300 ರೂ.ಗಿಂತ ಕಡಿಮೆ ವೇತನವಿಲ್ಲ: ಇಂದಿನಿಂದ ದೇಶದಲ್ಲಿ ವಿಬಿಜಿ ರಾಮ್‌ ಜಿ ಜಾರಿ
x

300 ರೂ.ಗಿಂತ ಕಡಿಮೆ ವೇತನವಿಲ್ಲ: ಇಂದಿನಿಂದ ದೇಶದಲ್ಲಿ ವಿಬಿಜಿ ರಾಮ್‌ ಜಿ ಜಾರಿ

ಇದೀಗ ಜಾರಿಯಾಗಿರುವ ಪರಿಷ್ಕೃತ ವೇತನ ದರವು ಕರ್ನಾಟಕದಂತಹ ರಾಜ್ಯಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಈಗ ರಾಜ್ಯದ ಗ್ರಾಮೀಣ ಕಾರ್ಮಿಕರು ದಿನವೊಂದಕ್ಕೆ 360 ರೂ.ಗಿಂತ ಹೆಚ್ಚು ವೇತನವನ್ನು ಪಡೆಯಲಿದ್ದಾರೆ.


Click the Play button to hear this message in audio format

ಕೇಂದ್ರ ಸರ್ಕಾರವು ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ, 2025 ಅನ್ನು ಬುಧವಾರದಿಂದ ಜಾರಿಗೆ ಬಂದಿದ್ದು, ಇದರ ಅಂಗವಾಗಿ ಗ್ರಾಮೀಣ ಕಾರ್ಮಿಕರ ದೈನಂದಿನ ವೇತನ ದರವನ್ನು ದೇಶಾದ್ಯಂತ ಪರಿಷ್ಕರಿಸಲಾಗಿದೆ. ಇನ್ನು ಮುಂದೆ ಯಾವುದೇ ರಾಜ್ಯದಲ್ಲಿ ವೇತನವು ದಿನಕ್ಕೆ 300 ರೂ.ಗಿಂತ ಕಡಿಮೆಯಿರದಂತೆ ಹೊಸ ಕನಿಷ್ಠ ಮಿತಿಯನ್ನು ನಿಗದಿಪಡಿಸಲಾಗಿದೆ. ಕರ್ನಾಟಕ, ಕೇರಳ, ಹರಿಯಾಣ ಮತ್ತು ಪಂಜಾಬ್‌ನಂತಹ ರಾಜ್ಯಗಳಲ್ಲಿ ದೈನಂದಿನ ವೇತನವು 360 ರೂ.ನಿಂದ 409 ರೂ. ವರೆಗೆ ನಿಗದಿಯಾಗಿದ್ದು, ಇದು ಗ್ರಾಮೀಣ ಕಾರ್ಮಿಕರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದೆ. ಈ ಹಿಂದೆ ಇದ್ದ ವೇತನ ರಚನೆಗೆ ಹೋಲಿಸಿದರೆ, ಇದೀಗ ಜಾರಿಯಾಗಿರುವ ಪರಿಷ್ಕೃತ ವೇತನ ದರವು ಕರ್ನಾಟಕದಂತಹ ರಾಜ್ಯಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಈಗ ರಾಜ್ಯದ ಗ್ರಾಮೀಣ ಕಾರ್ಮಿಕರು ದಿನವೊಂದಕ್ಕೆ 360 ರೂ.ಗಿಂತ ಹೆಚ್ಚು ವೇತನವನ್ನು ಪಡೆಯಲಿದ್ದಾರೆ.

ಈ ಹೊಸ ಅಧಿಸೂಚನೆಯು ದೇಶದ 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನ್ವಯವಾಗುತ್ತದೆ. ಎಂಜಿಎನ್‌ಆರ್‌ಇಜಿಎ (ಮನರೇಗಾ) ಅಡಿಯಲ್ಲಿ ಸರಾಸರಿ ವೇತನವು 298.8 ರೂ. ಇದ್ದದ್ದು, ಈಗ ವಿಕಸಿತ ಭಾರತ – ಜಿ ರಾಮ್ ಜಿ ಕಾಯ್ದೆಯಡಿ ಸರಾಸರಿ 327.4 ರೂ.ಗೆ ಏರಿಕೆಯಾಗಿದೆ. ಇದು ದೇಶಾದ್ಯಂತ ಸರಾಸರಿ ಶೇ.10 ಕ್ಕಿಂತ ಹೆಚ್ಚು ವೇತನ ಹೆಚ್ಚಳವನ್ನು ಸೂಚಿಸುತ್ತದೆ. ಈ ಕಾಯ್ದೆಯ ಅತ್ಯಂತ ಪ್ರಮುಖ ಆಕರ್ಷಣೆಯೆಂದರೆ, 300 ರೂ. 'ಇಂಟರಿಮ್ ಬೇಸ್ ವೇಜ್ ರೇಟ್' ಆಗಿದೆ. ಈ ಹಿಂದೆ ಹಲವು ರಾಜ್ಯಗಳಲ್ಲಿ ದೈನಂದಿನ ವೇತನವು 241 ರೂ.ನಷ್ಟು ಕಡಿಮೆ ಇತ್ತು. ಈಗ ಅಂತಹ 21 ರಾಜ್ಯಗಳು ಮತ್ತು ಆಡಳಿತಾತ್ಮಕ ಘಟಕಗಳ ವೇತನವನ್ನು ನೇರವಾಗಿ 300 ರೂ.ಗೆ ಏರಿಸಲಾಗಿದೆ. ಇದು ಲಕ್ಷಾಂತರ ಗ್ರಾಮೀಣ ಕುಟುಂಬಗಳಿಗೆ ನೇರ ಆರ್ಥಿಕ ಭದ್ರತೆಯನ್ನು ನೀಡಲಿದೆ.

ಯಾವ ರಾಜ್ಯಗಳಿಗೆ ಹೆಚ್ಚಿನ ಲಾಭ?

ಐತಿಹಾಸಿಕವಾಗಿ ಕಡಿಮೆ ವೇತನ ದರ ಹೊಂದಿದ್ದ ರಾಜ್ಯಗಳಿಗೆ ಈ ಪರಿಷ್ಕರಣೆಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ಶೇಕಡಾ 15 ರಿಂದ 25ರಷ್ಟು ಗಣನೀಯ ವೇತನ ಹೆಚ್ಚಳ ಕಂಡುಬಂದಿದೆ. ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ಕಾರ್ಮಿಕರಿಗೆ ಗರಿಷ್ಠ ಅಂದರೆ ಸುಮಾರು ಶೇ.24.5 ಹೆಚ್ಚಳ ದೊರೆತಿದೆ. ಇನ್ನೊಂದೆಡೆ, ಈಗಾಗಲೇ ಹೆಚ್ಚಿನ ವೇತನ ಹೊಂದಿದ್ದ ರಾಜ್ಯಗಳಾದ ಹರಿಯಾಣ (409 ರೂ.), ಗೋವಾ (406 ರೂ.), ಕೇರಳ (401 ರೂ.) ಮತ್ತು ಸಿಕ್ಕಿಂನ ಎತ್ತರದ ಗ್ರಾಮ ಪಂಚಾಯಿತಿ ಪ್ರದೇಶಗಳಿಗೆ (450 ರೂ.) ಸಹ ವೇತನವನ್ನು ಪರಿಷ್ಕರಿಸಲಾಗಿದೆ. ಈಗ ದೇಶದ ಹಲವು ರಾಜ್ಯಗಳಲ್ಲಿ ವೇತನವು 400 ರೂ. ಗಡಿಯನ್ನು ದಾಟಿದೆ.

ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಈ ಕುರಿತು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಮ್ಮ ಸರ್ಕಾರವು ಬಡ ಕುಟುಂಬಗಳ ಕಲ್ಯಾಣಕ್ಕೆ ಬದ್ಧವಾಗಿದೆ. ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸಲು ಗ್ರಾಮಗಳ ಸಮೃದ್ಧಿ ಅತ್ಯಗತ್ಯ. ಈ ಕಾಯ್ದೆಯಡಿ ಉದ್ಯೋಗ ಖಾತ್ರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಿದ್ದಲ್ಲದೆ, ಉತ್ತಮ ವೇತನವನ್ನೂ ಖಾತರಿಪಡಿಸಲಾಗಿದೆ. ಇದು ಗ್ರಾಮೀಣ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ. ಹೊಸ ವೇತನ ದರಗಳನ್ನು ಅತ್ಯಂತ ಪಾರದರ್ಶಕ ಮತ್ತು ವೈಜ್ಞಾನಿಕ ವಿಧಾನದ ಮೂಲಕ ನಿರ್ಧರಿಸಲಾಗಿದೆ. ವಾರ್ಷಿಕ ಹಣದುಬ್ಬರ ಸೂಚ್ಯಂಕ ಮತ್ತು ಹೊಸದಾಗಿ ಪರಿಚಯಿಸಲಾದ ಕನಿಷ್ಠ ವೇತನದ ಮಿತಿಯನ್ನು ಒಟ್ಟುಗೂಡಿಸಿ ಈ ದರಗಳನ್ನು ನಿಗದಿಪಡಿಸಲಾಗಿದೆ. ಇದು ದೀರ್ಘಕಾಲದ ಪ್ರಾದೇಶಿಕ ಅಸಮಾನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಗ್ರಾಮೀಣಾಭಿವೃದ್ಧಿಯ ಹೊಸ ಹಾದಿ

ವಿಬಿ-ಜಿ ರಾಮ್‌ ಜಿ ಕಾಯ್ದೆಯು ಕೇವಲ ವೇತನ ಹೆಚ್ಚಳಕ್ಕೆ ಸೀಮಿತವಾಗಿಲ್ಲ. ಪ್ರತಿ ಅರ್ಹ ಗ್ರಾಮೀಣ ಕುಟುಂಬಕ್ಕೆ ವರ್ಷದಲ್ಲಿ 125 ದಿನಗಳ ಖಾತರಿ ಉದ್ಯೋಗವನ್ನು ಇದು ಒದಗಿಸುತ್ತದೆ. ಈ ಹೆಚ್ಚುವರಿ ಉದ್ಯೋಗ ದಿನಗಳು ಮತ್ತು ಪರಿಷ್ಕೃತ ವೇತನ ದರಗಳು ಗ್ರಾಮೀಣ ಭಾಗದಲ್ಲಿ ಬಲವಾದ ಆಸ್ತಿ ಸೃಷ್ಟಿಗೆ ಮತ್ತು ಸಮಗ್ರ ಅಭಿವೃದ್ಧಿಗೆ ದಾರಿ ಮಾಡಿಕೊಡಲಿವೆ. 2047ರ ವಿಕಸಿತ ಭಾರತದ ಗುರಿಯನ್ನು ತಲುಪಲು 'ಗರೀಬ್ ಕಲ್ಯಾಣ' ಮತ್ತು 'ಅಂತ್ಯೋದಯ' ಪರಿಕಲ್ಪನೆಗಳಡಿ ಸರ್ಕಾರವು ಕೈಗೊಂಡಿರುವ ಈ ಕ್ರಮವು, ದೇಶದ ಬೆಳವಣಿಗೆಯ ಫಲವು ಕೊನೆಯ ಹಳ್ಳಿಯವರೆಗೂ ತಲುಪುವುದನ್ನು ಖಚಿತಪಡಿಸುತ್ತದೆ. ಇದು ಬಡತನ ನಿರ್ಮೂಲನೆ ಮತ್ತು ಗ್ರಾಮೀಣಾಭಿವೃದ್ಧಿಯ ದಿಕ್ಕಿನಲ್ಲಿ ಇಡಲಾದ ಒಂದು ದಿಟ್ಟ ಹೆಜ್ಜೆಯಾಗಿದೆ.

Read More
Next Story