ಇನ್ಮುಂದೆ 18 ವರ್ಷ ತುಂಬಿದ ತಕ್ಷಣ ಮಕ್ಕಳ ಪಾಸ್‌ಪೋರ್ಟ್ ಅಮಾನ್ಯ; ಹೊಸ ನಿಯಮ ಜಾರಿ
x

ಇನ್ಮುಂದೆ 18 ವರ್ಷ ತುಂಬಿದ ತಕ್ಷಣ ಮಕ್ಕಳ ಪಾಸ್‌ಪೋರ್ಟ್ ಅಮಾನ್ಯ; ಹೊಸ ನಿಯಮ ಜಾರಿ

ಬೆಳೆಯುವ ಹಂತದಲ್ಲಿ ಮಕ್ಕಳ ಮುಖಚಹರೆ, ದೈಹಿಕ ಲಕ್ಷಣಗಳು ವೇಗವಾಗಿ ಬದಲಾಗುತ್ತವೆ. ಹೀಗಾಗಿ, 18 ವರ್ಷ ತುಂಬಿದ ತಕ್ಷಣ ಹೊಸ ಬಯೋಮೆಟ್ರಿಕ್, ಬೆರಳಚ್ಚುಗಳನ್ನು ಪಡೆದು ಪಾಸ್‌ಪೋರ್ಟ್ ನವೀಕರಿಸುವುದು ಅತ್ಯಗತ್ಯವಾಗಿದೆ.


Click the Play button to hear this message in audio format

ಭಾರತೀಯ ವಿದೇಶಾಂಗ ಸಚಿವಾಲಯವು ಪಾಸ್‌ಪೋರ್ಟ್ ಕಾಯ್ದೆಗೆ ಮಹತ್ವದ ತಿದ್ದುಪಡಿಗಳನ್ನು ತರುವ ಮೂಲಕ, ಪಾಸ್‌ಪೋರ್ಟ್ ಪಡೆಯುವ ಪ್ರಕ್ರಿಯೆ ಮತ್ತು ಅದರ ಸಿಂಧುತ್ವದ ನಿಯಮಗಳಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಜಾರಿಗೆ ತಂದಿದೆ. ಇನ್ನು ಮುಂದೆ 15 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ಪಾಸ್‌ಪೋರ್ಟ್‌ಗಳ ಸಿಂಧುತ್ವವು ಮಗುವಿಗೆ 18 ವರ್ಷ ತುಂಬುವವರೆಗೆ ಮಾತ್ರ ಸೀಮಿತವಾಗಿರುತ್ತದೆ. ಇದರೊಂದಿಗೆ ಪಾಸ್‌ಪೋರ್ಟ್ ಶುಲ್ಕದಲ್ಲಿಯೂ ಭಾರಿ ಏರಿಕೆಯನ್ನು ಮಾಡಲಾಗಿದೆ.

1980 ರ ಪಾಸ್‌ಪೋರ್ಟ್ ನಿಯಮಾವಳಿಯ 12 (1ಎ)ಗೆ ತಿದ್ದುಪಡಿ ತರುವ ಮೂಲಕ ಸರ್ಕಾರವು ಹೊಸ ಸ್ಪಷ್ಟತೆಯನ್ನು ನೀಡಿದೆ. ಈ ಹಿಂದೆ 15 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತಿದ್ದ ಪಾಸ್‌ಪೋರ್ಟ್‌ಗಳು 5 ವರ್ಷದ ಅವಧಿಗೆ ಅಥವಾ ಮಗುವಿಗೆ 15 ವರ್ಷ ತುಂಬುವವರೆಗೆ ಮಾತ್ರ ಮಾನ್ಯವಾಗಿರುತ್ತಿದ್ದವು. ಆದರೆ, ಇದೀಗ ಆ ಮಿತಿಯನ್ನು 18 ವರ್ಷದವರೆಗೆ ವಿಸ್ತರಿಸಲಾಗಿದೆ. ಹೊಸ ನಿಯಮದ ಪ್ರಕಾರ, ಮಗುವಿಗೆ 18 ವರ್ಷ ತುಂಬುತ್ತಿದ್ದಂತೆಯೇ ಆ ಪಾಸ್‌ಪೋರ್ಟ್ ತನ್ನ ಸಿಂಧುತ್ವವನ್ನು ಕಳೆದುಕೊಳ್ಳುತ್ತದೆ. ಉದಾಹರಣೆಗೆ, ಒಬ್ಬ ಮಗುವಿಗೆ 14ನೇ ವಯಸ್ಸಿನಲ್ಲಿ ಪಾಸ್‌ಪೋರ್ಟ್ ನೀಡಿದರೆ, ಈ ಹಿಂದೆ ಅದು 19ನೇ ವಯಸ್ಸಿನವರೆಗೆ ಮಾನ್ಯವಾಗುತ್ತಿತ್ತು. ಆದರೆ, ಇಂದಿನ ಹೊಸ ನಿಯಮದ ಅನ್ವಯ ಮಗುವಿಗೆ 18 ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಆ ಪಾಸ್‌ಪೋರ್ಟ್ ಅಮಾನ್ಯವಾಗುತ್ತದೆ ಮತ್ತು ಆ ವ್ಯಕ್ತಿ ವಯಸ್ಕರ ವಿಭಾಗದಲ್ಲಿ ಹೊಸದಾಗಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಬದಲಾವಣೆಯ ಹಿಂದಿನ ಉದ್ದೇಶ

ಅಂತಾರಾಷ್ಟ್ರೀಯ ವಲಸೆ ನಿಯಮಗಳ ಮಾನದಂಡಗಳಿಗೆ ಅನುಗುಣವಾಗಿ, ವ್ಯಕ್ತಿಯ ಗುರುತನ್ನು ನಿಖರವಾಗಿ ಪತ್ತೆಹಚ್ಚಲು ಈ ಕ್ರಮ ಕೈಗೊಳ್ಳಲಾಗಿದೆ. ಬೆಳೆಯುವ ಹಂತದಲ್ಲಿರುವ ಮಕ್ಕಳ ಮುಖಚಹರೆ ಮತ್ತು ದೈಹಿಕ ಲಕ್ಷಣಗಳು ವೇಗವಾಗಿ ಬದಲಾಗುತ್ತವೆ. ಹೀಗಾಗಿ, 18 ವರ್ಷ ತುಂಬಿದ ತಕ್ಷಣ ಹೊಸ ಬಯೋಮೆಟ್ರಿಕ್ ಮತ್ತು ಬೆರಳಚ್ಚುಗಳನ್ನು ಪಡೆದು ಪಾಸ್‌ಪೋರ್ಟ್ ನವೀಕರಿಸುವುದು ಅತ್ಯಗತ್ಯವಾಗಿದೆ. ಇದು ಭದ್ರತೆಯನ್ನು ಹೆಚ್ಚಿಸುವುದಲ್ಲದೆ, ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಗಡಿ ಭದ್ರತಾ ಸಿಬ್ಬಂದಿಗೆ ಮಗುವಿನ ಗುರುತನ್ನು ದೃಢೀಕರಿಸಲು ಸುಲಭವಾಗಿಸುತ್ತದೆ. ವಿದೇಶಾಂಗ ಸಚಿವಾಲಯವು ನಿಯಮ 8 (1) ರ ತಿದ್ದುಪಡಿಯಂತೆ, ಶೆಡ್ಯೂಲ್ IV ರ ಅಡಿಯಲ್ಲಿ ಪಾಸ್‌ಪೋರ್ಟ್ ಶುಲ್ಕಗಳನ್ನು ಪರಿಷ್ಕರಿಸಿದೆ. ನೂತನ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ. ವಯಸ್ಕರ ಸಾಮಾನ್ಯ ಪಾಸ್‌ಪೋರ್ಟ್ (36 ಪುಟ) 1,500 ರೂ.ನಿಂದ 2,500 ರೂ.ಗೆ ಏರಿಕೆ. ವಯಸ್ಕರ ಜಂಬೋ ಪಾಸ್‌ಪೋರ್ಟ್ (60 ಪುಟ) 2 ಸಾವಿರ ರೂ.ನಿಂದ 2,500 ರೂ.ಗೆ ಹೆಚ್ಚಳ, ತತ್ಕಾಲ್ (36 ಪುಟ) 3,500 ರೂ.ನಿಂದ 5,000 ರೂ.ಗೆ ಏರಿಕೆ, ತತ್ಕಾಲ್ 60 ಪುಟ 4 ಸಾವಿರ ರೂ.ನಿಂದ 6 ಸಾವಿರ ರೂ.ಗೆ ಭಾರಿ ಏರಿಕೆ. ಈ ಹೆಚ್ಚಳವು ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಆಧುನೀಕರಣ ಮತ್ತು ತಾಂತ್ರಿಕ ಸುಧಾರಣೆಗಾಗಿ ಮಾಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಪೋಷಕರು ಈ ಹೊಸ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಪಾಸ್‌ಪೋರ್ಟ್ ಅರ್ಜಿಗಳನ್ನು ಸಲ್ಲಿಸಬೇಕು. 'ಪಾಸ್‌ಪೋರ್ಟ್ ಸೇವಾ' (Passport Seva) ಅಧಿಕೃತ ವೆಬ್‌ಸೈಟ್ ಅಥವಾ ‘mPassport Seva’ ಮೊಬೈಲ್ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಯೊಂದಿಗೆ ಮಗುವಿನ ಜನನ ಪ್ರಮಾಣಪತ್ರ ಮತ್ತು ಪೋಷಕರ ಮಾನ್ಯವಾದ ಪಾಸ್‌ಪೋರ್ಟ್ ಪ್ರತಿಗಳನ್ನು ಲಗತ್ತಿಸುವುದು ಕಡ್ಡಾಯ. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿದ ನಂತರ, ನಿಗದಿಪಡಿಸಿದ ದಿನಾಂಕದಂದು ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಮಕ್ಕಳೊಂದಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಇ-ಪಾಸ್‌ಪೋರ್ಟ್ ಮತ್ತು ತಾಂತ್ರಿಕ ಮುನ್ನಡೆ

ಕೇಂದ್ರ ಸರ್ಕಾರವು ಭದ್ರತೆಯನ್ನು ದ್ವಿಗುಣಗೊಳಿಸಲು ಮತ್ತು ನಕಲಿ ಪಾಸ್‌ಪೋರ್ಟ್‌ಗಳನ್ನು ತಡೆಗಟ್ಟಲು 'ಇ-ಪಾಸ್‌ಪೋರ್ಟ್' (ಚಿಪ್ ಆಧಾರಿತ) ವ್ಯವಸ್ಥೆಯನ್ನು ಹಂತಹಂತವಾಗಿ ಜಾರಿಗೆ ತರುತ್ತಿದೆ. ಈ ಪಾಸ್‌ಪೋರ್ಟ್‌ಗಳಲ್ಲಿರುವ ಡಿಜಿಟಲ್ ಚಿಪ್‌ನಲ್ಲಿ ವ್ಯಕ್ತಿಯ ಬಯೋಮೆಟ್ರಿಕ್ ಮಾಹಿತಿ ಮತ್ತು ವೈಯಕ್ತಿಕ ವಿವರಗಳು ಭದ್ರವಾಗಿರುತ್ತವೆ. ಇದಕ್ಕಾಗಿ ಮಾಡಲಾಗುತ್ತಿರುವ ಶುಲ್ಕ ಪರಿಷ್ಕರಣೆಯು ಭವಿಷ್ಯದ ಡಿಜಿಟಲ್ ಇಂಡಿಯಾ ಆಕಾಂಕ್ಷೆಗಳಿಗೆ ಪೂರಕವಾಗಿದೆ. ಹೆಚ್ಚಿನ ಪೋಷಕರು ತಮ್ಮ ಮಕ್ಕಳ ಪಾಸ್‌ಪೋರ್ಟ್ ಸಿಂಧುತ್ವದ ಕುರಿತು ನಿರ್ಲಕ್ಷ್ಯ ವಹಿಸುತ್ತಾರೆ. ಆದರೆ, ಹೊಸ ನಿಯಮದ ಪ್ರಕಾರ ಮಗು 18 ವರ್ಷಕ್ಕೆ ಕಾಲಿಡುತ್ತಿದ್ದಂತೆ ಅದು ಅಮಾನ್ಯವಾಗುವುದರಿಂದ, ವಿದೇಶ ಪ್ರವಾಸದ ಯೋಜನೆ ಹಾಕಿಕೊಳ್ಳುವ ಮುನ್ನ ಪಾಸ್‌ಪೋರ್ಟ್‌ನ ಸಿಂಧುತ್ವವನ್ನು ಪರಿಶೀಲಿಸಿಕೊಳ್ಳುವುದು ಅತ್ಯಗತ್ಯ. ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸದಿದ್ದರೆ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದಾಗುವ ಸಾಧ್ಯತೆಗಳಿರುತ್ತವೆ.

Read More
Next Story