ಕೇಂದ್ರ ಬಜೆಟ್ 2026: ಆಪರೇಷನ್ ಸಿಂದೂರ ಎಫೆಕ್ಟ್​​; ರಕ್ಷಣಾ ವಲಯಕ್ಕೆ 7.85 ಲಕ್ಷ ಕೋಟಿ ರೂ.
x

ಕೇಂದ್ರ ಬಜೆಟ್ 2026: ಆಪರೇಷನ್ ಸಿಂದೂರ ಎಫೆಕ್ಟ್​​; ರಕ್ಷಣಾ ವಲಯಕ್ಕೆ 7.85 ಲಕ್ಷ ಕೋಟಿ ರೂ.

ಬಂಡವಾಳ ವೆಚ್ಚದಲ್ಲಿ ಭಾರಿ ಏರಿಕೆ ಆಗಿದ್ದು, ಹೊಸ ಯುದ್ಧ ವಿಮಾನಗಳು, ಕ್ಷಿಪಣಿಗಳು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಳಸಲಾಗುವ ಈ ನಿಧಿಯನ್ನು ಶೇ. 28 ರಷ್ಟು ಹೆಚ್ಚಿಸಲಾಗಿದೆ.


Click the Play button to hear this message in audio format

ಕಳೆದ ವರ್ಷ ಪಾಕಿಸ್ತಾನದೊಂದಿಗೆ ನಡೆದ ಆಪರೇಷನ್ ಸಿಂದೂರ ಸಂಘರ್ಷ ಮತ್ತು ಗಡಿಯಲ್ಲಿ ಚೀನಾದ ನಿರಂತರ ಉಪಟಳದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, 2026ರ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ಐತಿಹಾಸಿಕ ಅನುದಾನ ನೀಡುವ ಮೂಲಕ ಸೇನಾ ಬಲವರ್ಧನೆಗೆ ಮುಂದಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದಲ್ಲಿ ರಕ್ಷಣಾ ವಲಯದ ಬಗ್ಗೆ ಹೆಚ್ಚಿನ ಪ್ರಸ್ತಾಪವಿಲ್ಲದಿದ್ದರೂ, ಅಂಕಿಅಂಶಗಳಲ್ಲಿ 'ಸರ್ಜಿಕಲ್ ಸ್ಟ್ರೈಕ್' ಮಾದರಿಯ ಅನುದಾನ ಹಂಚಿಕೆಯಾಗಿದೆ. ಪ್ರಸಕ್ತ ಆರ್ಥಿಕ ವರ್ಷಕ್ಕೆ ರಕ್ಷಣಾ ವಲಯದ ಒಟ್ಟು ಬಜೆಟ್ ಅನ್ನು ಬರೋಬ್ಬರಿ 7.85 ಲಕ್ಷ ಕೋಟಿ ರೂಪಾಯಿಗೆ ಏರಿಸಲಾಗಿದೆ. ಕಳೆದ ವರ್ಷ ಈ ಮೊತ್ತ 6.81 ಲಕ್ಷ ಕೋಟಿ ರೂ.ಗಳಷ್ಟಿತ್ತು. ಅಂದರೆ, ಕಳೆದ ಸಾಲಿಗೆ ಹೋಲಿಸಿದರೆ ರಕ್ಷಣಾ ಬಜೆಟ್‌ನಲ್ಲಿ ಸುಮಾರು ಶೇ. 15 ರಷ್ಟು ಭಾರಿ ಏರಿಕೆ ಮಾಡಲಾಗಿದೆ.

ಶಸ್ತ್ರಾಸ್ತ್ರ ಖರೀದಿಗೆ ಸಿಂಹಪಾಲು

ರಕ್ಷಣಾ ಬಜೆಟ್‌ನ ಪ್ರಮುಖ ಹೈಲೈಟ್ ಎಂದರೆ ಬಂಡವಾಳ ವೆಚ್ಚದಲ್ಲಿ (Capital Expenditure) ಆಗಿರುವ ಭಾರಿ ಏರಿಕೆ. ಹೊಸ ಯುದ್ಧ ವಿಮಾನಗಳು, ಕ್ಷಿಪಣಿಗಳು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಳಸಲಾಗುವ ಈ ನಿಧಿಯನ್ನು ಶೇ. 28 ರಷ್ಟು ಹೆಚ್ಚಿಸಲಾಗಿದೆ. ಕಳೆದ ಬಾರಿ 1.80 ಲಕ್ಷ ಕೋಟಿ ರೂ. ಇದ್ದ ಈ ಮೊತ್ತವನ್ನು, ಈ ಬಾರಿ 2.31 ಲಕ್ಷ ಕೋಟಿ ರೂಪಾಯಿಗೆ ಏರಿಸಲಾಗಿದೆ.

ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಸಾರ್ವಜನಿಕ ವಲಯದ ಘಟಕಗಳು (Public Sector Units) ವಿಮಾನಗಳ ಭಾಗಗಳನ್ನು ತಯಾರಿಸಲು, ರಿಪೇರಿ ಮಾಡಲು ಅಥವಾ ಓವರ್‌ಹಾಲಿಂಗ್ ಮಾಡಲು ಆಮದು ಮಾಡಿಕೊಳ್ಳುವ ಕಚ್ಚಾ ವಸ್ತುಗಳಿಗೆ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಇದು ರಕ್ಷಣಾ ವಲಯದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ಪಾಕಿಸ್ತಾನ ಮತ್ತು ಚೀನಾ ಗಡಿಗಳಲ್ಲಿ ಎದುರಾಗುತ್ತಿರುವ ಅವಳಿ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸೇನೆಯನ್ನು ಸಜ್ಜುಗೊಳಿಸುವುದು ಮತ್ತು ಆಧುನೀಕರಣಗೊಳಿಸುವುದು ಮೋದಿ ಸರ್ಕಾರದ ಪ್ರಮುಖ ಆದ್ಯತೆ ಎಂಬುದನ್ನು ಈ ಬಜೆಟ್ ಹಂಚಿಕೆ ಸ್ಪಷ್ಟಪಡಿಸಿದೆ. ಅಲ್ಲದೆ, ರಕ್ಷಣಾ ವಲಯದಲ್ಲಿ 'ಆತ್ಮನಿರ್ಭರತೆ' ಸಾಧಿಸಲು ಮತ್ತು ದೇಶೀಯವಾಗಿ ಶಸ್ತ್ರಾಸ್ತ್ರ ಉತ್ಪಾದನೆಗೆ ಉತ್ತೇಜನ ನೀಡಲು ಈ ಹೆಚ್ಚುವರಿ ಅನುದಾನವನ್ನು ಬಳಸಿಕೊಳ್ಳಲಾಗುವುದು.

Read More
Next Story