ಭಾರತದಲ್ಲಿ ನಿಷ್ಕ್ರಿಯ ದಯಾಮರಣಕ್ಕೆ ಒಳಗಾದ ಮೊದಲ ವ್ಯಕ್ತಿ ಹರೀಶ್ ರಾಣಾ ನಿಧನ
x

ಭಾರತದಲ್ಲಿ ನಿಷ್ಕ್ರಿಯ ದಯಾಮರಣಕ್ಕೆ ಒಳಗಾದ ಮೊದಲ ವ್ಯಕ್ತಿ ಹರೀಶ್ ರಾಣಾ ನಿಧನ

ಹರೀಶ್ ರಾಣಾ ಅವರ ತಂದೆ-ತಾಯಿ ಅಶೋಕ್ ಮತ್ತು ನಿರ್ಮಲಾ ರಾಣಾ ಅವರು ತಮ್ಮ ಮಗನ ಯಾತನೆ ಅಂತ್ಯಗೊಳಿಸಲು ನ್ಯಾಯಾಲಯದ ಮೊರೆ ಹೋಗಿದ್ದರು.


Click the Play button to hear this message in audio format

ಭಾರತದ ಕಾನೂನು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ನಿಂದ ಅಧಿಕೃತವಾಗಿ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ಪಡೆದಿದ್ದ 31 ವರ್ಷದ ಹರೀಶ್ ರಾಣಾ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದ ಹರೀಶ್ ಅವರು 2013ರಲ್ಲಿ ಕಟ್ಟಡದ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿತ್ತು. ಅಂದಿನಿಂದ ಸತತ 13 ವರ್ಷಗಳ ಕಾಲ ಅವರು ಸಂಪೂರ್ಣ ಕೋಮಾ ಸ್ಥಿತಿಯಲ್ಲಿದ್ದರು. ಕೃತಕ ಪೋಷಣೆ ಮತ್ತು ಆಮ್ಲಜನಕದ ಬೆಂಬಲದೊಂದಿಗೆ ಬದುಕಿದ್ದ ಅವರನ್ನು, ಸುಪ್ರೀಂ ಕೋರ್ಟ್ ಆದೇಶದ ಬಳಿಕ ಗಾಜಿಯಾಬಾದ್‌ನ ಮನೆಯಿಂದ ಮಾರ್ಚ್ 14ರಂದು ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು

ಹರೀಶ್ ರಾಣಾ ಅವರ ತಂದೆ-ತಾಯಿ ಅಶೋಕ್ ಮತ್ತು ನಿರ್ಮಲಾ ರಾಣಾ ಅವರು ತಮ್ಮ ಮಗನ ಯಾತನೆ ಅಂತ್ಯಗೊಳಿಸಲು ನ್ಯಾಯಾಲಯದ ಮೊರೆ ಹೋಗಿದ್ದರು. ಮಾರ್ಚ್ 11ರಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಈ ಕುರಿತು ಐತಿಹಾಸಿಕ ತೀರ್ಪು ನೀಡಿ, ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ನೀಡಿತ್ತು. ರೋಗಿಯು ಚೇತರಿಸಿಕೊಳ್ಳುವ ಯಾವುದೇ ಭರವಸೆ ಇಲ್ಲದಿರುವಾಗ, ಜೀವ ರಕ್ಷಕ ಸಾಧನಗಳು ಅಥವಾ ಚಿಕಿತ್ಸೆಯನ್ನು ಹಿಂಪಡೆದು ರೋಗಿಯನ್ನು ಸ್ವಾಭಾವಿಕವಾಗಿ ಸಾಯಲು ಬಿಡುವ ಪ್ರಕ್ರಿಯೆಯೇ ನಿಷ್ಕ್ರಿಯ ದಯಾಮರಣವಾಗಿದೆ. ವೈದ್ಯಕೀಯ ಮಂಡಳಿಯ ವರದಿಗಳನ್ನು ಪರಿಗಣಿಸಿದ ನ್ಯಾಯಾಲಯ, ಕೃತಕ ಪೋಷಣೆಯು ಕೇವಲ ಜೈವಿಕ ಅಸ್ತಿತ್ವವನ್ನು ವಿಸ್ತರಿಸುತ್ತಿದೆಯೇ ಹೊರತು ಚೇತರಿಕೆಯ ಸಾಧ್ಯತೆಯಿಲ್ಲ ಎಂದು ಅಭಿಪ್ರಾಯಪಟ್ಟು, ರೋಗಿಯ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ತೀರ್ಪು ನೀಡಿತ್ತು.

ಕೃತಕ ಪೋಷಣೆ ಸ್ಥಗಿತ ಪ್ರಕ್ರಿಯೆ

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಏಮ್ಸ್ ಆಸ್ಪತ್ರೆಯು ಡಾ. ಸೀಮಾ ಮಿಶ್ರಾ ಅವರ ನೇತೃತ್ವದಲ್ಲಿ ನರರೋಗ, ಅರಿವಳಿಕೆ ಮತ್ತು ಮನೋವೈದ್ಯಶಾಸ್ತ್ರ ವಿಭಾಗದ ತಜ್ಞ ವೈದ್ಯರನ್ನೊಳಗೊಂಡ ವಿಶೇಷ ವೈದ್ಯಕೀಯ ತಂಡವನ್ನು ರಚಿಸಿತ್ತು. ಹರೀಶ್ ಅವರಿಗೆ ಟ್ಯೂಬ್ ಮೂಲಕ ನೀಡಲಾಗುತ್ತಿದ್ದ ಕೃತಕ ಪೋಷಣೆಯನ್ನು ಆಸ್ಪತ್ರೆಯಲ್ಲಿ ಹಂತ ಹಂತವಾಗಿ ಹಿಂಪಡೆಯಲಾಯಿತು. 2018ರ 'ಕಾಮನ್ ಕಾಸ್' ತೀರ್ಪು ಹಾಗೂ 2023ರ ಪರಿಷ್ಕೃತ ಮಾರ್ಗಸೂಚಿಗಳ ಅನ್ವಯ, 'ಘನತೆಯಿಂದ ಸಾಯುವ ಹಕ್ಕು' ಸಂವಿಧಾನದ 21ನೇ ವಿಧಿಯಡಿಯ ಮೂಲಭೂತ ಹಕ್ಕು ಎಂದು ಪರಿಗಣಿಸಲ್ಪಟ್ಟಿದ್ದು, ಈ ಪ್ರಕ್ರಿಯೆಯನ್ನು ನ್ಯಾಯಾಲಯದ ಮಾರ್ಗಸೂಚಿಗಳ ಅನುಸಾರವೇ ಅತ್ಯಂತ ಸೂಕ್ಷ್ಮವಾಗಿ ಜಾರಿಗೊಳಿಸಲಾಗಿದೆ.

Read More
Next Story