ಇರಾನ್‌-ಇಸ್ರೇಲ್‌ ಸಂಘರ್ಷ: ಟೆಹ್ರಾನ್‌ನಲ್ಲಿ ಸಿಲುಕಿದ ಅಲಿಪುರದ 121 ಕನ್ನಡಿಗರು
x
ವಿಮಾನ ನಿಲ್ದಾಣಗಳಲ್ಲಿ ಅತಂತ್ರರಾಗಿರುವ ಜನರು

ಇರಾನ್‌-ಇಸ್ರೇಲ್‌ ಸಂಘರ್ಷ: ಟೆಹ್ರಾನ್‌ನಲ್ಲಿ ಸಿಲುಕಿದ ಅಲಿಪುರದ 121 ಕನ್ನಡಿಗರು

ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಇಲ್ಲಿಯವರೆಗೆ ಭಾರತೀಯ ವಿಮಾನಯಾನ ಸಂಸ್ಥೆಗಳ 1,221 ವಿಮಾನಗಳು ಮತ್ತು ವಿದೇಶಿ ವಿಮಾನಯಾನ ಸಂಸ್ಥೆಗಳ 388 ವಿಮಾನಗಳು ಪ್ರಯಾಣ ರದ್ದು ಮಾಡಿದ್ದವು.


ಇಸ್ರೇಲ್-ಇರಾನ್ ಸಂಘರ್ಷ ಉಲ್ಬಣಿಸುತ್ತಿದ್ದು, ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ಸ್ಥಿತಿ ಅಯೋಮಯವಾಗಿದೆ. ಕನ್ನಡಿಗರ ಸುರಕ್ಷಿತ ವಾಪಸಾತಿಗೆ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡರೂ ಇನ್ನೂ ಹಲವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಇರಾನ್‌ ದೇಶದಲ್ಲೇ ಸುಮಾರು 300 ಮಂದಿ ಕರ್ನಾಟಕದವರಿದ್ದು, ಅಲಿಪುರದ ೧೨೧ ಮಂದಿ ಟೆಹ್ರಾನ್‌ ಹಾಗೂ ಖೋಮ್‌ ನಗರಗಳಲ್ಲಿ ಸಿಲುಕಿದ್ದಾರೆ. ಇದಲ್ಲದೇ, ಅಬುಧಾಬಿ, ಸೌದಿ ಅರೆಬಿಯಾ, ಬಹ್ರೇನ್‌, ಜೋರ್ಡನ್‌, ಕುವೈತ್‌ನಲ್ಲಿ ಕನ್ನಡಿಗರು ವಾಪಸಾಗಲು ಸಾಧ್ಯವಾಗದೇ ಅತಂತ್ರವಾಗಿದ್ದಾರೆ.

ಮಧ್ಯಪ್ರಾಚ್ಯದ ವಿವಿಧ ದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸುಮಾರು 200 ಮಂದಿ ಸರ್ಕಾರದ ಸಂಪರ್ಕಕ್ಕೆ ಬಂದಿದ್ದು, ಹೆಚ್ಚಿನವರ ಪತ್ತೆಗಾಗಿ ರಾಜ್ಯ ಸರ್ಕಾರ ಸಹಾಯವಾಣಿ ಸಂಖ್ಯೆ ಆರಂಭಿಸಿದೆ. ಜತೆಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನಿಕಟ ಸಂಪರ್ಕದಲ್ಲಿದೆ.

ವಿವಿಧ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರಿಗಾಗಿ ಸಹಾಯವಾಣಿ ಆರಂಭಿಸಲಾಗಿದೆ. ಕೆಲವರು ಕರೆ ಮಾಡುತ್ತಿದ್ದಾರೆ. ಹಾಗಾಗಿ, ಕನ್ನಡಿಗರ ಪಟ್ಟಿ ದಿನೇ ದಿನೇ ಬೆಳೆಯುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಪರಿಹಾರ ಆಯುಕ್ತ ಮುನೀಶ್ ಮೌನ್ಸಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇರಾನ್‌ನಲ್ಲಿ ಅಲಿಪುರದ 121 ಮಂದಿ

ಇರಾನ್‌ನ ಟೆಹ್ರಾನ್ ಹಾಗೂ ಖೋಮ್ ನಗರಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲಿಪುರದ 121 ಮಂದಿ ಸಿಲುಕಿದ್ದಾರೆ. ಹರಳು ವ್ಯಾಪಾರ, ವೈದ್ಯಕೀಯ ಹಾಗೂ ಧಾರ್ಮಿಕ ಶಿಕ್ಷಣಕ್ಕಾಗಿ ಟೆಹ್ರಾನ್‌ನಲ್ಲಿ ವಾಸವಿರುವವರು ಈಗ ಯುದ್ಧದಿಂದಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಎಲ್ಲರೂ ಸುರಕ್ಷಿತ ಸ್ಥಳಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.

"ಟೆಹ್ರಾನ್‌ನಲ್ಲಿ ಆಗುತ್ತಿರುವ ದೈನಂದಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಮಾಧ್ಯಮಗಳಲ್ಲಿ ತೋರಿಸುವಷ್ಟು ಆತಂಕದ ಪರಿಸ್ಥಿತಿ ಇಲ್ಲ ಎಂದು ಹೇಳುತ್ತಿದ್ದಾರೆ. ಸದ್ಯ ಇರಾನ್‌ನಲ್ಲಿ ಯಾವುದೇ ವಿಮಾನ ಸೇವೆ ಇಲ್ಲದಿರುವ ಕಾರಣ ವಾಪಸಾಗಲು ಸಾಧ್ಯವಾಗುತ್ತಿಲ್ಲ. ಅಂಜುಮನ್ ಜಾಫರಿಯಾ ಸಮಿತಿ ಕೂಡ ಅಲಿಪುರ ಮೂಲದ ಎಲ್ಲರಿಗೂ ಸುರಕ್ಷಿತ ವಾಸ್ತವ್ಯ ಹಾಗೂ ಊಟದ ವ್ಯವಸ್ಥೆ ಮಾಡಿದೆ" ಎಂದು ಅಲಿಪುರದ ನಿವಾಸಿ ಮಿರ್ ತಸ್ವೀರ್ ಅಬ್ಬಾಸ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಎರಡು ದಿನಗಳ ಹಿಂದೆ ದುಬೈನಲ್ಲಿ ಇದ್ದ ಅಲಿಪುರದ ಇಬ್ಬರು ಸುರಕ್ಷಿತವಾಗಿ ವಾಪಸಾಗಿದ್ದಾರೆ. ಟೆಹ್ರಾನ್‌ ಹಾಗೂ ಖೋಮ್‌ ನಗರದಲ್ಲಿರುವವರನ್ನು ಕೇಂದ್ರ ಸರ್ಕಾರ ಸುರಕ್ಷಿತವಾಗಿ ಕರೆತರಲಿದೆ ಎಂಬ ಆಶಾಭಾವನೆ ಇದೆ ಎಂದು ಹೇಳಿದರು.

ವಿಶೇಷ ವಿಮಾನ ಕಳುಹಿಸಲು ನಿರ್ಧಾರ

ಭಾರತೀಯ ವಿಮಾನಯಾನ ಸಂಸ್ಥೆಗಳು ಬುಧವಾರ ಒಟ್ಟು 58 ವಿಮಾನಗಳನ್ನು ಗಲ್ಫ್ ರಾಷ್ಟ್ರಗಳಿಗೆ ಕಳುಹಿಸುತ್ತಿದ್ದು, ಭಾರತೀಯರನ್ನು ಕರೆತರಲು ಮುಂದಾಗಿವೆ. ಇಂಡಿಗೋದ 30, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ನ 23, ಸ್ಪೈಸ್ಜೆಟ್ ನ 8 ವಿಶೇಷ ವಿಮಾನಗಳನ್ನು ಕಳುಹಿಸಲು ನಿರ್ಧರಿಸಿವೆ.

ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಇಲ್ಲಿಯವರೆಗೆ ಭಾರತೀಯ ವಿಮಾನಯಾನ ಸಂಸ್ಥೆಗಳ 1,221 ವಿಮಾನಗಳು ಮತ್ತು ವಿದೇಶಿ ವಿಮಾನಯಾನ ಸಂಸ್ಥೆಗಳ 388 ವಿಮಾನಗಳು ಪ್ರಯಾಣ ರದ್ದುಗೊಳಿಸಿದ್ದವು. ಫೆ. 28ರಿಂದ ಮಾ.3 ರವರೆಗೆ ಭಾರತೀಯ ವಿಮಾನಯಾನ ಸಂಸ್ಥೆಗಳು 104 ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ರದ್ದುಗೊಳಿಸಿವೆ ಎಂದು ವಿಮಾನಯಾನ ಸಚಿವಾಲಯ ಅಂಕಿ ಅಂಶ ಒದಗಿಸಿದೆ.

ನಿಯಂತ್ರಣ ಕೊಠಡಿ ಸ್ಥಾಪನೆ

ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ದಾಳಿ ತೀವ್ರಗೊಂಡಿರುವ ಹಿನ್ನೆಲೆ ಕೇಂದ್ರ ಸರ್ಕಾರವು ವಿಶೇಷ ನಿಯಂತ್ರಣ ಕೊಠಡಿ ಸ್ಥಾಪಿಸಿದೆ. ಭಾರತೀಯರಿಗೆ ನೆರವಾಗುವ ಉದ್ದೇಶದಿಂದ ವಿದೇಶಾಂಗ ಸಚಿವಾಲಯವು ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಆರಂಭಿಸಿದೆ.

ನಿಯಂತ್ರಣ ಕೊಠಡಿಯು ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಕಾರ್ಯನಿರ್ವಹಿಸಲಿದೆ. 1800118797, +91 11 2301 2113, +91 11 2301 4104 ಹಾಗೂ +91 11 2301 7905 ಟೋಲ್‌ಫ್ರೀ ಸಂಖ್ಯೆಯಾಗಿದೆ.

ಇದಲ್ಲದೇ ಮಧ್ಯಪ್ರಾಚ್ಯ ದೇಶಗಳಲ್ಲಿರುವ ರಾಯಭಾರ ಕಚೇರಿಗಳನ್ನು ಸಂಪರ್ಕಿಸಲು ವಿದೇಶಾಂಗ ಸಚಿವಾಲಯವು ತುರ್ತು ಸಂಪರ್ಕ ಸಂಖ್ಯೆಗಳನ್ನು ಒದಗಿಸಿದೆ.

ರಾಯಭಾರ ಕಚೇರಿಯ ತುರ್ತು ಸಂಖ್ಯೆಗಳು

ಬಹ್ರೇನ್: +973 39418071, ಇರಾನ್: +98 9128109115 / +98 912810910 / +98 932179359, ಇರಾಕ್: +964 771 651 1185 / +964 770444 4899, ಇಸ್ರೇಲ್: +972 54 7520711 / +972 54 2428378, ಜೋರ್ಡಾನ್: +962 770 422 276, ಕುವೈತ್: +965 65501946, ಲೆಬನಾನ್: +961 76860128, ಒಮನ್: +968 98282270 (WhatsApp) / 80071234 (ಟೋಲ್ ಫ್ರೀ), ಕತಾರ್: +974 55647502, ರಮಲ್ಲಾ, ಪ್ಯಾಲೆಸ್ಟೈನ್: +970 592916418, ಸೌದಿ ಅರೇಬಿಯಾ (ರಿಯಾದ್): +966 11 4884697 / 800 247 1234 (ಟೋಲ್ ಫ್ರೀ), ಸೌದಿ ಅರೆಬಿಯಾ (ಜೆಡ್ಡಾ): +966 126648660 / +966 12 2614093, ಯುನೈಟೆಡ್ ಅರಬ್ ಎಮಿರೇಟ್ಸ್: +971 543090571 (WhatsApp) / 800 46342 (ಟೋಲ್ ಫ್ರೀ).

Read More
Next Story