ಇಂದಿನಿಂದ ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026- ಜಾಗತಿಕ ಟೆಕ್ ದಿಗ್ಗಜರ ಸಮಾಗಮ!
x
ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026

ಇಂದಿನಿಂದ 'ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026'- ಜಾಗತಿಕ ಟೆಕ್ ದಿಗ್ಗಜರ ಸಮಾಗಮ!

ದೆಹಲಿಯ ಭಾರತ್ ಮಂಟಪದಲ್ಲಿ ಪ್ರಧಾನಿ ಮೋದಿ ಇಂದಿನಿಂದ 'ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್ 2026' ಉದ್ಘಾಟಿಸಲಿದ್ದಾರೆ. ಸುಂದರ್ ಪಿಚೈ ಸೇರಿದಂತೆ ಜಾಗತಿಕ ಟೆಕ್ ದಿಗ್ಗಜರು ಭಾಗವಹಿಸುತ್ತಿದ್ದಾರೆ.


ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಲಿರುವ ಬಹುನಿರೀಕ್ಷಿತ 'ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026'ಗೆ ಇಂದು ಸಂಜೆ ಚಾಲನೆ ಸಿಗಲಿದೆ. ದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಐತಿಹಾಸಿಕ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.

ಜಾಗತಿಕ ದಕ್ಷಿಣದ ಮೊದಲ ಅತಿದೊಡ್ಡ AI ಸಮಾವೇಶ

ಫೆಬ್ರವರಿ 16 ರಿಂದ 20 ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಈ ಶೃಂಗಸಭೆಯು ಜಾಗತಿಕ ಮಟ್ಟದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಈ ಹಿಂದೆ ಯುಕೆ, ದಕ್ಷಿಣ ಕೊರಿಯಾ ಮತ್ತು ಫ್ರಾನ್ಸ್‌ನಲ್ಲಿ AI ಸಮಾವೇಶಗಳು ನಡೆದಿದ್ದವು. ಇದು ನಾಲ್ಕನೇ ಆವೃತ್ತಿಯಾಗಿದ್ದು, 'ಗ್ಲೋಬಲ್ ಸೌತ್' (ಜಾಗತಿಕ ದಕ್ಷಿಣದ ರಾಷ್ಟ್ರಗಳು) ವಲಯದಲ್ಲಿ ನಡೆಯುತ್ತಿರುವ ಮೊದಲ ಬೃಹತ್ ಜಾಗತಿಕ AI ಶೃಂಗಸಭೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಯಾರೆಲ್ಲಾ ಭಾಗವಹಿಸಲಿದ್ದಾರೆ?

ಈ ಸಮಾವೇಶವು ವಿಶ್ವದ ಪ್ರಭಾವಿ ನಾಯಕರು ಮತ್ತು ತಂತ್ರಜ್ಞಾನ ಕ್ಷೇತ್ರದ ದಿಗ್ಗಜರಿಗೆ ಸಾಕ್ಷಿಯಾಗಲಿದೆ. ಗೂಗಲ್ ಸಿಇಒ ಸುಂದರ್ ಪಿಚೈ, ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್‌ಮನ್, ಮೈಕ್ರೋಸಾಫ್ಟ್ ಅಧ್ಯಕ್ಷ ಬ್ರಾಡ್ ಸ್ಮಿತ್, ಆಂಥ್ರೋಪಿಕ್ ಸಿಇಒ ಡಾರಿಯೊ ಅಮೋಡೆ ಸೇರಿದಂತೆ ಹಲವರು ಭಾಗವಹಿಸುವ ನಿರೀಕ್ಷೆಯಿದೆ.

ಫ್ರಾನ್ಸ್, ಬ್ರೆಜಿಲ್, ನೆದರ್ಲ್ಯಾಂಡ್ಸ್, ಸ್ವಿಟ್ಜರ್ಲೆಂಡ್, ಶ್ರೀಲಂಕಾ ಮತ್ತು ಭೂತಾನ್ ಸೇರಿದಂತೆ ಸುಮಾರು 20 ದೇಶಗಳ ನಾಯಕರು ಆಗಮಿಸಲಿದ್ದಾರೆ. ಇವರ ಜೊತೆಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹಾಗೂ ಬ್ರಿಟನ್ ಮಾಜಿ ಪ್ರಧಾನಿಗಳಾದ ರಿಷಿ ಸುನಕ್ ಮತ್ತು ಟೋನಿ ಬ್ಲೇರ್ ಉಪಸ್ಥಿತರಿರಲಿದ್ದಾರೆ. ಇನ್ನು ಅನಿವಾರ್ಯ ಕಾರಣಗಳಿಂದ ಎನ್ವಿಡಿಯಾ (NVIDIA) ಸಿಇಒ ಜೆನ್ಸನ್ ಹುವಾಂಗ್ ಅವರ ಭೇಟಿ ರದ್ದಾಗಿದೆ.

ಸಮಾವೇಶದ ಮುಖ್ಯಾಂಶಗಳು

ಸುಮಾರು 70,000 ಚದರ ಮೀಟರ್ ವ್ಯಾಪ್ತಿಯ 10 ಅರೆನಾಗಳಲ್ಲಿ ಈ ಬೃಹತ್ ಎಕ್ಸ್‌ಪೋ ಹರಡಿಕೊಂಡಿದ್ದು, ಆಸ್ಟ್ರೇಲಿಯಾ, ಜಪಾನ್ ಮತ್ತು ಯುಕೆ ಸೇರಿದಂತೆ 13 ದೇಶಗಳ ಪೆವಿಲಿಯನ್‌ಗಳು ಇಲ್ಲಿರಲಿವೆ. 'ಜನರು, ಗ್ರಹ ಮತ್ತು ಪ್ರಗತಿ' ಎಂಬ ಮೂರು ಆಯಾಮಗಳ ಆಧಾರಿತ ಲೈವ್ ಪ್ರದರ್ಶನಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ಮಂಗಳವಾರದಂದು (ಫೆಬ್ರವರಿ 17) ವಿಶೇಷವಾಗಿ ಮಹಿಳೆಯರಿಗಾಗಿ 'ಆಲ್ ವುಮನ್ ಹ್ಯಾಕಥಾನ್' ಅನ್ನು ಆಯೋಜಿಸಲಾಗಿದೆ. ಈ ಐದು ದಿನಗಳ ಸಮಾವೇಶದಲ್ಲಿ ಒಟ್ಟು 500ಕ್ಕೂ ಹೆಚ್ಚು ಅವಧಿಗಳಲ್ಲಿ 3,000ಕ್ಕೂ ಅಧಿಕ ಜಾಗತಿಕ ಭಾಷಣಕಾರರು ಪಾಲ್ಗೊಳ್ಳುತ್ತಿದ್ದು, ಒಟ್ಟಾರೆ 2.5 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆಯಿದೆ.

ಭಾರತದ ಮೇಲೆ ಜಾಗತಿಕ ಕಂಪನಿಗಳ ಕಣ್ಣು

ವಿಶ್ವದ ಒಟ್ಟು ದತ್ತಾಂಶದಲ್ಲಿ (Data) ಶೇ. 20 ರಷ್ಟು ಭಾರತದಲ್ಲೇ ಉತ್ಪತ್ತಿಯಾಗುತ್ತಿದೆ. ಜೊತೆಗೆ ವಿಶ್ವದ ಎರಡನೇ ಅತಿದೊಡ್ಡ AI ಕಾರ್ಯಪಡೆ ಭಾರತದಲ್ಲಿದೆ. ಇದೇ ಕಾರಣಕ್ಕೆ ಮೈಕ್ರೋಸಾಫ್ಟ್ ಭಾರತದಲ್ಲಿ AI ಮೂಲಸೌಕರ್ಯಕ್ಕಾಗಿ 17.5 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಗೂಗಲ್ ಮತ್ತು ಓಪನ್ ಎಐ ಕೂಡ ಭಾರತದಲ್ಲಿ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸುತ್ತಿವೆ.

ಸಾರ್ವಜನಿಕರಿಗೆ ಪ್ರವೇಶ ಮತ್ತು ನೋಂದಣಿ ಮಾಹಿತಿ

ಈ ಸಮಾವೇಶಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಯಾವುದೇ ಪ್ರವೇಶ ಶುಲ್ಕವನ್ನು ವಿಧಿಸಲಾಗುತ್ತಿಲ್ಲ. ಆಸಕ್ತರು ಡಿಜಿಯಾತ್ರಾ (DigiYatra) ಅಥವಾ 'ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ' ಆಪ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಇಂದು (ಫೆಬ್ರವರಿ 16) ಪ್ರಧಾನಿಯವರಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿರುವುದರಿಂದ ಎಕ್ಸ್‌ಪೋ ವಲಯ ಸಾರ್ವಜನಿಕರಿಗೆ ಮುಚ್ಚಿರುತ್ತದೆ, ಆದರೆ ಫೆಬ್ರವರಿ 17 ರಿಂದ 20 ರವರೆಗೆ ಎಲ್ಲರಿಗೂ ಮುಕ್ತ ಪ್ರವೇಶವಿರುತ್ತದೆ. ಭೇಟಿ ನೀಡುವವರಿಗಾಗಿ ಪುರಾಣ ಕಿಲಾ, ಜೂ ಪಾರ್ಕಿಂಗ್ ಮತ್ತು ಜೆಎಲ್‌ಎನ್ ಸ್ಟೇಡಿಯಂನಿಂದ ಭಾರತ್ ಮಂಟಪಕ್ಕೆ ಉಚಿತ ಶಟಲ್ ಬಸ್ ಮತ್ತು ಗಾಲ್ಫ್ ಕಾರ್ಟ್ ಸೌಲಭ್ಯವನ್ನು ಸಹ ಕಲ್ಪಿಸಲಾಗಿದೆ.

ಫೆಬ್ರವರಿ 19 ರಂದು ಪ್ರಧಾನಿ ಮೋದಿ ಅವರು ಮುಖ್ಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಜಾಗತಿಕ ಕಂಪನಿಗಳ 30-40 ಸಿಇಒಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಈ ಶೃಂಗಸಭೆಯು ಭಾರತವನ್ನು ಜಾಗತಿಕ AI ನಕ್ಷೆಯಲ್ಲಿ ಉತ್ತುಂಗಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ.

Read More
Next Story