
ಸಾಂದರ್ಭಿಕ ಚಿತ್ರ
ನಡೆಯದ ಚುನಾವಣೆ; ಹಣಕಾಸು ಆಯೋಗದ ಅನುದಾನಕ್ಕೆ ಕರ್ನಾಟಕದ ಜಿ.ಪಂ, ತಾ.ಪಂ.ಗಳು ಅನರ್ಹ: ಕೇಂದ್ರ
ಕೇಂದ್ರ ಸರ್ಕಾರವು 2020-21ರಿಂದ 2024-25ರ ವರೆಗಿನ ಹಣಕಾಸು ಆಯೋಗದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅನುದಾನದ ಎಲ್ಲ ಕಂತುಗಳನ್ನು ರಾಜ್ಯದ ಅರ್ಹ ಗ್ರಾಮ ಪಂಚಾಯಿತಿಗಳಿಗೆ ಈಗಾಗಲೇ ಬಿಡುಗಡೆ ಮಾಡಿದೆ.
ಕರ್ನಾಟಕ ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳು 15ನೇ ಹಣಕಾಸು ಆಯೋಗದ 2025-26ನೇ ಸಾಲಿನ ಅನುದಾನವನ್ನು ಪಡೆಯಲು ಸಂಪೂರ್ಣವಾಗಿ ಅನರ್ಹವಾಗಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಳಿದ ಪ್ರಶ್ನೆಗೆ ಕೇಂದ್ರ ಪಂಚಾಯತ್‌ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಅವರು ಲಿಖಿತ ಉತ್ತರ ನೀಡಿದ್ದಾರೆ. ಈ ಅನರ್ಹತೆಗೆ ಪ್ರಮುಖ ಕಾರಣವೆಂದರೆ, ರಾಜ್ಯದಲ್ಲಿ 2021ರ ಫೆಬ್ರವರಿಯಿಂದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸದೆ ಇರುವುದು ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.
2025-26ನೇ ಸಾಲಿನ ಕಂತುಗಳ ತಡೆ
ಕೇಂದ್ರ ಸರ್ಕಾರವು 2020-21ರಿಂದ 2024-25ರ ವರೆಗಿನ ಹಣಕಾಸು ಆಯೋಗದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅನುದಾನದ ಎಲ್ಲ ಕಂತುಗಳನ್ನು ರಾಜ್ಯದ ಅರ್ಹ ಗ್ರಾಮ ಪಂಚಾಯಿತಿಗಳಿಗೆ ಈಗಾಗಲೇ ಬಿಡುಗಡೆ ಮಾಡಿದೆ. ಆದರೆ, ಪ್ರಸ್ತುತ 2025-26ನೇ ಸಾಲಿನ ಎರಡು ಕಂತುಗಳನ್ನು ಕೇಂದ್ರವು ರಾಜ್ಯಕ್ಕೆ ಬಿಡುಗಡೆ ಮಾಡಿಲ್ಲ. ಕೇಂದ್ರವು ಈ ಹಿಂದೆ ಬಿಡುಗಡೆ ಮಾಡಿದ್ದ ಮೊತ್ತವನ್ನು ರಾಜ್ಯ ಸರ್ಕಾರವು ಸಕಾಲದಲ್ಲಿ ಪಂಚಾಯಿತಿಗಳಿಗೆ ವರ್ಗಾವಣೆ ಮಾಡಿರಲಿಲ್ಲ. ಅಷ್ಟೇ ಅಲ್ಲದೆ, ವಿಳಂಬಕ್ಕಾಗಿ ಪಾವತಿಸಬೇಕಿದ್ದ ದಂಡದ ಮೊತ್ತವನ್ನೂ ಕೂಡ ರಾಜ್ಯ ಸರ್ಕಾರ ಪಾವತಿಸಿಲ್ಲ ಎಂಬುದು ಅನುದಾನ ತಡೆಹಿಡಿಯಲು ಮತ್ತೊಂದು ಪ್ರಮುಖ ಕಾರಣವಾಗಿದೆ.
ಕಾರ್ಯಾಚರಣೆ ಮಾರ್ಗಸೂಚಿಯ ನಿಯಮಗಳು
ಹಣಕಾಸು ಆಯೋಗದ ಅನುದಾನಗಳ ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು 2021ರಲ್ಲಿ ಬಿಡುಗಡೆ ಮಾಡಿರುವ ಕಾರ್ಯಾಚರಣೆ ಮಾರ್ಗಸೂಚಿಯ ಪ್ರಕಾರ, ಪ್ರತಿ ಹಣಕಾಸು ವರ್ಷದಲ್ಲಿ ಒಟ್ಟು ಎರಡು ಕಂತುಗಳಲ್ಲಿ ರಾಜ್ಯಗಳಿಗೆ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. ಹೊಸ ಕಂತಿನ ಹಣ ಬಿಡುಗಡೆಯಾಗಬೇಕಾದರೆ, ಹಿಂದಿನ ಕಂತಿನಲ್ಲಿ ಪಡೆದ ಅನುದಾನವನ್ನು ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ ಮಾಡಿರುವ ಕುರಿತ ಅಧಿಕೃತ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಆದರೆ, ಈ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರವು ಪ್ರತ್ಯೇಕವಾಗಿ ಯಾವುದೇ ನಿರಕ್ಷೇಪಣಾ ಪ್ರಮಾಣಪತ್ರವನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಸಚಿವ ರಾಜೀವ್ ರಂಜನ್ ಸಿಂಗ್ ಅವರು ಸ್ಪಷ್ಟನೆ ನೀಡಿದ್ದಾರೆ.

