Five States Election 2026| ಮಹಿಳಾ ಮತದಾರರೇ ಪಕ್ಷಗಳ ಟಾರ್ಗೆಟ್‌: 4 ರಾಜ್ಯಗಳಲ್ಲಿ ಘೋಷಣೆಗಳ ಮಹಾಪೂರ
x
ಪಂಚರಾಜ್ಯ ಚುನಾವಣೆ 2026ಯಲ್ಲಿ ಮಹಿಳಾ ಮತದಾರರೇ ನಿರ್ಣಾಯಕ

Five States Election 2026| ಮಹಿಳಾ ಮತದಾರರೇ ಪಕ್ಷಗಳ ಟಾರ್ಗೆಟ್‌: 4 ರಾಜ್ಯಗಳಲ್ಲಿ ಘೋಷಣೆಗಳ ಮಹಾಪೂರ

ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಕೇರಳ ವಿಧಾನಸಭಾ ಚುನಾವಣೆ 2026ರಲ್ಲಿ ಮಹಿಳಾ ಮತದಾರರೇ ನಿರ್ಣಾಯಕ.


ಭಾರತದ ಚುನಾವಣಾ ರಾಜಕೀಯದಲ್ಲಿ ಈಗ 'ಮಹಿಳಾ ಮತಬ್ಯಾಂಕ್' ಅತ್ಯಂತ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಕೇರಳ ರಾಜ್ಯಗಳ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಮಹಿಳೆಯರನ್ನು ಸೆಳೆಯಲು ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದಂತೆ ಉಚಿತ ಕೊಡುಗೆ ಹಾಗೂ ಆರ್ಥಿಕ ನೆರವಿನ ಯೋಜನೆಗಳನ್ನು ಘೋಷಿಸುತ್ತಿವೆ.

ತಮಿಳುನಾಡು: ಡಿಎಂಕೆ vs ಎಐಎಡಿಎಂಕೆ vs ಟಿವಿ ಕೆ (TVK)

ತಮಿಳುನಾಡಿನಲ್ಲಿ ಲಿಂಗಾಧಾರಿತ ಕಲ್ಯಾಣ ಯೋಜನೆಗಳ ಸುತ್ತಲೇ ರಾಜಕೀಯ ಗಿರಕಿ ಹೊಡೆಯುತ್ತಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ, ಮಹಿಳೆಯರಿಗೆ ನೀಡುವ ಮಾಸಿಕ ಆರ್ಥಿಕ ನೆರವನ್ನು 2,000 ರೂಪಾಯಿಗಳಿಗೆ ಏರಿಸುವುದಾಗಿ ಭರವಸೆ ನೀಡಿದೆ. ಇದರ ಜೊತೆಗೆ ಮನೆಗೆಲಸದ ಹೊರೆ ತಗ್ಗಿಸಲು ವಾರ್ಷಿಕ 8,000 ರೂಪಾಯಿ ಮೌಲ್ಯದ 'ಇಲ್ಲತ್ತರಸಿ' (Illatharasi) ಕೂಪನ್‌ಗಳನ್ನು ನೀಡುವುದಾಗಿ ಘೋಷಿಸಿದೆ.

ವಿರೋಧ ಪಕ್ಷವಾದ ಎಐಎಡಿಎಂಕೆ, ಪ್ರತಿ ಕುಟುಂಬಕ್ಕೆ 10,000 ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡುವ ಮೂಲಕ ಡಿಎಂಕೆಗೆ ಪೈಪೋಟಿ ನೀಡುತ್ತಿದೆ. ಮತ್ತೊಂದೆಡೆ ನಟ ವಿಜಯ್ ನೇತೃತ್ವದ ಹೊಸ ಪಕ್ಷ ತಮಿಳಗ ವೆಟ್ರಿ ಕಳಗಂ, ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯರಿಗೆ ಮಾಸಿಕ 2,500 ರೂಪಾಯಿ ನೆರವು, ಉಚಿತ ಬಸ್ ಪ್ರಯಾಣ, ಎಲ್‌ಪಿಜಿ ಸಿಲಿಂಡರ್ ಹಾಗೂ ಹೆಣ್ಣು ಮಕ್ಕಳ ಮದುವೆಗೆ ಚಿನ್ನ ನೀಡುವುದಾಗಿ ಘೋಷಿಸಿದೆ.

ಪಶ್ಚಿಮ ಬಂಗಾಳ: ನೇರ ನಗದು ವರ್ಗಾವಣೆ ಪೈಪೋಟಿ

ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಡುವೆ ಮಹಿಳಾ ಮತದಾರರನ್ನು ಸೆಳೆಯುವಲ್ಲಿ ತೀವ್ರ ಪೈಪೋಟಿ ಇದೆ. ಬಿಜೆಪಿ 'ಅನ್ನಪೂರ್ಣ ಯೋಜನೆ' ಅಡಿಯಲ್ಲಿ ಮಹಿಳೆಯರಿಗೆ ಮಾಸಿಕ 3,000 ರೂಪಾಯಿ ನೀಡುವ ಭರವಸೆ ನೀಡಿದೆ. ಟಿಎಂಸಿ (TMC) ಈಗಾಗಲೇ ಜನಪ್ರಿಯವಾಗಿರುವ 'ಲಕ್ಷ್ಮೀರ್ ಭಂಡಾರ್' ಯೋಜನೆಯನ್ನು ವಿಸ್ತರಿಸಿದ್ದು, ಫಲಾನುಭವಿಗಳಿಗೆ ಮಾಸಿಕ 1,500 ರೂಪಾಯಿ ತಲುಪುವಂತೆ ಮಾಡುತ್ತಿದೆ.

ಅಸ್ಸಾಂ: ಉದ್ಯಮಶೀಲತೆಗೆ ಆದ್ಯತೆ

ಅಸ್ಸಾಂನಲ್ಲಿ ಮಹಿಳೆಯರನ್ನು ಕೇವಲ ಫಲಾನುಭವಿಗಳಾಗಿ ಮಾತ್ರವಲ್ಲದೆ, ಉದ್ಯಮಿಗಳನ್ನಾಗಿ ಮಾಡುವತ್ತ ಪಕ್ಷಗಳು ಗಮನಹರಿಸಿವೆ. ಕಾಂಗ್ರೆಸ್ ಮಹಿಳಾ ಉದ್ಯಮಿಗಳಿಗೆ 50,000 ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರ 'ಅರುಣೋದೋಯ್' ಯೋಜನೆಯಡಿ ಮಾಸಿಕ 1,250 ರೂಪಾಯಿ ನೀಡುತ್ತಿದೆ. ಅಲ್ಲದೆ, 'ಮುಖ್ಯಮಂತ್ರಿ ಮಹಿಳಾ ಉದ್ಯಮಿತಾ ಅಭಿಯಾನ'ದ ಮೂಲಕ ಮಹಿಳಾ ನೇತೃತ್ವದ ಉದ್ಯಮಗಳಿಗೆ 10,000 ರೂಪಾಯಿಗಳಿಂದ ಆರಂಭವಾಗುವ ಬೀಜಧನ (Seed funding) ನೀಡುತ್ತಿದೆ.

ಕೇರಳ: ಸಾಮಾಜಿಕ ಭದ್ರತೆಯ ಮಾಡೆಲ್

ಕೇರಳದ ಎಡರಂಗ ಸರ್ಕಾರವು ಸಮುದಾಯ ಆಧಾರಿತ ಜೀವನೋಪಾಯದ ಮೇಲೆ ಹೆಚ್ಚು ಒತ್ತು ನೀಡಿದೆ. ಸಿಪಿಐ(ಎಂ) 'ಕುಟುಂಬಶ್ರೀ' ಮಿಷನ್ ಮೂಲಕ ಲಕ್ಷಾಂತರ ಮಹಿಳೆಯರಿಗೆ ಕಿರುಸಾಲ (Microcredit) ಮತ್ತು ಸಣ್ಣ ಉದ್ಯಮಗಳನ್ನು ನಡೆಸಲು ಬೆಂಬಲ ನೀಡುತ್ತಿದೆ. ವಿಧವೆಯರು ಮತ್ತು ಹಿರಿಯ ಮಹಿಳೆಯರಿಗೆ ಸಾಮಾಜಿಕ ಭದ್ರತಾ ಪಿಂಚಣಿ ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಏಕೆ ಈ ಪೈಪೋಟಿ? (ಮತದಾರರ ಅಂಕಿ-ಅಂಶ)

ಈ ನಾಲ್ಕು ರಾಜ್ಯಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಬರೋಬ್ಬರಿ 10 ಕೋಟಿಗೂ ಅಧಿಕ ಇರುವುದು ಈ ತೀವ್ರ ಪೈಪೋಟಿಗೆ ಪ್ರಮುಖ ಕಾರಣ.

• ತಮಿಳುನಾಡು: 3.1 ಕೋಟಿ ಮಹಿಳಾ ಮತದಾರರು (ಒಟ್ಟು ಮತದಾರರ ಶೇ. 51).

• ಪಶ್ಚಿಮ ಬಂಗಾಳ: 3.7 ಕೋಟಿ ಮಹಿಳಾ ಮತದಾರರು (ಶೇ. 49-50).

• ಕೇರಳ: 1.4 ಕೋಟಿ ಮಹಿಳಾ ಮತದಾರರು (ಶೇ. 51.5).

• ಅಸ್ಸಾಂ: 1.2 ಕೋಟಿ ಮಹಿಳಾ ಮತದಾರರು (ಶೇ. 49-50).

ಅರ್ಧಕ್ಕಿಂತ ಹೆಚ್ಚು ಮತದಾರರು ಮಹಿಳೆಯರೇ ಆಗಿರುವುದರಿಂದ, ಅವರ ಮತಗಳು ಯಾವುದೇ ಪಕ್ಷದ ಹಣೆಬರಹವನ್ನು ಬದಲಿಸಬಲ್ಲವು. ಈ ಕಾರಣಕ್ಕಾಗಿಯೇ ಎಲ್ಲಾ ಪ್ರಮುಖ ಪಕ್ಷಗಳು ಮಹಿಳಾ ಕೇಂದ್ರಿತ ಕಲ್ಯಾಣ ಯೋಜನೆಗಳನ್ನು ತಮ್ಮ ಚುನಾವಣಾ ಪ್ರಣಾಳಿಕೆಯ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿವೆ.

Read More
Next Story