x

ಭಾರತದಲ್ಲಿ ಪುಸ್ತಕಗಳೇ ರಾಜಕೀಯ ದಾಳಗಳಾಗುತ್ತಿವೆಯೇ? ಓದುಗರ ಹಕ್ಕನ್ನು ಕಸಿದುಕೊಳ್ಳುತ್ತಿರುವವರು ಯಾರು?

ವೆಂಡಿ ಡೋನಿಗರ್ ಅವರ ‘ದಿ ಹಿಂದೂಸ್: ಆನ್ ಆಲ್ಟರ್ನೇಟಿವ್ ಹಿಸ್ಟರಿ’ ಕೃತಿಯ ವಿರುದ್ಧ ಕಾನೂನು ವಿವಾದ ಉಂಟಾದಾಗ, ಪೆಂಗ್ವಿನ್ ಸಂಸ್ಥೆ ಪುಸ್ತಕವನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿತ್ತು


Click the Play button to hear this message in audio format

ಭಾರತದಲ್ಲಿ ಪುಸ್ತಕಗಳು ಜ್ಞಾನ, ಸಾಹಿತ್ಯ ಮತ್ತು ವಿಚಾರ ವಿನಿಮಯದ ಮಾಧ್ಯಮಗಳಾಗಿರುವುದರ ಜೊತೆಗೆ, ಕೆಲವೊಮ್ಮೆ ರಾಜಕೀಯ, ಧರ್ಮ, ಜಾತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಸಂಘರ್ಷದ ಕೇಂದ್ರಬಿಂದುವಾಗುತ್ತಿವೆ. ಪುಸ್ತಕವೊಂದನ್ನು ಸರ್ಕಾರ ಅಧಿಕೃತವಾಗಿ ನಿಷೇಧಿಸದಿದ್ದರೂ, ಕಾನೂನು ವಿವಾದ, ರಾಜಕೀಯ ಒತ್ತಡ, ಪ್ರತಿಭಟನೆ, ಪಠ್ಯಕ್ರಮದಿಂದ ಕೈಬಿಡುವುದು ಅಥವಾ ಪ್ರಕಾಶಕರು ಹಿಂದೆ ಸರಿಯುವಂತಹ ಬೆಳವಣಿಗೆಗಳ ಮೂಲಕ ಅದು ಓದುಗರಿಂದ ದೂರವಾಗುವ ಹಲವು ಉದಾಹರಣೆಗಳು ಭಾರತದಲ್ಲಿವೆ. ಇದೀಗ ಸೋನಿಯಾ ಗಾಂಧಿ ಅವರ ಮುಂಬರುವ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಸುತ್ತಲಿನ ಬೆಳವಣಿಗೆಗಳು ಈ ಹಳೆಯ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿವೆ.

ನವೆಂಬರ್ 10, 2026ರಂದು ಬಿಡುಗಡೆಯಾಗಲಿರುವ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕವನ್ನು ಮೊದಲಿಗೆ ಪೆಂಗ್ವಿನ್ ಸಂಸ್ಥೆ ಪ್ರಕಟಿಸಬೇಕಿತ್ತು. ಆದರೆ ಪುಸ್ತಕದಲ್ಲಿನ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮತ್ತು ಚೀನಾ ಕುರಿತ ಕೆಲವು ಉಲ್ಲೇಖಗಳಲ್ಲಿ ಬದಲಾವಣೆ ಮಾಡುವಂತೆ ಸೂಚಿಸಲಾಗಿತ್ತು ಹಾಗೂ ಗಾಂಧಿ ಕುಟುಂಬ ಅದಕ್ಕೆ ಒಪ್ಪಲಿಲ್ಲ ಎಂಬ ವರದಿಗಳ ನಡುವೆ ಪೆಂಗ್ವಿನ್ ಪ್ರಕಟಣೆಯಿಂದ ಹಿಂದೆ ಸರಿದಿದೆ ಎನ್ನಲಾಗಿದೆ. ಇದೀಗ ಹಾರ್ಪರ್ ಕಾಲಿನ್ಸ್ ಈ ಪುಸ್ತಕವನ್ನು ಪ್ರಕಟಿಸುತ್ತಿದೆ.

ಪುಸ್ತಕ ಇನ್ನೂ ಓದುಗರ ಕೈ ಸೇರದಿದ್ದರೂ ಅದರ ಪ್ರಕಟಣೆಯೇ ರಾಜಕೀಯ ಚರ್ಚೆಯಾಗಿ ಮಾರ್ಪಟ್ಟಿರುವುದು, ಭಾರತದಲ್ಲಿ ಸಾಹಿತ್ಯ ಮತ್ತು ರಾಜಕೀಯದ ನಡುವಿನ ಸಂಘರ್ಷದ ಸ್ವರೂಪದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪುಸ್ತಕಗಳ ವಿಚಾರದಲ್ಲಿ ರಾಜಕೀಯ ಸಂಘರ್ಷ ಹೊಸದಲ್ಲ

ಪುಸ್ತಕಗಳ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪದ ಆರೋಪಗಳು ಭಾರತದಲ್ಲಿ ಹೊಸದಲ್ಲ. 2010ರಲ್ಲಿ ಸ್ಪ್ಯಾನಿಷ್ ಲೇಖಕ ಜೇವಿಯರ್ ಮೊರೊ ಬರೆದ ‘ದಿ ರೆಡ್ ಸಾರಿ’ ಕೃತಿಯ ವಿರುದ್ಧ ಕಾಂಗ್ರೆಸ್ ಕಾನೂನು ಕ್ರಮಕ್ಕೆ ಮುಂದಾಗಿತ್ತು. ಪುಸ್ತಕದಲ್ಲಿ ಅರ್ಧಸತ್ಯ ಹಾಗೂ ಮಾನನಷ್ಟಕರ ಅಂಶಗಳಿವೆ ಎಂಬ ಆಕ್ಷೇಪ ವ್ಯಕ್ತವಾಗಿತ್ತು.

ಇದಕ್ಕೂ ಮುನ್ನ 2009ರಲ್ಲಿ ಬಿಜೆಪಿ ನಾಯಕ ಜಸ್ವಂತ್ ಸಿಂಗ್ ಅವರ ‘ಜಿನ್ನಾ: ಇಂಡಿಯಾ-ಪಾರ್ಟಿಷನ್-ಇಂಡಿಪೆಂಡೆನ್ಸ್’ ಕೃತಿ ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಪುಸ್ತಕದಲ್ಲಿ ಪ್ರಾಯೋಗಿಕ ರಾಜಕಾರಣಿ ಎಂದು ಬಣ್ಣಿಸಿರುವುದು ಬಿಜೆಪಿಯಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಬಳಿಕ ಜಸ್ವಂತ್ ಸಿಂಗ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಗುಜರಾತ್ ಸರ್ಕಾರ ಪುಸ್ತಕಕ್ಕೆ ನಿಷೇಧ ಹೇರಿದ್ದರೂ, ನಂತರ ಹೈಕೋರ್ಟ್ ಆ ನಿರ್ಧಾರವನ್ನು ರದ್ದುಗೊಳಿಸಿತ್ತು.

ವಿವಾದ ಹಿಂಸಾಚಾರಕ್ಕೆ ತಿರುಗಿದಾಗ

ಪುಸ್ತಕದ ವಿಚಾರದಲ್ಲಿ ಉಂಟಾಗುವ ವಿರೋಧ ಕೆಲವೊಮ್ಮೆ ಹಿಂಸಾಚಾರಕ್ಕೂ ತಿರುಗಿದೆ. 2003ರಲ್ಲಿ ಜೇಮ್ಸ್ ಲೇನ್ ಬರೆದ ‘ಶಿವಾಜಿ: ಹಿಂದೂ ಕಿಂಗ್ ಇನ್ ಇಸ್ಲಾಮಿಕ್ ಇಂಡಿಯಾ’ ಕೃತಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪುಣೆಯ ಭಂಡಾರ್ಕರ್ ಸಂಶೋಧನಾ ಸಂಸ್ಥೆಯ ಮೇಲೆ ದಾಳಿ ನಡೆದಿದ್ದು, ಅಪರೂಪದ ದಾಖಲೆಗಳು ಮತ್ತು ಹಸ್ತಪ್ರತಿಗಳಿಗೆ ಹಾನಿಯಾಗಿತ್ತು. ವಿವಾದದ ಹಿನ್ನೆಲೆಯಲ್ಲಿ ಪುಸ್ತಕವನ್ನು ಪ್ರಕಾಶಕರು ಹಿಂಪಡೆಯಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.

2015ರಲ್ಲಿ ತಮಿಳು ಲೇಖಕ ಪೆರುಮಾಳ್ ಮುರುಗನ್ ಅವರ ‘ಮಾಧೋರುಬಾಗನ್’ ಕಾದಂಬರಿಯ ವಿರುದ್ಧ ಧಾರ್ಮಿಕ ಮತ್ತು ಜಾತಿ ಸಂಘಟನೆಗಳಿಂದ ಪ್ರತಿಭಟನೆ ನಡೆದಿತ್ತು. ಒತ್ತಡದ ಹಿನ್ನೆಲೆಯಲ್ಲಿ ಬರವಣಿಗೆಯಿಂದ ಹಿಂದೆ ಸರಿಯುವುದಾಗಿ ಲೇಖಕರು ಘೋಷಿಸಿದ್ದರು. ಬಳಿಕ ಮದ್ರಾಸ್ ಹೈಕೋರ್ಟ್ ಅವರ ಪರವಾಗಿ ತೀರ್ಪು ನೀಡಿತ್ತು.

ಪಠ್ಯಕ್ರಮದಿಂದ ಪುಸ್ತಕ ಕಣ್ಮರೆ

ಪುಸ್ತಕವೊಂದನ್ನು ನೇರವಾಗಿ ನಿಷೇಧಿಸದೆ ಓದುಗರಿಂದ ದೂರವಿಡಲು ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮದಿಂದ ಅದನ್ನು ತೆಗೆದುಹಾಕುವ ಮಾರ್ಗವೂ ಬಳಕೆಯಾಗಿದೆ. ಎ.ಕೆ. ರಾಮಾನುಜನ್ ಅವರ ‘ತ್ರೀ ಹಂಡ್ರೆಡ್ ರಾಮಾಯಣಾಸ್’ ಪ್ರಬಂಧವನ್ನು ಪ್ರತಿಭಟನೆಗಳ ಬಳಿಕ ದೆಹಲಿ ವಿಶ್ವವಿದ್ಯಾಲಯದ ಪಠ್ಯಕ್ರಮದಿಂದ ಕೈಬಿಡಲಾಗಿತ್ತು. ಇದೇ ರೀತಿ ರೋಹಿಂಟನ್ ಮಿಸ್ತ್ರಿ ಅವರ ‘ಸಚ್ ಎ ಲಾಂಗ್ ಜರ್ನಿ’ ಕಾದಂಬರಿಯನ್ನೂ ಮುಂಬೈ ವಿಶ್ವವಿದ್ಯಾಲಯದ ಪಠ್ಯಕ್ರಮದಿಂದ ತೆಗೆದುಹಾಕಲಾಗಿತ್ತು.

ವೆಂಡಿ ಡೋನಿಗರ್ ಅವರ ‘ದಿ ಹಿಂದೂಸ್: ಆನ್ ಆಲ್ಟರ್ನೇಟಿವ್ ಹಿಸ್ಟರಿ’ ಕೃತಿಯ ವಿರುದ್ಧ ಕಾನೂನು ವಿವಾದ ಉಂಟಾದಾಗ, ಪೆಂಗ್ವಿನ್ ಸಂಸ್ಥೆ ಪುಸ್ತಕವನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿತ್ತು. ಇಂತಹ ಪ್ರಕರಣಗಳು ಪುಸ್ತಕದ ಮೇಲೆ ನೇರ ನಿಷೇಧವಿಲ್ಲದಿದ್ದರೂ, ಅದರ ಲಭ್ಯತೆಯನ್ನೇ ಪ್ರಶ್ನಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬುದನ್ನು ತೋರಿಸಿವೆ.

ಸೆನ್ಸಾರ್ ಮಂಡಳಿ ಇಲ್ಲದಿದ್ದರೂ ಒತ್ತಡದ ಪ್ರಶ್ನೆ

ಭಾರತದಲ್ಲಿ ಪುಸ್ತಕಗಳನ್ನು ಪ್ರಕಟಿಸುವ ಮೊದಲು ಪರಿಶೀಲಿಸುವ ಪ್ರತ್ಯೇಕ ಸೆನ್ಸಾರ್ ಮಂಡಳಿ ಇಲ್ಲ. ಆದರೂ ಸರ್ಕಾರದ ಕ್ರಮ, ಕಾನೂನು ಹೋರಾಟದ ಭೀತಿ, ಸಂಘಟನೆಗಳ ಪ್ರತಿಭಟನೆ ಹಾಗೂ ಸಾಮಾಜಿಕ ಒತ್ತಡಗಳು ಪ್ರಕಾಶಕರು ಮತ್ತು ಲೇಖಕರ ನಿರ್ಧಾರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಪುಸ್ತಕವೊಂದರಲ್ಲಿರುವ ವಿಚಾರಗಳನ್ನು ಒಪ್ಪದಿರುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಅದನ್ನು ವಿಮರ್ಶಿಸಬಹುದು, ಪ್ರಶ್ನಿಸಬಹುದು ಅಥವಾ ತಿರಸ್ಕರಿಸಬಹುದು. ಆದರೆ ಓದುಗರು ಏನನ್ನು ಓದಬೇಕು, ಏನನ್ನು ಓದಬಾರದು ಎಂಬುದನ್ನು ರಾಜಕೀಯ ನಾಯಕರು, ಸಂಘಟನೆಗಳು ಅಥವಾ ಒತ್ತಡದ ಗುಂಪುಗಳು ನಿರ್ಧರಿಸಬೇಕೇ ಎಂಬುದು ಮೂಲ ಪ್ರಶ್ನೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ವಿಚಾರಕ್ಕೆ ವಿಚಾರದಿಂದಲೇ ಉತ್ತರ ನೀಡಬೇಕೇ ಹೊರತು ಪುಸ್ತಕವನ್ನೇ ಓದುಗರಿಂದ ದೂರವಿಡುವುದು ಸರಿಯೇ ಎಂಬ ಚರ್ಚೆ ಮುಂದುವರಿದಿದೆ.

Read More
Next Story