ಇಂಡೋ-ಯುಎಸ್ ಒಪ್ಪಂದ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ: ಸಂಸತ್​ಗೆ ಘೇರಾವ್
x

ಇಂಡೋ-ಯುಎಸ್ ಒಪ್ಪಂದ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ: ಸಂಸತ್​ಗೆ ಘೇರಾವ್

ಈ ಹೊಸ ಒಪ್ಪಂದವು ಭಾರತದ ಕೃಷಿ ವಲಯ, ಜವಳಿ ಉದ್ಯಮ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ಗಂಭೀರವಾದ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿದರು.


Click the Play button to hear this message in audio format

ಕೇಂದ್ರ ಸರ್ಕಾರ ಇತ್ತೀಚೆಗೆ ಮುಂದಿಟ್ಟಿರುವ ಬಹುಚರ್ಚಿತ ಇಂಡೋ-ಯುಎಸ್ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಭಾರತೀಯ ಯುವ ಕಾಂಗ್ರೆಸ್ (IYC) ಕಾರ್ಯಕರ್ತರು ನವದೆಹಲಿಯಲ್ಲಿ ಮಂಗಳವಾರ (ಮಾರ್ಚ್​ 17ರಂದು) ಬೃಹತ್ ಮಟ್ಟದ 'ಸಂಸತ್ ಘೇರಾವ್' ಪ್ರತಿಭಟನೆ ನಡೆಸಿದರು.

ಈ ಒಪ್ಪಂದದಿಂದ ದೇಶದ ರೈತರು, ಕಾರ್ಮಿಕರು ಹಾಗೂ ಸಣ್ಣ ಕೈಗಾರಿಕೆಗಳಿಗೆ ಭಾರಿ ನಷ್ಟ ಉಂಟಾಗಲಿದೆ ಎಂದು ಆರೋಪಿಸಿರುವ ಯುವ ಕಾಂಗ್ರೆಸ್ ನಾಯಕರು, ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರ ನೇತೃತ್ವದಲ್ಲಿ ನಡೆದ ಈ ಬೃಹತ್ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್‌ನ ನೂರಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗವಹಿಸಿ ಕೇಂದ್ರದ ವಿರುದ್ಧದ ಹೋರಾಟಕ್ಕೆ ಸಾಥ್ ನೀಡಿದರು.

ನವದೆಹಲಿಯ ಜಂತರ್ ಮಂತರ್‌ನಲ್ಲಿ ಸೇರಿದ ದೇಶದ ವಿವಿಧ ರಾಜ್ಯಗಳ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂಡೋ-ಯುಎಸ್ ವ್ಯಾಪಾರ ಒಪ್ಪಂದದ ವಿರುದ್ಧ ದಿಕ್ಕಾರ ಕೂಗಿದರು. ಈ ಹೊಸ ಒಪ್ಪಂದವು ಭಾರತದ ಕೃಷಿ ವಲಯ, ಜವಳಿ ಉದ್ಯಮ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ಗಂಭೀರವಾದ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇದರ ಜೊತೆಗೆ, ಈ ಒಪ್ಪಂದದ ಜಾರಿಯಿಂದಾಗಿ ಅಮೆರಿಕಕ್ಕೆ ಭಾರತೀಯರ ಡೇಟಾ ಸುಲಭವಾಗಿ ಲಭ್ಯವಾಗಲಿದ್ದು, ಇದು ದೇಶದ ದತ್ತಾಂಶ ಭದ್ರತೆಗೆ (ಡೇಟಾ ಸೆಕ್ಯುರಿಟಿ) ಬಹುದೊಡ್ಡ ಅಪಾಯ ತಂದೊಡ್ಡಲಿದೆ ಎಂದು ಯುವ ಕಾಂಗ್ರೆಸ್ ನಾಯಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸಂಸತ್ ಭವನದತ್ತ ಮೆರವಣಿಗೆ ಹೊರಟ ನೂರಾರು ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ ಬಿಗಿ ಭದ್ರತೆ ಒದಗಿಸಿದ್ದರು.

ಕರ್ನಾಟಕ ಘಟಕದಿಂದಲೂ ಭಾಗಿ

ರಾಷ್ಟ್ರಮಟ್ಟದ ಈ ಬೃಹತ್ ಪ್ರತಿಭಟನೆಯಲ್ಲಿ ಕರ್ನಾಟಕದ ಯುವ ಕಾಂಗ್ರೆಸ್ ಘಟಕವು ಪಾಲ್ಗೊಂಡು ಗಮನ ಸೆಳೆಯಿತು. ನೂತನವಾಗಿ ಆಯ್ಕೆಯಾಗಿರುವ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ಅವರ ನೇತೃತ್ವದಲ್ಲಿ ರಾಜ್ಯದ ವಿವಿಧ ಭಾಗಗಳ 100ಕ್ಕೂ ಹೆಚ್ಚು ಪದಾಧಿಕಾರಿಗಳು ದೆಹಲಿಗೆ ತೆರಳಿ ಸಂಸತ್ ಘೇರಾವ್ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿ ನಿಂತು ಪಾಲ್ಗೊಂಡರು. ದೇಶದ ಸ್ವಾಯತ್ತತೆಯನ್ನು ರಕ್ಷಿಸುವುದು, ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವುದು ಹಾಗೂ ಜನತಾಂತ್ರಿಕ ಮೌಲ್ಯಗಳ ಸಂರಕ್ಷಣೆಯೇ ಈ ಹೋರಾಟದ ಪ್ರಮುಖ ಉದ್ದೇಶವಾಗಿದೆ ಎಂದು ಮಂಜುನಾಥ್ ಗೌಡ ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

Read More
Next Story