WhatsApp chat without phone number: New username privacy feature coming!
x

ಸಾಂದರ್ಭಿಕ ಚಿತ್ರ

ಇನ್ಮುಂದೆ ಮೊಬೈಲ್ ಸಂಖ್ಯೆ ಕಾಣಿಸಲ್ಲ! ವಾಟ್ಸ್ಯಾಪ್‌ ಹೊಸ ಫೀಚರ್‌ಗೆ ಕೇಂದ್ರ ಸರ್ಕಾರ ಆತಂಕ

ವಾಟ್ಸ್ಆಪ್ ಹೊಸ ಯೂಸರ್‌ನೇಮ್‌ ಫೀಚರ್‌ ಕುರಿತು ಕೇಂದ್ರ ಸರ್ಕಾರ ಪರಿಶೀಲನೆ ಆರಂಭಿಸಿದೆ. ಮೊಬೈಲ್ ಸಂಖ್ಯೆ ಮರೆಮಾಚುವ ಈ ವೈಶಿಷ್ಟ್ಯದಿಂದ ಆನ್‌ಲೈನ್ ವಂಚನೆ ಹೆಚ್ಚುವ ಆತಂಕ ವ್ಯಕ್ತವಾಗಿದೆ.


Click the Play button to hear this message in audio format

ಮೆಟಾ ಒಡೆತನದ ವಾಟ್ಸ್ಯಾಪ್‌ ಪರಿಚಯಿಸಿರುವ ಹೊಸ 'ಯೂಸರ್‌ನೇಮ್' ವೈಶಿಷ್ಟ್ಯವು ಆನ್‌ಲೈನ್ ವಂಚನೆಗಳಿಗೆ ಅವಕಾಶ ಹೆಚ್ಚಿಸಬಹುದೇ ಎಂಬ ಆತಂಕದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಫೀಚರ್‌ನ್ನು ಪರಿಶೀಲಿಸಲು ಮುಂದಾಗಿದೆ. ಸರ್ಕಾರದ ಮೂಲಗಳ ಪ್ರಕಾರ, ಈ ಹೊಸ ವ್ಯವಸ್ಥೆಯಿಂದ ಸೈಬರ್ ವಂಚನೆಗಳ ಅಪಾಯ ಹೆಚ್ಚುವ ಸಾಧ್ಯತೆ ಕಂಡುಬಂದರೆ, ಮೆಟಾಗೆ ಅಧಿಕೃತ ನೋಟಿಸ್ ಜಾರಿಗೊಳಿಸುವ ಸಾಧ್ಯತೆಯೂ ಇದೆ.

ಏನಿದು ಹೊಸ ಯೂಸರ್‌ನೇಮ್ ಫೀಚರ್?

ಪ್ರಸ್ತುತ ವಾಟ್ಸ್ಯಾಪ್‌ನಲ್ಲಿ ಯಾರನ್ನಾದರೂ ಸಂಪರ್ಕಿಸಲು ಅವರ ಮೊಬೈಲ್ ಸಂಖ್ಯೆಯ ಅಗತ್ಯವಿದೆ. ಆದರೆ ಹೊಸ ಅಪ್‌ಡೇಟ್‌ನಲ್ಲಿ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳದೆ, ವಿಶಿಷ್ಟ ಯೂಸರ್‌ನೇಮ್ ಮೂಲಕ ಸಂಪರ್ಕ ಸಾಧಿಸಬಹುದಾಗಿದೆ.

ವಾಟ್ಸ್ಯಾಪ್‌ ಪ್ರಕಾರ, ಈ ಫೀಚರ್‌ನ ಉದ್ದೇಶ ಬಳಕೆದಾರರ ಮೊಬೈಲ್ ಸಂಖ್ಯೆಯ ಗೌಪ್ಯತೆಯನ್ನು ಕಾಪಾಡುವುದಾಗಿದೆ. ವಿಶ್ವದ ಮೂರು ಬಿಲಿಯನ್‌ಗಿಂತ ಹೆಚ್ಚು ಬಳಕೆದಾರರು ತಮ್ಮ ವೈಯಕ್ತಿಕ ಸಂಖ್ಯೆಯನ್ನು ಬಹಿರಂಗಪಡಿಸದೆ ಸಂವಹನ ನಡೆಸಲು ಇದು ನೆರವಾಗಲಿದೆ ಎಂದು ಕಂಪನಿ ಹೇಳಿದೆ.

ವಂಚನೆ ಹೆಚ್ಚಾಗುವ ಆತಂಕ ಏಕೆ?

ಹೊಸ ವೈಶಿಷ್ಟ್ಯ ಪ್ರಕಟವಾದ ಬೆನ್ನಲ್ಲೇ ಹಲವು ತಂತ್ರಜ್ಞಾನ ತಜ್ಞರು ಮತ್ತು ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ. KnotDating ಸಂಸ್ಥೆಯ ಸಿಇಒ ಜಸ್ವೀರ್ ಸಿಂಗ್, ಎಕ್ಸ್ (ಹಳೆಯ ಟ್ವಿಟರ್) ನಲ್ಲಿ ಪ್ರತಿಕ್ರಿಯಿಸಿ, "ಮೊಬೈಲ್ ಸಂಖ್ಯೆ ಇದ್ದಾಗ ವ್ಯಕ್ತಿಯ ಗುರುತಿನ ಬಗ್ಗೆ ಒಂದು ಮಟ್ಟದ ಹೊಣೆಗಾರಿಕೆ ಇರುತ್ತದೆ. ಆದರೆ ಯೂಸರ್‌ನೇಮ್ ವ್ಯವಸ್ಥೆಯಲ್ಲಿ ಗೌಪ್ಯತೆ ಹೆಚ್ಚಾದರೂ, ವಂಚಕರಿಗೆ ತಮ್ಮ ಗುರುತನ್ನು ಮರೆಮಾಚಿಕೊಳ್ಳಲು ಸುಲಭವಾಗಬಹುದು" ಎಂದು ಹೇಳಿದ್ದಾರೆ.

ಇನ್ನೋರ್ವ ಬಳಕೆದಾರ, ಟೆಲಿಗ್ರಾಂ ಮಾದರಿಯ ಯೂಸರ್‌ನೇಮ್ ಆಧಾರಿತ ವ್ಯವಸ್ಥೆಗಳು ಸೈಬರ್ ಅಪರಾಧಿಗಳ ಗುರುತು ಪತ್ತೆ ಹಚ್ಚುವಲ್ಲಿ ತನಿಖಾ ಸಂಸ್ಥೆಗಳಿಗೆ ಸವಾಲು ಸೃಷ್ಟಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಟೆಲಿಗ್ರಾಂ ಉದಾಹರಣೆ ನೀಡಿದ ನೆಟ್ಟಿಗರು

ಕೆಲವರು ಟೆಲಿಗ್ರಾಂ ಉದಾಹರಣೆಯನ್ನು ಉಲ್ಲೇಖಿಸಿದ್ದಾರೆ. ಟೆಲಿಗ್ರಾಂನಲ್ಲಿ ಮೊಬೈಲ್ ಸಂಖ್ಯೆಯ ಬದಲು ಯೂಸರ್‌ನೇಮ್ ಮೂಲಕ ಸಂಪರ್ಕ ಸಾಧಿಸಬಹುದಾದ ಕಾರಣ, ವಿವಿಧ ಹೂಡಿಕೆ ವಂಚನೆಗಳು, ಸೈಬರ್ ಅಪರಾಧಗಳು ಹಾಗೂ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ತನಿಖೆಯಲ್ಲಿ ಈ ವೇದಿಕೆಯ ಹೆಸರು ಕೇಳಿಬಂದಿತ್ತು ಎಂದು ಅವರು ನೆನಪಿಸಿದ್ದಾರೆ.

ಅಂಕುರ್ ವಾರಿಕೂ ಎಚ್ಚರಿಕೆ

ಉದ್ಯಮಿ ಹಾಗೂ ಕಂಟೆಂಟ್ ಕ್ರಿಯೇಟರ್ ಅಂಕುರ್ ವಾರಿಕೂ ಕೂಡ ಈ ಹೊಸ ಫೀಚರ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. "ಭಾರತದಂತಹ ದೇಶದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಗಳಿಲ್ಲದೆ ಈ ಫೀಚರ್ ಜಾರಿಯಾದರೆ ದೊಡ್ಡ ಸಮಸ್ಯೆಯಾಗಬಹುದು," ಎಂದು ಅವರು ಹೇಳಿದ್ದಾರೆ. ತಮ್ಮ ಹೆಸರಿನಂತೆಯೇ ಕಾಣುವ 'wariko', 'awarikoo' ಅಥವಾ ಇತರ ಹೋಲಿಕೆಯ ಯೂಸರ್‌ನೇಮ್‌ಗಳನ್ನು ವಂಚಕರು ಸೃಷ್ಟಿಸಿ ಜನರನ್ನು ಮೋಸಗೊಳಿಸುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.

ವಾರಿಕೂ ಈ ಹಿಂದೆ ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಂಡು ಎಐ ಆಧಾರಿತ ನಕಲಿ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದ ಪ್ರಕರಣದಲ್ಲಿ ಮೆಟಾ ವಿರುದ್ಧ ಕಾನೂನು ಹೋರಾಟ ನಡೆಸಿದ್ದ ಹಿನ್ನೆಲೆಯಲ್ಲಿಯೇ ಈ ಆತಂಕ ವ್ಯಕ್ತಪಡಿಸಿದ್ದಾರೆ.

ವಿಜಯ್ ಶೇಖರ್ ಶರ್ಮಾ ಪ್ರತಿಕ್ರಿಯೆ

ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಕೂಡ ಇದೇ ರೀತಿಯ ಆತಂಕ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ವಾಟ್ಸ್ಆಪ್‌ನಲ್ಲಿ ಪರಿಶೀಲಿತ ಯೂಸರ್‌ನೇಮ್‌ಗಳು ಬರಲಿವೆ. ಅದರ ಜೊತೆಗೆ ಅದೇ ರೀತಿಯ ಹೆಸರುಗಳನ್ನು ಹೊಂದಿರುವ ಪರಿಶೀಲಿಸದ ಖಾತೆಗಳ ಸಂಖ್ಯೆಯೂ ಹೆಚ್ಚಾಗಬಹುದು ಎಂದು ಅವರು ಹೇಳಿದ್ದಾರೆ.

ಯೂಸರ್‌ನೇಮ್ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸಲಿದೆ?

ವಾಟ್ಸ್ಆಪ್ ಮಾಹಿತಿ ಪ್ರಕಾರ, ಬಳಕೆದಾರರು 3ರಿಂದ 35 ಅಕ್ಷರಗಳೊಳಗಿನ ವಿಶಿಷ್ಟ ಯೂಸರ್‌ನೇಮ್ ಆಯ್ಕೆ ಮಾಡಿಕೊಳ್ಳಬಹುದು. ಯಾರಾದರೂ ಮೊದಲ ಬಾರಿಗೆ ನಿಮ್ಮನ್ನು ಸಂಪರ್ಕಿಸಲು ನಿಮ್ಮ ಯೂಸರ್‌ನೇಮ್ ತಿಳಿದಿರಬೇಕು.

ಇದರ ಜೊತೆಗೆ ಬಳಕೆದಾರರು 'ಯೂಸರ್‌ನೇಮ್ ಕೀ' ಅನ್ನು ಹೊಂದಿಸಬಹುದಾಗಿದೆ. ಈ ಭದ್ರತಾ ವ್ಯವಸ್ಥೆಯ ಮೂಲಕ ಮೊದಲ ಬಾರಿಗೆ ಸಂದೇಶ ಕಳುಹಿಸುವವರು ಆ ಕೀಯನ್ನು ಬಳಸಬೇಕಾಗುತ್ತದೆ. ಅಗತ್ಯವಿದ್ದರೆ ಈ ಕೀಯನ್ನು ಬಳಕೆದಾರರು ಯಾವಾಗ ಬೇಕಾದರೂ ಬದಲಾಯಿಸಬಹುದು.

ಹೊಸ ಫೀಚರ್ ಜಾರಿಯಾದ ಬಳಿಕ, ಮೊದಲ ಬಾರಿಗೆ ಯೂಸರ್‌ನೇಮ್ ಮೂಲಕ ಸಂಪರ್ಕಿಸುವವರಿಗೆ ನಿಮ್ಮ ಮೊಬೈಲ್ ಸಂಖ್ಯೆ ಗೋಚರಿಸುವುದಿಲ್ಲ.

ಕೇಂದ್ರ ಸರ್ಕಾರದ ಮುಂದಿನ ನಡೆ ಏನು?

ಈ ಹೊಸ ವ್ಯವಸ್ಥೆಯಿಂದ ಬಳಕೆದಾರರ ಗೌಪ್ಯತೆ ಹೆಚ್ಚಾಗುವ ಸಾಧ್ಯತೆ ಇದ್ದರೂ, ಸೈಬರ್ ವಂಚನೆ ಮತ್ತು ನಕಲಿ ಖಾತೆಗಳ ಸಮಸ್ಯೆ ಉಲ್ಬಣವಾಗುವ ಸಾಧ್ಯತೆಯ ಬಗ್ಗೆ ಕೇಂದ್ರ ಸರ್ಕಾರ ಎಚ್ಚರಿಕೆಯಿಂದ ಗಮನ ಹರಿಸಿದೆ. ಈ ವೈಶಿಷ್ಟ್ಯದಿಂದ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗುವ ಸಾಧ್ಯತೆ ಕಂಡುಬಂದರೆ, ಮೆಟಾಗೆ ಸ್ಪಷ್ಟೀಕರಣ ಕೇಳುವ ನೋಟಿಸ್ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Read More
Next Story