ಕೇರಳ ಸ್ಟೋರಿ 2 ವಿವಾದ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ಧರ್ಮಾಧಿಕಾರಿಗೆ ಮದ್ರಾಸ್ ಹೈಕೋರ್ಟ್ ಸಿಜೆ
x

 ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಅವರನ್ನು ಮದ್ರಾಸ್ ಹೈಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿದೆ.

'ಕೇರಳ ಸ್ಟೋರಿ 2' ವಿವಾದ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ಧರ್ಮಾಧಿಕಾರಿಗೆ ಮದ್ರಾಸ್ ಹೈಕೋರ್ಟ್ ಸಿಜೆ

ನ್ಯಾಯಮೂರ್ತಿ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಅವರು ಜುಲೈ 8, 1966 ರಂದು ರಾಯ್‌ಪುರದಲ್ಲಿ ಜನಿಸಿದ್ದಾರೆ. ನಾಗ್ಪುರ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ಮತ್ತು ಕಾನೂನು ಪದವಿ ಪಡೆದಿದ್ದಾರೆ.


Click the Play button to hear this message in audio format

'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಬಿಡುಗಡೆಗೆ ಸಂಬಂಧಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಅವರನ್ನು ಮದ್ರಾಸ್ ಹೈಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿದೆ.

ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಮನೀಂದ್ರ ಮೋಹನ್ ಶ್ರೀವಾಸ್ತವ ಅವರು ಮಾರ್ಚ್ 5 ರಂದು ನಿವೃತ್ತರಾಗಲಿದ್ದು, ಮರುದಿನವೇ ಅಂದರೆ ಮಾರ್ಚ್ 6 ರಂದು ನ್ಯಾಯಮೂರ್ತಿ ಧರ್ಮಾಧಿಕಾರಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಚಿತ್ರದ ಬಿಡುಗಡೆಗೆ ತಡೆ ನೀಡಿದ್ದ ಏಕಸದಸ್ಯ ಪೀಠದ ಆದೇಶದ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಇವರು ಗುರುವಾರ ತಡರಾತ್ರಿಯವರೆಗೆ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿದ್ದರು.

ವೃತ್ತಿ ಜೀವನದ ಹಿನ್ನೆಲೆ

ನ್ಯಾಯಮೂರ್ತಿ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಅವರು ಜುಲೈ 8, 1966 ರಂದು ರಾಯ್‌ಪುರದಲ್ಲಿ ಜನಿಸಿದ್ದಾರೆ. ನಾಗ್ಪುರ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ಮತ್ತು ಕಾನೂನು ಪದವಿ ಪಡೆದ ಅವರು, 1992 ರಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. 2016 ರಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಇವರು, 2018 ರಲ್ಲಿ ಕಾಯಂ ನ್ಯಾಯಮೂರ್ತಿಯಾದರು. ಕಳೆದ ವರ್ಷ ಏಪ್ರಿಲ್‌ನಲ್ಲಿ ಅವರು ಕೇರಳ ಹೈಕೋರ್ಟ್‌ಗೆ ವರ್ಗಾವಣೆಗೊಂಡಿದ್ದರು.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿ ಲಿಸಾ ಗಿಲ್ ಅವರನ್ನು ಆಂಧ್ರಪ್ರದೇಶ ಹೈಕೋರ್ಟ್‌ಗೆ ವರ್ಗಾಯಿಸಲು ಕೊಲಿಜಿಯಂ ಶಿಫಾರಸು ಮಾಡಿದೆ.

ಆಂಧ್ರಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಲಿಸಾ ಗಿಲ್ ಆಯ್ಕೆ

ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿ ಲಿಸಾ ಗಿಲ್ ಅವರನ್ನು ಆಂಧ್ರಪ್ರದೇಶ ಹೈಕೋರ್ಟ್‌ಗೆ ವರ್ಗಾಯಿಸಲು ಕೊಲಿಜಿಯಂ ಶಿಫಾರಸು ಮಾಡಿದೆ. ಇವರನ್ನು ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಉದ್ದೇಶಿಸಲಾಗಿದ್ದು, ಪ್ರಸ್ತುತ ಹುದ್ದೆ ಖಾಲಿಯಾದ ನಂತರ ಈ ನೇಮಕಾತಿ ಜಾರಿಗೆ ಬರಲಿದೆ.

ಕೊಲಿಜಿಯಂನ ಹೊಸ ನೀತಿ

ನ್ಯಾಯಾಂಗ ಆಡಳಿತದ ಗುಣಮಟ್ಟವನ್ನು ಸುಧಾರಿಸಲು ಕೊಲಿಜಿಯಂ ಹೊಸ ನೀತಿಯೊಂದನ್ನು ಜಾರಿಗೆ ತಂದಿದೆ. ಇದರ ಅನ್ವಯ, ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳಲಿರುವ ನ್ಯಾಯಾಧೀಶರನ್ನು ಆ ಹುದ್ದೆ ಖಾಲಿಯಾಗುವ ಕನಿಷ್ಠ ಎರಡು ತಿಂಗಳ ಮುಂಚಿತವಾಗಿಯೇ ಸಂಬಂಧಪಟ್ಟ ಹೈಕೋರ್ಟ್‌ಗೆ ವರ್ಗಾಯಿಸಲಾಗುತ್ತದೆ. ಆ ನ್ಯಾಯಾಲಯದ ಕಾರ್ಯವೈಖರಿ ಮತ್ತು ಆಡಳಿತಾತ್ಮಕ ಅಗತ್ಯಗಳನ್ನು ಮೊದಲೇ ಅರಿತುಕೊಳ್ಳಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಕೊಲಿಜಿಯಂ ತಿಳಿಸಿದೆ. ಈ ನೀತಿಯ ಭಾಗವಾಗಿಯೇ ನ್ಯಾಯಮೂರ್ತಿ ಲಿಸಾ ಗಿಲ್ ಅವರನ್ನು ಮುಂಚಿತವಾಗಿ ಆಂಧ್ರಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿದೆ.

Read More
Next Story