
ಸಾಂದರ್ಭಿಕ ಚಿತ್ರ
ರಕ್ಷಣಾ ನೀತಿ ಬದಲಾವಣೆ: 12 ಪರಮಾಣು ಸಿಡಿತಲೆ ಸಕ್ರಿಯವಾಗಿ ನಿಯೋಜಿಸಿದ ಭಾರತ!
ಸಿಪ್ರಿ ವರದಿಯ ಪ್ರಕಾರ, ಜೂ. 2026 ರ ಹೊತ್ತಿಗೆ ಭಾರತದ ಬಳಿ ಇರುವ ಒಟ್ಟು ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆ ಸರಿಸುಮಾರು 190 ಕ್ಕೆ ಏರಿಕೆಯಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಅತ್ಯಲ್ಪ ಹೆಚ್ಚಳವಾಗಿದೆ.
ಭಾರತವು ತನ್ನ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಾಚರಣೆಯ ಸನ್ನದ್ಧತೆಯಲ್ಲಿ ಅತ್ಯಂತ ಪ್ರಮುಖ ಹಾಗೂ ಐತಿಹಾಸಿಕ ಬದಲಾವಣೆಯೊಂದನ್ನು ಮಾಡಿಕೊಂಡಿದೆ. ಇದೇ ಮೊದಲ ಬಾರಿಗೆ ದೇಶವು 12 ಪರಮಾಣು ಸಿಡಿತಲೆಗಳನ್ನು ಸಕ್ರಿಯವಾಗಿ ನಿಯೋಜಿಸಿದೆ ಎಂದು ಜಾಗತಿಕ ರಕ್ಷಣಾ ವಿದ್ಯಮಾನಗಳ ಮೇಲೆ ಕಣ್ಣಿಡುವ 'ಸ್ಟಾಕ್ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ' (SIPRI) ತನ್ನ ಇತ್ತೀಚಿನ ವರದಿಯಲ್ಲಿ ಬಹಿರಂಗಪಡಿಸಿದೆ.
ಶಾಂತಿಕಾಲದಲ್ಲಿ ಪರಮಾಣು ಸಿಡಿತಲೆಗಳು ಮತ್ತು ಅವುಗಳನ್ನು ಉಡಾವಣೆ ಮಾಡುವ ಕ್ಷಿಪಣಿ ವ್ಯವಸ್ಥೆಗಳನ್ನು ಬೇರೆ ಬೇರೆಯಾಗಿ ಸಂಗ್ರಹಿಸಿಡುವ ಭಾರತದ ದಶಕಗಳ ಹಳೆಯ ರಕ್ಷಣಾ ನೀತಿಯಿಂದ ದೇಶವು ಈಗ ಗಮನಾರ್ಹವಾಗಿ ಹೊರಬಂದಿರುವುದನ್ನು ಈ ಕ್ರಮವು ಸೂಚಿಸುತ್ತದೆ ಎಂದು ವರದಿ ಹೇಳಿದೆ.
ನಿಯೋಜನೆಯ ಶೈಲಿಯಲ್ಲಿ ಬದಲಾವಣೆ
ಈ ಹಿಂದೆ ಭಾರತವು ಶಾಂತಿಯ ಸಮಯದಲ್ಲಿ ತನ್ನ ಪರಮಾಣು ಸಿಡಿತಲೆಗಳನ್ನು ಲಾಂಚರ್ಗಳಿಂದ ಪ್ರತ್ಯೇಕವಾಗಿ ಇಡುತ್ತದೆ ಎಂದೇ ನಂಬಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಕ್ಷಿಪಣಿಗಳನ್ನು ವಿಶೇಷ ಕ್ಯಾನಿಸ್ಟರ್ಗಳಲ್ಲಿ (ಡಬ್ಬಿಗಳಲ್ಲಿ) ಸುರಕ್ಷಿತವಾಗಿ ಇರಿಸುವ ತಂತ್ರಜ್ಞಾನ ಮತ್ತು ಸಮುದ್ರದಾಳದಲ್ಲಿ ನಿರಂತರವಾಗಿ 'ಪರಮಾಣು ತಡೆಗಟ್ಟುವಿಕೆ ಗಸ್ತು' ನಡೆಸುತ್ತಿರುವ ಕ್ರಮಗಳು ಭಾರತದ ರಕ್ಷಣಾ ನೀತಿ ಬದಲಾಗಿರುವುದಕ್ಕೆ ಸಾಕ್ಷಿಯಾಗಿದೆ. ಅಂದರೆ, ತುರ್ತು ಪರಿಸ್ಥಿತಿಯನ್ನು ಎದುರಿಸಲು ಭಾರತವು ಶಾಂತಿಕಾಲದಲ್ಲೂ ತನ್ನ ಕೆಲವು ಸಿಡಿತಲೆಗಳನ್ನು ಉಡಾವಣಾ ಸಾಧನಗಳೊಂದಿಗೆ ಜೋಡಿಸಿ ಸನ್ನದ್ಧ ಸ್ಥಿತಿಯಲ್ಲಿ ಇಡಲು ಆರಂಭಿಸಿದೆ ಎಂದು ಸಿಪ್ರಿ ಅಂದಾಜಿಸಿದೆ.
ಹೆಚ್ಚುತ್ತಿದೆ ಪರಮಾಣು ಶಸ್ತ್ರಾಗಾರದ ಬಲ
ಸಿಪ್ರಿ ವರದಿಯ ಪ್ರಕಾರ, ಜೂ. 2026 ರ ಹೊತ್ತಿಗೆ ಭಾರತದ ಬಳಿ ಇರುವ ಒಟ್ಟು ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆ ಸರಿಸುಮಾರು 190 ಕ್ಕೆ ಏರಿಕೆಯಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಅತ್ಯಲ್ಪ ಹೆಚ್ಚಳವಾಗಿದೆ. ಪ್ರಸ್ತುತ ಭಾರತವು ಭೂಮಿ, ಆಕಾಶ ಮತ್ತು ಸಮುದ್ರದಾಳದ (SSBN ಜಲಾಂತರ್ಗಾಮಿ) ಮೂರೂ ರಂಗಗಳಿಂದ ಪರಮಾಣು ದಾಳಿ ನಡೆಸಬಲ್ಲ 'ಪರಮಾಣು ತ್ರಿಕೋನ' ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ನೌಕಾಪಡೆಗೆ ಆನೆ ಬಲ ತಂದ ಜಲಾಂತರ್ಗಾಮಿಗಳು
ಭಾರತವು ತನ್ನ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಗಳ (SSBN) ಸಂಖ್ಯೆಯನ್ನು ಕ್ರಮೇಣ ವಿಸ್ತರಿಸುತ್ತಿದೆ. ಸದ್ಯ ಭಾರತೀಯ ನೌಕಾಪಡೆಯು ಮೂರು ಪ್ರಮುಖ ಪರಮಾಣು ಜಲಾಂತರ್ಗಾಮಿಗಳನ್ನು ಹೊಂದಿದೆ. ಐಎನ್ಎಸ್ ಅರಿಹಂತ್, ಐಎನ್ಎಸ್ ಅರಿಘಾಟ್, ಐಎನ್ಎಸ್ ಅರಿಧಮನ್ ಇದು ಇತ್ತೀಚೆಗಷ್ಟೇ ಅಂದರೆ ಏಪ್ರಿಲ್ 2026 ರಲ್ಲಿ ಅಧಿಕೃತವಾಗಿ ಸೇವೆಗೆ ಸೇರ್ಪಡೆಯಾಗಿದೆ.
ಭವಿಷ್ಯದ ಸಿದ್ಧತೆಗಳು
ಭಾರತದ 4ನೇ ಪರಮಾಣು ಜಲಾಂತರ್ಗಾಮಿ ನೌಕೆಯಾದ 'ಅರಿಸುದನ್' 2027 ರ ವೇಳೆಗೆ ನೌಕಾಪಡೆಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಉಪಗ್ರಹ ಚಿತ್ರಗಳ ಪ್ರಕಾರ, 'ಅರಿಧಮನ್' ಮತ್ತು 'ಅರಿಸುದನ್' ಜಲಾಂತರ್ಗಾಮಿಗಳು ಮೊದಲ ಎರಡು ಜಲಾಂತರ್ಗಾಮಿಗಳಿಗಿಂತ 16 ರಿಂದ 18 ಮೀಟರ್ ಹೆಚ್ಚು ಉದ್ದವಿದ್ದು, ಕ್ಷಿಪಣಿಗಳನ್ನು ಹೊತ್ತೊಯ್ಯುವ ಡಬಲ್ ಸಾಮರ್ಥ್ಯವ ಹೊಂದಿವೆ. ಭಾರತವು ಇದೀಗ ಹೊಸ ಪೀಳಿಗೆಯ ಅತ್ಯಾಧುನಿಕ ಜಲಾಂತರ್ಗಾಮಿಗಳ ಅಭಿವೃದ್ಧಿಗಾಗಿ 'S5' ಎಂಬ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಇದು ಪೂರ್ಣಗೊಂಡರೆ ಭಾರತವು ಏಕಕಾಲದಲ್ಲಿ 6 ರಿಂದ 8 ಪರಮಾಣು ಜಲಾಂತರ್ಗಾಮಿಗಳನ್ನು ಸಮುದ್ರದಲ್ಲಿ ಕಾರ್ಯಾಚರಣೆಗೆ ಇಳಿಸಬಹುದಾಗಿದೆ.
'ಮೊದಲು ಬಳಸುವುದಿಲ್ಲ' ನೀತಿಗೆ ಬದ್ಧ
ಪರಮಾಣು ನಿಯೋಜನೆಯಲ್ಲಿ ತಾಂತ್ರಿಕ ಬದಲಾವಣೆಗಳನ್ನು ಮಾಡಿಕೊಂಡಿದ್ದರೂ, ಭಾರತವು ತನ್ನ ಜಾಗತಿಕ ನೀತಿಯಾದ "ನೋ ಫಸ್ಟ್ ಯೂಸ್" (ಮೊದಲು ಬಳಸುವುದಿಲ್ಲ) ಸಿದ್ಧಾಂತಕ್ಕೆ ಇಂದಿಗೂ ಬದ್ಧವಾಗಿದೆ. ಯಾವುದೇ ದೇಶದ ಮೇಲೆ ಭಾರತವು ಮೊದಲು ಪರಮಾಣು ದಾಳಿ ಮಾಡುವುದಿಲ್ಲ, ಆದರೆ ಶತ್ರು ದೇಶಗಳು ದಾಳಿ ಮಾಡಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಸದಾ ಸನ್ನದ್ಧವಾಗಿರುತ್ತದೆ ಎಂಬುದನ್ನು ಭಾರತ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

