
ಇಸ್ರೋ GSLV-F17 ರಾಕೆಟ್ ಉಡಾವಣೆ ಯಶಸ್ವಿ- ಭಾರತದ ಪ್ರಥಮ ಇಮೇಜಿಂಗ್ ಸಾಟಲೈಟ್ ಕಕ್ಷೆಗೆ
ಹವಾಮಾನ ಮುನ್ಸೂಚನೆ, ಕೃಷಿ ಮೇಲ್ವಿಚಾರಣೆ, ಪರಿಸರ ಬದಲಾವಣೆಗಳ ನಿಗಾ, ಪ್ರಕೃತಿ ವಿಕೋಪ ನಿರ್ವಹಣೆ ಹಾಗೂ ದೇಶದ ಅಭಿವೃದ್ಧಿ ಯೋಜನೆಗಳ ರೂಪಿಸುವಿಕೆಯಲ್ಲಿ ಈ ಉಪಗ್ರಹ ಪ್ರಮುಖ ಪಾತ್ರ ವಹಿಸಬಹುದು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಂದು ಮಹತ್ವದ ಯಶಸ್ಸು ಸಾಧಿಸಿದೆ. ಭೂ ವೀಕ್ಷಣಾ ಉಪಗ್ರಹ EOS-05 ಹೊತ್ತಿದ್ದ GSLV-F17 ರಾಕೆಟ್ ಶುಕ್ರವಾರ ಮುಂಜಾನೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ.
ಶುಕ್ರವಾರ ಮುಂಜಾನೆ 2.55ಕ್ಕೆ GSLV-F17 ರಾಕೆಟ್ ನಭಕ್ಕೆ ಚಿಮ್ಮಿತು. ಉಡಾವಣೆಯ ಕೆಲವೇ ನಿಮಿಷಗಳಲ್ಲಿ EOS-05 ಉಪಗ್ರಹವನ್ನು ಅದರ ಉದ್ದೇಶಿತ ಸಬ್-ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ಗೆ (sub-GTO) ಯಶಸ್ವಿಯಾಗಿ ಸೇರಿಸಲಾಯಿತು.
ಉಡಾವಣೆಯ ಬಳಿಕ ಮಾತನಾಡಿದ ISRO ಅಧ್ಯಕ್ಷ ಡಾ. ವಿ. ನಾರಾಯಣನ್, GSLV-F17 ವಾಹಕವು ಅತ್ಯಾಧುನಿಕ ಭೂ ವೀಕ್ಷಣಾ ಉಪಗ್ರಹ EOS-05 ಅನ್ನು ನಿಖರವಾಗಿ ಅದರ ಅಗತ್ಯ ಕಕ್ಷೆಗೆ ಸೇರಿಸಿದೆ ಎಂದು ಘೋಷಿಸಿದರು.
GSLV ಉಡಾವಣೆಯಲ್ಲಿ ಅತ್ಯಂತ ಭಾರದ ಉಪಗ್ರಹ
GSLV-F17 ಮಿಷನ್‌ನ ಮಿಷನ್ ನಿರ್ದೇಶಕ ಥಾಮಸ್ ಕುರಿಯನ್ ಮಾತನಾಡಿ, EOS-05 ಉಪಗ್ರಹವು GSLV ಮೂಲಕ ಕಕ್ಷೆಗೆ ಉಡಾಯಿಸಲಾದ ಅತ್ಯಂತ ಭಾರದ ಉಪಗ್ರಹವಾಗಿದೆ ಎಂದು ತಿಳಿಸಿದರು.
“ಇದು ನಮ್ಮೆಲ್ಲರಿಗೂ ಹೆಮ್ಮೆ ಮತ್ತು ಸಂತೋಷದ ಕ್ಷಣ. GSLV ತನ್ನ 19ನೇ ಮಿಷನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಮಿಷನ್‌ನಲ್ಲಿ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾದ, ಸಮೀಪದ ನೈಜ ಸಮಯದಲ್ಲಿ ಭೂಮಿಯ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿರುವ EOS-05 ಉಪಗ್ರಹವನ್ನು ಹೊತ್ತೊಯ್ಯಲಾಗಿದೆ. ಉಡಾವಣೆ ಕೆಲವೇ ನಿಮಿಷಗಳ ಕಾಲ ನಡೆಯುತ್ತದೆ. ಆದರೆ ಆ ಕೆಲವೇ ನಿಮಿಷಗಳ ಯಶಸ್ಸಿನ ಹಿಂದೆ ತಿಂಗಳುಗಳು ಮತ್ತು ವರ್ಷಗಳ ಕಠಿಣ ಪರಿಶ್ರಮವಿರುತ್ತದೆ,” ಎಂದು ಅವರು ಹೇಳಿದರು.
ಈ ಉಪಗ್ರಹದಿಂದ ಜನರಿಗೆ ಏನು ಲಾಭ?
EOS-05 ಉಪಗ್ರಹದಿಂದ ಸೆರೆಹಿಡಿಯುವ ಚಿತ್ರಗಳು ಮತ್ತು ಮಾಹಿತಿಗಳು ನೇರವಾಗಿ ಸಾಮಾನ್ಯ ಜನರ ಮೊಬೈಲ್‌ಗೆ ಬರುವುದಿಲ್ಲ. ಆದರೆ ಈ ದತ್ತಾಂಶವನ್ನು ವಿವಿಧ ಸರ್ಕಾರಿ ಇಲಾಖೆಗಳು ಮತ್ತು ವ್ಯವಸ್ಥೆಗಳು ಬಳಸುವುದರಿಂದ ಜನರಿಗೆ ಪರೋಕ್ಷವಾಗಿ ಸಾಕಷ್ಟು ಪ್ರಯೋಜನಗಳು ಸಿಗಲಿವೆ.
ಹವಾಮಾನ ಮುನ್ಸೂಚನೆ, ಕೃಷಿ ಮೇಲ್ವಿಚಾರಣೆ, ಪರಿಸರ ಬದಲಾವಣೆಗಳ ನಿಗಾ, ಪ್ರಕೃತಿ ವಿಕೋಪ ನಿರ್ವಹಣೆ ಹಾಗೂ ದೇಶದ ಅಭಿವೃದ್ಧಿ ಯೋಜನೆಗಳ ರೂಪಿಸುವಿಕೆಯಲ್ಲಿ ಉಪಗ್ರಹ ದತ್ತಾಂಶ ಪ್ರಮುಖ ಪಾತ್ರ ವಹಿಸಬಹುದು. ಭಾರತದಲ್ಲಿ ಈಗಾಗಲೇ ಉಪಗ್ರಹ ತಂತ್ರಜ್ಞಾನವನ್ನು ಕೃಷಿ ಮತ್ತು ವಿಕೋಪ ನಿರ್ವಹಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ.
ಪ್ರವಾಹ, ಕಾಡ್ಗಿಚ್ಚು, ಚಂಡಮಾರುತ ಬಂದಾಗ ಹೇಗೆ ಸಹಾಯ?
ಪ್ರವಾಹ ಸಂಭವಿಸಿದಾಗ ಯಾವ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿವೆ, ಕಾಡ್ಗಿಚ್ಚು ಯಾವ ಭಾಗಗಳಿಗೆ ಹರಡುತ್ತಿದೆ ಅಥವಾ ಚಂಡಮಾರುತದ ಪರಿಣಾಮ ಯಾವ ಪ್ರದೇಶಗಳಲ್ಲಿ ಹೆಚ್ಚಾಗಿದೆ ಎಂಬುದನ್ನು ಬಾಹ್ಯಾಕಾಶದಿಂದಲೇ ಗಮನಿಸಲು ಉಪಗ್ರಹ ಚಿತ್ರಗಳು ನೆರವಾಗುತ್ತವೆ.
ಈ ಮಾಹಿತಿ ಲಭ್ಯವಾದರೆ ಹಾನಿಯ ಪ್ರಮಾಣವನ್ನು ತ್ವರಿತವಾಗಿ ಅಂದಾಜಿಸಲು, ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು, ಪರಿಹಾರ ಸಾಮಗ್ರಿಗಳನ್ನು ವಿತರಿಸಲು ಹಾಗೂ ತುರ್ತು ಕ್ರಮಗಳನ್ನು ರೂಪಿಸಲು ಅಧಿಕಾರಿಗಳಿಗೆ ಸಹಾಯವಾಗುತ್ತದೆ.
ಪ್ರವಾಹ, ಚಂಡಮಾರುತ, ಕಾಡ್ಗಿಚ್ಚು, ಭೂಕುಸಿತ ಸೇರಿದಂತೆ ಹಲವು ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಉಪಗ್ರಹ ದತ್ತಾಂಶವನ್ನು ಈಗಾಗಲೇ ಬಳಸಲಾಗುತ್ತಿದೆ. EOS-05ನಂತಹ ಅತ್ಯಾಧುನಿಕ ಭೂ ವೀಕ್ಷಣಾ ಉಪಗ್ರಹಗಳು ಇಂತಹ ಮೇಲ್ವಿಚಾರಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ಸಾಧ್ಯತೆಯಿದೆ.
Another giant leap for India in Space!
— Dr Jitendra Singh (@DrJitendraSingh) September 3, 2026
Kudos to Team @isro on the successful launch of GSLV-F17/EOS-05.
EOS-05 is a state-of-the-art Earth Observation satellite and India’s first imaging satellite from Geosynchronous Orbit, enabling advanced imaging across visible, infrared,… pic.twitter.com/1HHJrWM7ze
ರೈತರಿಗೆ ಏನು ಪ್ರಯೋಜನ?
ಕೃಷಿ ಕ್ಷೇತ್ರದಲ್ಲೂ EOS-05ನಂತಹ ಭೂ ವೀಕ್ಷಣಾ ಉಪಗ್ರಹಗಳ ಮಾಹಿತಿ ಮಹತ್ವದ್ದಾಗಿದೆ. ಹೊಲಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಉಪಗ್ರಹ ಚಿತ್ರಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಗಮನಿಸಬಹುದು.
ಬೆಳೆ ಪ್ರದೇಶ, ಬೆಳೆ ಬೆಳವಣಿಗೆ, ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿ ಸೇರಿದಂತೆ ಹಲವು ಅಂಶಗಳನ್ನು ಅಂದಾಜಿಸಲು ಭೂ ವೀಕ್ಷಣಾ ತಂತ್ರಜ್ಞಾನ ನೆರವಾಗುತ್ತದೆ. ಇದರ ಆಧಾರದ ಮೇಲೆ ಬೆಳೆ ಅಂದಾಜು, ಬರ ಮೇಲ್ವಿಚಾರಣೆ ಮತ್ತು ಬೆಳೆ ವಿಮೆಗೆ ಸಂಬಂಧಿಸಿದ ಪ್ರಕ್ರಿಯೆಗಳಲ್ಲೂ ಉಪಗ್ರಹ ದತ್ತಾಂಶವನ್ನು ಬಳಸುವ ಸಾಧ್ಯತೆಯಿದೆ.
ಅಂದರೆ, ಉಪಗ್ರಹ ಬಾಹ್ಯಾಕಾಶದಲ್ಲಿದ್ದರೂ ಅದರ ಪ್ರಯೋಜನಗಳು ಭೂಮಿಯ ಮೇಲಿರುವ ಸಾಮಾನ್ಯ ಜನರ ಬದುಕಿನವರೆಗೂ ತಲುಪಬಹುದು.
ಗಗನಯಾನಕ್ಕೂ ಭರದ ಸಿದ್ಧತೆ
ಇದೇ ವೇಳೆ, ISRO ಅಧ್ಯಕ್ಷ ಡಾ. ವಿ. ನಾರಾಯಣನ್ ಅವರು ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆ ಕುರಿತೂ ಮಹತ್ವದ ಮಾಹಿತಿ ನೀಡಿದ್ದಾರೆ. ಈ ಕ್ಯಾಲೆಂಡರ್ ವರ್ಷದೊಳಗೆ ಗಗನಯಾನದ ಮೊದಲ ಮಾನವರಹಿತ ಮಿಷನ್ ಉಡಾವಣೆ ಮಾಡುವ ನಿಟ್ಟಿನಲ್ಲಿ ಅತ್ಯಂತ ವೇಗವಾಗಿ ಮತ್ತು ವ್ಯವಸ್ಥಿತವಾಗಿ ಸಿದ್ಧತೆಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.

