Medical Shops Bandh| ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್; ಕರ್ನಾಟಕದಲ್ಲಿ ಹೇಗಿದೆ ಪ್ರತಿಕ್ರಿಯೆ?
x

Medical Shops Bandh| ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್; ಕರ್ನಾಟಕದಲ್ಲಿ ಹೇಗಿದೆ ಪ್ರತಿಕ್ರಿಯೆ?

ಇ-ಫಾರ್ಮಸಿ ವಿರೋಧಿಸಿ ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್‌ಗೆ ಕರೆ ನೀಡಲಾಗಿದೆ. ಬೆಂಗಳೂರು ಹಾಗೂ ಕರ್ನಾಟಕದಾದ್ಯಂತ ಔಷಧ ಮಳಿಗೆಗಳು ತೆರೆದಿವೆಯೇ? ವ್ಯಾಪಾರಿಗಳ ಬೇಡಿಕೆಗಳೇನು? ಇಲ್ಲಿದೆ ಸಂಪೂರ್ಣ ವಿವರ.


Click the Play button to hear this message in audio format

ಆನ್ಲೈನ್‌ನಲ್ಲಿ ನಿಯಮಬಾಹಿರವಾಗಿ ಔಷಧ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಮೇ 20 ರಂದು ದೇಶಾದ್ಯಂತ ಔಷಧ ಮಳಿಗೆಗಳನ್ನು) ಬಂದ್ ಮಾಡಿ ಪ್ರತಿಭಟಿಸಲು ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘ (AIOCD) ಕರೆ ನೀಡಿದೆ. ಆದರೆ, ಈ ಬಂದ್‌ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಕೆಲವು ಸಂಘಟನೆಗಳು ಸಂಪೂರ್ಣ ಬಂದ್ ಜಾರಿಗೆ ತಂದಿದ್ದರೆ, ಇನ್ನು ಕೆಲವು ಸಂಘಟನೆಗಳು ಕಪ್ಪು ಪಟ್ಟಿ ಧರಿಸುವ ಮೂಲಕ ಕೇವಲ ನೈತಿಕ ಬೆಂಬಲ ಘೋಷಿಸಿವೆ. ಹೀಗಾಗಿ ರಾಜ್ಯದಲ್ಲಿ ಸಾರ್ವಜನಿಕರಿಗೆ ಔಷಧಿಗಳ ಲಭ್ಯತೆಯಲ್ಲಿ ದೊಡ್ಡ ಮಟ್ಟದ ತೊಂದರೆಯಾಗಿಲ್ಲ.

ಬೆಂಗಳೂರಿನಲ್ಲಿ ಶೇ. 90 ರಷ್ಟು ಮೆಡಿಕಲ್ ಶಾಪ್ ಓಪನ್!

ಕರ್ನಾಟಕದಲ್ಲಿ ಸರಿಸುಮಾರು 26 ಸಾವಿರಕ್ಕೂ ಅಧಿಕ ಮೆಡಿಕಲ್ ಶಾಪ್ಗಳಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಶೇಕಡಾ 90 ರಷ್ಟು ಮಳಿಗೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಬೃಹತ್ ಬೆಂಗಳೂರು ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಅಸೋಸಿಯೇಷನ್ ಈ ಬಂದ್ಗೆ ಕೇವಲ ನೈತಿಕ ಬೆಂಬಲ ನೀಡಿದೆ. "ಯಾರೂ ಹೆದರದೆ, ನಿರ್ಭಯದಿಂದ ಅಂಗಡಿಗಳನ್ನು ತೆರೆದು ರೋಗಿಗಳ ಸೇವೆಯಲ್ಲಿ ನಿರತರಾಗಬೇಕು" ಎಂದು ಅಸೋಸಿಯೇಷನ್ ಅಧ್ಯಕ್ಷ ಎಂ.ಕೆ. ಮಾಯಣ್ಣ ಮನವಿ ಮಾಡಿದ್ದಾರೆ. ಅದರಂತೆ ಫಾರ್ಮಸಿ ಸಿಬ್ಬಂದಿ ಕಪ್ಪು ರಿಬ್ಬನ್ ಕಟ್ಟಿ ಪ್ರತಿಭಟನೆಯನ್ನು ದಾಖಲಿಸುತ್ತಿದ್ದಾರೆ.

ಔಷಧ ವ್ಯಾಪಾರಿಗಳ ಪ್ರಮುಖ ಬೇಡಿಕೆಗಳು ಏನು?

ಔಷಧ ವ್ಯಾಪಾರಿಗಳ ಸಂಘವು ಕೇಂದ್ರ ಸರ್ಕಾರದ ಮುಂದೆ ಪ್ರಮುಖವಾಗಿ ಈ ಕೆಳಗಿನ ಬೇಡಿಕೆಗಳನ್ನು ಇಟ್ಟಿದೆ:

• ಜಿಎಸ್ಆರ್ 220 (ಇ) ಮತ್ತು ಜಿಎಸ್ಆರ್ 817 (ಇ) ನಿಯಮಗಳನ್ನು ತಕ್ಷಣವೇ ಹಿಂಪಡೆಯಬೇಕು.

• ದೇಶದಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿರುವ ಅಕ್ರಮ ಇ-ಫಾರ್ಮಸಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು.

• ಆನ್ಲೈನ್ ಕಂಪನಿಗಳು ನೀಡುತ್ತಿರುವ ಅತಿಯಾದ ಡಿಸ್ಕೌಂಟ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

• ಸಾಂಪ್ರದಾಯಿಕ ಸಣ್ಣ ಔಷಧಿ ವ್ಯಾಪಾರಿಗಳ ಹಿತರಕ್ಷಣೆ ಮಾಡಬೇಕು.

ಆನ್ಲೈನ್ ಔಷಧ ಮಾರಾಟದಿಂದ ಎದುರಾಗಿರುವ ಆತಂಕಗಳೇನು?

ಈ ಮುಷ್ಕರದ ನೇತೃತ್ವ ವಹಿಸಿರುವ AIOCD ಅಧ್ಯಕ್ಷ ಜೆ.ಎಸ್. ಶಿಂಧೆ ಮತ್ತು ಪ್ರಧಾನ ಕಾರ್ಯದರ್ಶಿ ರಾಜೀವ್ ಸಿಂಘಾಲ್ ಪ್ರಕಾರ, ಇದು ಕೇವಲ ವ್ಯಾಪಾರಿಗಳ ಸಮಸ್ಯೆಯಲ್ಲ, ಬದಲಿಗೆ ರೋಗಿಗಳ ಆರೋಗ್ಯ ಮತ್ತು ಸುರಕ್ಷತೆಯ ವಿಷಯವಾಗಿದೆ. ಅವರ ಪ್ರಕಾರ ಪ್ರಮುಖ ಸಮಸ್ಯೆಗಳು ಇಲ್ಲಿವೆ:

1. ನಿಯಂತ್ರಣವಿಲ್ಲದ ಮಾರಾಟ: ಇ-ಫಾರ್ಮಸಿ ಮತ್ತು ಕಾರ್ಪೊರೇಟ್ ವೇದಿಕೆಗಳ ಮೂಲಕ ಯಾವುದೇ ಕಠಿಣ ನಿಯಂತ್ರಣವಿಲ್ಲದೆ ಔಷಧಗಳು ಮಾರಾಟವಾಗುತ್ತಿವೆ.

2. ನಕಲಿ ಪ್ರಿಸ್ಕ್ರಿಪ್ಷನ್ ಹಾವಳಿ: ವೈದ್ಯರ ಅಧಿಕೃತ ಚೀಟಿ ಇಲ್ಲದೆ ಅಥವಾ ನಕಲಿ/AI-ರಚಿತ (Artificial Intelligence) ಪ್ರಿಸ್ಕ್ರಿಪ್ಷನ್ಗಳನ್ನು ಬಳಸಿ ಅಪಾಯಕಾರಿ ಔಷಧಗಳನ್ನು ಆರ್ಡರ್ ಮಾಡಲಾಗುತ್ತಿದೆ.

3. ಔಷಧಗಳ ದುರುಪಯೋಗ: ಆಂಟಿಬಯೋಟಿಕ್ ಹಾಗೂ ಚಟ ಉಂಟುಮಾಡುವ (habit-forming) ಔಷಧಿಗಳು ಸುಲಭವಾಗಿ ದುರುಪಯೋಗವಾಗುವ ಆತಂಕವಿದೆ.

4. ಗುಣಮಟ್ಟದ ಕೊರತೆ: ಸರಿಯಾದ ತಾಪಮಾನದಲ್ಲಿ ಸಂಗ್ರಹಿಸದ ಮತ್ತು ನಕಲಿ ಔಷಧಿಗಳು ಗ್ರಾಹಕರಿಗೆ ತಲುಪುವ ಅಪಾಯವಿರುತ್ತದೆ. ಅಲ್ಲದೆ ಇಲ್ಲಿ ರೋಗಿ ಮತ್ತು ಫಾರ್ಮಸಿಸ್ಟ್ ನಡುವೆ ನೇರ ಸಂಪರ್ಕ ಇರುವುದಿಲ್ಲ.

ಸಣ್ಣ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆತ!

ಆನ್ಲೈನ್ ಕಂಪನಿಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಶೇಕಡಾ 20 ರಿಂದ 60 ರಷ್ಟು ಭಾರೀ ರಿಯಾಯಿತಿಗಳನ್ನು ನೀಡುತ್ತಿವೆ. ಇದರಿಂದಾಗಿ ಗ್ರಾಹಕರು ಆನ್ಲೈನ್ ಕಡೆ ಮುಖ ಮಾಡುತ್ತಿದ್ದು, ದಶಕಗಳಿಂದ ನಂಬಿಕಸ್ಥ ಸೇವೆ ನೀಡುತ್ತಾ ಬಂದಿರುವ ಸ್ಥಳೀಯ ಸಣ್ಣ ಮೆಡಿಕಲ್ ಶಾಪ್ಗಳು ಮುಚ್ಚುವ ಹಂತಕ್ಕೆ ತಲುಪಿವೆ. ಮಾರುಕಟ್ಟೆಯಲ್ಲಿ ಕಾರ್ಪೊರೇಟ್ ಕಂಪನಿಗಳ ಏಕಾಧಿಪತ್ಯ ಸೃಷ್ಟಿಯಾಗುವ ಭೀತಿ ಎದುರಾಗಿದೆ.

Read More
Next Story