ಕಚ್ಚಾ ತೈಲ ಆಮದಿಗೆ ಹಣದ ಸಮಸ್ಯೆ ಇಲ್ಲ: ಇರಾನ್ ತೈಲ ಹಡಗು ಚೀನಾಕ್ಕೆ ತಿರುಗಿಲ್ಲ ಎಂದ ಕೇಂದ್ರ ಸರ್ಕಾರ
x

ಕಚ್ಚಾ ತೈಲ ಆಮದಿಗೆ ಹಣದ ಸಮಸ್ಯೆ ಇಲ್ಲ: ಇರಾನ್ ತೈಲ ಹಡಗು ಚೀನಾಕ್ಕೆ ತಿರುಗಿಲ್ಲ ಎಂದ ಕೇಂದ್ರ ಸರ್ಕಾರ

ಕಚ್ಚಾ ತೈಲ ಆಮದು ಮಾಡಿಕೊಳ್ಳುವ ವಿಚಾರದಲ್ಲಿ ಭಾರತಕ್ಕೆ ಯಾವುದೇ ರೀತಿಯ ಪಾವತಿ ಸಮಸ್ಯೆಗಳು ಎದುರಾಗಿಲ್ಲ ಎಂದು ಸಚಿವಾಲಯ 'ಎಕ್ಸ್‌' (ಹಿಂದಿನ ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.


Click the Play button to hear this message in audio format

ಭಾರತಕ್ಕೆ ರವಾನೆಯಾಗಬೇಕಿದ್ದ ಇರಾನ್‌ನ ಕಚ್ಚಾ ತೈಲ ಹೊತ್ತ ಹಡಗೊಂದು 'ಹಣದ ಕೊರತೆಯಿಂದ'''ಯಿಂದಾಗಿ ಮಧ್ಯಮಾರ್ಗದಲ್ಲಿಯೇ ಚೀನಾದತ್ತ ಮುಖಮಾಡಿದೆ ಎಂಬ ಮಾಧ್ಯಮ ವರದಿಗಳನ್ನು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸಾರಾಸಗಟಾಗಿ ತಳ್ಳಿಹಾಕಿದೆ. ಈ ವರದಿಗಳು ಸಂಪೂರ್ಣವಾಗಿ 'ಸತ್ಯಕ್ಕೆ ದೂರವಾದವು' ಎಂದು ಸ್ಪಷ್ಟಪಡಿಸಿರುವ ಸರ್ಕಾರ, ದೇಶದಲ್ಲಿ ಕಚ್ಚಾ ತೈಲ ಹಾಗೂ ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಅಭಯ ನೀಡಿದೆ.

ಕಚ್ಚಾ ತೈಲ ಆಮದು ಮಾಡಿಕೊಳ್ಳುವ ವಿಚಾರದಲ್ಲಿ ಭಾರತಕ್ಕೆ ಯಾವುದೇ ರೀತಿಯ ಪಾವತಿ ಸಮಸ್ಯೆಗಳು ಎದುರಾಗಿಲ್ಲ ಎಂದು ಸಚಿವಾಲಯ 'ಎಕ್ಸ್‌' (ಹಿಂದಿನ ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಹಡಗು ರವಾನೆ ದಾಖಲೆಗಳಲ್ಲಿ (ಬಿಲ್ಸ್ ಆಫ್ ಲ್ಯಾಡಿಂಗ್) ಸಾಮಾನ್ಯವಾಗಿ ಸೂಚಿತ ಬಂದರುಗಳು ಹಾಗೂ ಗಮ್ಯಸ್ಥಾನಗಳನ್ನು ನಮೂದಿಸಲಾಗಿರುತ್ತದೆ. ವಾಣಿಜ್ಯ ವ್ಯಾಪಾರವನ್ನು ವೃದ್ಧಿಸಲು ಮತ್ತು ಸುಗಮ ಕಾರ್ಯಾಚರಣೆ ದೃಷ್ಟಿಯಿಂದ ಸಮುದ್ರಮಾರ್ಗದಲ್ಲಿರುವ ಸರಕು ಹಡಗುಗಳು ತಮ್ಮ ಗಮ್ಯಸ್ಥಾನ ಬದಲಾಯಿಸಿಕೊಳ್ಳುವುದು ವಾಡಿಕೆ. ಇದನ್ನು ಪಾವತಿ ಸಮಸ್ಯೆ ಎಂದು ಬಿಂಬಿಸುವುದು ತಪ್ಪು ಎಂದು ಸಚಿವಾಲಯ ವಿವರಿಸಿದೆ.

40 ರಾಷ್ಟ್ರಗಳಿಂದ ಆಮದು

ಭಾರತವು ಪ್ರಸ್ತುತ 40ಕ್ಕೂ ಹೆಚ್ಚು ರಾಷ್ಟ್ರಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು, ವಾಣಿಜ್ಯ ಹಿತಾಸಕ್ತಿಗಳ ಆಧಾರದ ಮೇಲೆ ವಿವಿಧ ಮೂಲಗಳಿಂದ ತೈಲ ಖರೀದಿಸುವ ಪೂರ್ಣ ಸ್ವಾತಂತ್ರ್ಯವನ್ನು ದೇಶದ ತೈಲ ಕಂಪನಿಗಳು ಹೊಂದಿವೆ. ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಬಿಕ್ಕಟ್ಟಿನಿಂದ ಪೂರೈಕೆ ವ್ಯತ್ಯಯದ ಭೀತಿ ಎದುರಾಗಿದ್ದರೂ, ಭಾರತೀಯ ಸಂಸ್ಕರಣಾಗಾರಗಳು ಇರಾನ್ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಕಚ್ಚಾ ತೈಲ ಅಗತ್ಯತೆಗಳನ್ನು ಯಶಸ್ವಿಯಾಗಿ ಭದ್ರಪಡಿಸಿಕೊಂಡಿವೆ ಎಂದು ಸರ್ಕಾರ ತಿಳಿಸಿದೆ.

ಮಂಗಳೂರಿನಲ್ಲಿ ಎಲ್‌ಪಿಜಿ ಇಳಿಸುವ ಪ್ರಕ್ರಿಯೆ

ದೇಶದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂಬ ವದಂತಿಗಳಿಗೂ ತೆರೆ ಎಳೆದಿರುವ ಸರ್ಕಾರ, ಏಪ್ರಿಲ್ 2ರಂದು ಮಂಗಳೂರು ಬಂದರಿಗೆ ಆಗಮಿಸಿರುವ 'ಸೀ ಬರ್ಡ್' (Sea Bird) ಹೆಸರಿನ ಹಡಗಿನಿಂದ ಭಾರಿ ಪ್ರಮಾಣದ ಇರಾನ್ ಎಲ್‌ಪಿಜಿ ಇಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದೆ. ಈ ಹಡಗು ಸುಮಾರು 44 ಸಾವಿರ ಮೆಟ್ರಿಕ್ ಟನ್ (TMT) ಎಲ್‌ಪಿಜಿ ಹೊತ್ತು ತಂದಿದೆ.

ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆಯೊಂದರ ವರದಿಯನ್ನು ಉಲ್ಲೇಖಿಸಿ, ಭಾರತಕ್ಕೆ ಬರಬೇಕಿದ್ದ ತೈಲ ಹಡಗು ಪಾವತಿ ಸಮಸ್ಯೆಯಿಂದ ಚೀನಾಕ್ಕೆ ತೆರಳಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಮುಂಬರುವ ದಿನಗಳಿಗೂ ಭಾರತದ ಕಚ್ಚಾ ತೈಲ ಮತ್ತು ಎಲ್‌ಪಿಜಿ ಅಗತ್ಯತೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ಸಚಿವಾಲಯ ಪುನರುಚ್ಚರಿಸಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರ

ಭಾರತದ ಧ್ವಜ ಹೊತ್ತ ಬೃಹತ್ ಗ್ಯಾಸ್ ಕ್ಯಾರಿಯರ್ 'ಗ್ರೀನ್ ಸಾನ್ವಿ' (Green Sanvi) ಶುಕ್ರವಾರ ರಾತ್ರಿ 46,650 ಮೆಟ್ರಿಕ್ ಟನ್ ಎಲ್‌ಪಿಜಿ ಸರಕಿನೊಂದಿಗೆ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದೆ. ಪಶ್ಚಿಮ ಏಷ್ಯಾದ ಸಂಘರ್ಷದ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ಕಡಲ ನಿರ್ಬಂಧಗಳ ನಡುವೆಯೂ ಭಾರತೀಯ ಹಡಗುಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಭಾರತ ಮತ್ತು ಇರಾನ್ ಅಧಿಕಾರಿಗಳ ನಡುವೆ ನಿರಂತರ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿವೆ. ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯ ಬಳಿಕ ಉಂಟಾದ ಪ್ರಾದೇಶಿಕ ಉದ್ವಿಗ್ನತೆಯು ಜಾಗತಿಕ ಇಂಧನ ಪೂರೈಕೆ ಸರಪಳಿಯ ಮೇಲೆ ಗಣನೀಯ ಪ್ರಭಾವ ಬೀರಿದೆ.

Read More
Next Story