
ಭೀಕರ ಅಪಘಾತ: ಗಾಯಕ ಹನಿ ಸಿಂಗ್ ಸೋದರಳಿಯ ಸೇರಿ ಇಬ್ಬರು ಯುವಕರು ಸಾವು
ಪಂಜಾಬ್ನ ಜಲಂಧರ್ನಲ್ಲಿ ಹುಟ್ಟುಹಬ್ಬದ ಪಾರ್ಟಿಯಿಂದ ಮರಳುತ್ತಿದ್ದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಕ ಯೋ ಯೋ ಹನಿ ಸಿಂಗ್ ಅವರ ಸೋದರಳಿಯ ವಿಧಿತ್ ಓಲಕ್ ಸೇರಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಫ್ಲೈಓವರ್ನಲ್ಲಿ ನಿಂತಿದ್ದ ನಗರಸಭೆಯ ಟ್ರ್ಯಾಕ್ಟರ್ ಟ್ರಾಲಿಗೆ ಕಾರು ಡಿಕ್ಕಿ ಹೊಡೆದಿದೆ.
ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಮೃತರಲ್ಲಿ ಖ್ಯಾತ ಗಾಯಕ ಯೋ ಯೋ ಹನಿ ಸಿಂಗ್ ಅವರ ಸೋದರಳಿಯ ವಿಧಿತ್ ಓಲಕ್ ಕೂಡ ಸೇರಿದ್ದಾರೆ. ಜಲಂಧರ್ನಲ್ಲಿ ಭಾನುವಾರ ಮುಂಜಾನೆ ಈ ದುರಂತ ಸಂಭವಿಸಿದೆ. ಮೃತ ವಿಧಿತ್ ಓಲಕ್ ಅವರು ಪಂಜಾಬಿ ಸಂಗೀತ ಕಂಪನಿ ಸ್ಪೀಡ್ ರೆಕಾರ್ಡ್ಸ್ ಮಾಲೀಕ ದಿನೇಶ್ ಅವರ ಪುತ್ರ. ಮತ್ತೊಬ್ಬ ಮೃತ ಯುವಕನನ್ನು ಪಪ್ಪಿ ಸ್ವೀಟ್ಸ್ ಮಾಲೀಕರ ಪುತ್ರ ಆರವ್ ತಲ್ವಾರ್ ಎಂದು ಗುರುತಿಸಲಾಗಿದೆ.
ಫ್ಲೈಓವರ್ನಲ್ಲಿ ನಿಂತಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಕಾರು ಡಿಕ್ಕಿ
ಜಲಂಧರ್ನ ಪೊಲೀಸ್ ಲೈನ್ಸ್ ಪ್ರದೇಶದ ಸಮೀಪವಿರುವ ಫ್ಲೈಓವರ್ನಲ್ಲಿ ಈ ಅಪಘಾತ ಸಂಭವಿಸಿದೆ. ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿ ವೋಕ್ಸ್ವ್ಯಾಗನ್ ಕಾರಿನಲ್ಲಿ ಮನೆಗೆ ಮರಳುತ್ತಿದ್ದ ಯುವಕರ ಕಾರು, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ನಗರಸಭೆಯ ಟ್ರ್ಯಾಕ್ಟರ್ ಟ್ರಾಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ನಗರಸಭೆಯ ಸ್ವಚ್ಛತಾ ಸಿಬ್ಬಂದಿ ಫ್ಲೈಓವರ್ನಲ್ಲಿ ಕಸ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದರು. ಈ ಹಿನ್ನೆಲೆಯಲ್ಲಿ ಕಸ ಸಾಗಿಸುವ ಟ್ರ್ಯಾಕ್ಟರ್ ಟ್ರಾಲಿಯನ್ನು ರಸ್ತೆಯಲ್ಲಿ ನಿಲ್ಲಿಸಲಾಗಿತ್ತು. ಬಿಎಂಸಿ ಚೌಕ್ನಿಂದ ಬಿಎಸ್ಎಫ್ ಚೌಕ್ ಕಡೆಗೆ ಕಾರು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಬರಾದರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಾಹಿಲ್ ಚೌಧರಿ ತಿಳಿಸಿದ್ದಾರೆ.
ಕಾರಿನಲ್ಲಿದ್ದ ಐವರ ಪೈಕಿ ಇಬ್ಬರು ಸಾವು
ಅಪಘಾತ ಸಂಭವಿಸುವ ಮುನ್ನ ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಈ ಪೈಕಿ ವಿಧಿತ್ ಓಲಕ್ ಮತ್ತು ಆರವ್ ತಲ್ವಾರ್ ಮೃತಪಟ್ಟಿದ್ದಾರೆ. ಉಳಿದ ಮೂವರು ಅಪಘಾತಕ್ಕೂ ಮುನ್ನವೇ ಮನೆಗೆ ಮರಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಭಾನುವಾರ ಮುಂಜಾನೆ ಸುಮಾರು 3 ಗಂಟೆಗೆ ಪೊಲೀಸರಿಗೆ ಅಪಘಾತದ ಮಾಹಿತಿ ಲಭಿಸಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆದರೆ ಮೃತರ ಕುಟುಂಬಸ್ಥರು ಹೆಚ್ಚಿನ ಕಾನೂನು ಕ್ರಮ ಬೇಡ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಪೊಲೀಸರು ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.
ಸೋದರಳಿಯನ ಸಾವಿಗೆ ಹನಿಸಿಂಗ್ ಸಂತಾಪ?
ಇನ್ನು ತಮ್ಮ ಸೋದರಳಿಯ ವಿಧಿತ್ ಓಲಕ್ ಸಾವಿನ ಘಟನೆ ಬಳಿಕ ಗಾಯಕ ಯೋ ಯೋ ಹನಿ ಸಿಂಗ್ ಕೂಡ ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ. ಈ ಅಪಘಾತ ಸಂಗೀತ ಲೋಕ ಹಾಗೂ ಕುಟುಂಬಸ್ಥರಲ್ಲಿ ದುಃಖ ಮೂಡಿಸಿದೆ.
