಸೇರಿದಂತೆ ಕಣಿವೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ಎರಡು ದಿನಗಳ ಕಾಲ ಮುಚ್ಚಲು ಆಡಳಿತ ಮಂಡಳಿ ನಿರ್ಧರಿಸಿದೆ. ಶಿಯಾ ಪ್ರಾಬಲ್ಯವಿರುವ ಕಣಿವೆಯ ಇತರ ಜಿಲ್ಲೆಗಳಲ್ಲೂ ಇದೇ ರೀತಿಯ ನಿರ್ಬಂಧಗಳನ್ನು ವಿಧಿಸಲಾಗಿದೆ.

ಇಂಟರ್ನೆಟ್ ವೇಗ ಕಡಿತ ಹಾಗೂ ಮಾಧ್ಯಮಗಳಿಗೆ ಮಾರ್ಗಸೂಚಿ

ಪ್ರತಿಭಟನೆಗಳ ಕಾವು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಕಾಶ್ಮೀರದಾದ್ಯಂತ ಸೋಮವಾರ ಮೊಬೈಲ್ ಇಂಟರ್ನೆಟ್ ವೇಗವನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ. ಆನ್‌ಲೈನ್ ಮೂಲಕ ಪ್ರಚೋದನಕಾರಿ ಸಂದೇಶಗಳು ಹರಡುವುದನ್ನು ತಡೆಯಲು ಮತ್ತು ಶಾಂತಿ ಕಾಪಾಡಲು ಎಲ್ಲಾ ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ, ಕಾಶ್ಮೀರ ಪೊಲೀಸರು ಮಾಧ್ಯಮ ಸಂಸ್ಥೆಗಳು ಮತ್ತು ಸುದ್ದಿ ವೇದಿಕೆಗಳಿಗೆ ವಿಶೇಷ ಮಾರ್ಗಸೂಚಿಯನ್ನು ಹೊರಡಿಸಿದ್ದು, ವರದಿಗಾರಿಕೆಯಲ್ಲಿ ಅತ್ಯುನ್ನತ ಜವಾಬ್ದಾರಿ ಮತ್ತು ವೃತ್ತಿಪರತೆಯನ್ನು ಕಾಯ್ದುಕೊಳ್ಳುವಂತೆ ಕೋರಿದ್ದಾರೆ. ಅಧಿಕೃತ ಮೂಲಗಳಿಂದ ದೃಢಪಡಿಸಿಕೊಳ್ಳದೆ ಯಾವುದೇ ಮಾಹಿತಿ, ಊಹಾಪೋಹ ಅಥವಾ ವದಂತಿಗಳನ್ನು ಪ್ರಕಟಿಸದಂತೆ ತಾಕೀತು ಮಾಡಲಾಗಿದೆ. ಸಾರ್ವಜನಿಕರಲ್ಲಿ ಅನಗತ್ಯ ಭೀತಿಯನ್ನು ಸೃಷ್ಟಿಸುವಂತಹ ಪ್ರಚೋದನಕಾರಿ ತಲೆಬರಹಗಳನ್ನು ನೀಡದಂತೆ ಎಚ್ಚರಿಕೆ ನೀಡಲಾಗಿದ್ದು, ಸಾರ್ವಜನಿಕ ನಂಬಿಕೆಯನ್ನು ಕಾಯ್ದುಕೊಳ್ಳಲು ನಿಖರವಾದ ವರದಿಗಾರಿಕೆ ಅತ್ಯಗತ್ಯ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Read More
Next Story