ಗಗನಕ್ಕೇರಿದ ಚಿನ್ನ, ಬೆಳ್ಳಿ ದರ, ಒಂದೇ ದಿನ 10 ಸಾವಿರ ರೂ. ಏರಿಕೆ!
x

ಚಿನ್ನದ ದರ, ಸೋಮವಾರದ ವಹಿವಾಟಿನಲ್ಲಿ ಬರೋಬ್ಬರಿ 10 ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚು ಜಿಗಿತ ಕಂಡು 1,73,090 ರೂಪಾಯಿಗಳಿಗೆ ತಲುಪಿದೆ. 

ಗಗನಕ್ಕೇರಿದ ಚಿನ್ನ, ಬೆಳ್ಳಿ ದರ, ಒಂದೇ ದಿನ 10 ಸಾವಿರ ರೂ. ಏರಿಕೆ!

ಭಾರತದ ಭೌತಿಕ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹಿಂದೆಂದೂ ಕಾಣದ ರೀತಿಯಲ್ಲಿ ದಿಢೀರ್ ಏರಿಕೆ ಕಂಡಿದೆ.


Click the Play button to hear this message in audio format

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ನಡೆಸಿದ ಜಂಟಿ ದಾಳಿಯ ಬೆನ್ನಲ್ಲೇ ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಯುದ್ಧದ ಭೀತಿಯು ಜಾಗತಿಕ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಲಾರಂಭಿಸಿದೆ. ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಭಾರಿ ಅನಿಶ್ಚಿತತೆ ಹಾಗೂ ಷೇರುಪೇಟೆಗಳಲ್ಲಿನ ತಲ್ಲಣದಿಂದ ಕಂಗಾಲಾಗಿರುವ ಹೂಡಿಕೆದಾರರು, ಇದೀಗ ಸುರಕ್ಷಿತ ಹೂಡಿಕೆಯಾಗಿರುವ ಚಿನ್ನ ಮತ್ತು ಬೆಳ್ಳಿಯತ್ತ ಮುಖ ಮಾಡಿದ್ದಾರೆ. ಇದರ ನೇರ ಪರಿಣಾಮವಾಗಿ ಸೋಮವಾರ (ಮಾರ್ಚ್ 2) ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹಳದಿ ಲೋಹ ಹಾಗೂ ಬೆಳ್ಳಿಯ ಬೆಲೆಯಲ್ಲಿ ಭಾರಿ ಜಿಗಿತ ಕಂಡುಬಂದಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಏರಿಕೆ

ಭಾರತದ ಭೌತಿಕ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹಿಂದೆಂದೂ ಕಾಣದ ರೀತಿಯಲ್ಲಿ ದಿಢೀರ್ ಏರಿಕೆ ಕಂಡಿದೆ. ಹಿಂದಿನ ವಹಿವಾಟಿನಲ್ಲಿ 10 ಗ್ರಾಂಗೆ 1,62,490 ರೂಪಾಯಿಗಳಷ್ಟಿದ್ದ ಚಿನ್ನದ ದರ, ಸೋಮವಾರದ ವಹಿವಾಟಿನಲ್ಲಿ ಬರೋಬ್ಬರಿ 10 ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚು ಜಿಗಿತ ಕಂಡು 1,73,090 ರೂಪಾಯಿಗಳಿಗೆ ತಲುಪಿದೆ. ಅದೇ ರೀತಿ ಬೆಳ್ಳಿಯ ದರವು ಶುಕ್ರವಾರದ (ಫೆಬ್ರವರಿ 27) 2,82,140 ರೂಪಾಯಿಗಳಿಂದ 2,94,900 ರೂಪಾಯಿಗಳಿಗೆ (ಪ್ರತಿ ಕೆ.ಜಿ.ಗೆ) ತೀವ್ರ ಏರಿಕೆ ಕಂಡಿದೆ.

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಮತ್ತು ಇಸ್ರೇಲ್ ಹಾಗೂ ಕತಾರ್, ಯುಎಇ, ಕುವೈತ್, ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ನಡೆಸಿದ ಪ್ರತಿದಾಳಿಯು ಪ್ರಾದೇಶಿಕ ಸಂಘರ್ಷವನ್ನು ಉಲ್ಬಣಗೊಳಿಸಿದೆ. ಇದು ಹೂಡಿಕೆದಾರರನ್ನು ಮತ್ತಷ್ಟು ಆತಂಕಕ್ಕೀಡುಮಾಡಿದ್ದು, ಷೇರುಪೇಟೆ ಹಾಗೂ ಇತರ ಅಸ್ಥಿರ ವಲಯಗಳಿಂದ ಬಂಡವಾಳ ಹಿಂಪಡೆದು ಚಿನ್ನದಲ್ಲಿ ಹೂಡಿಕೆ ಮಾಡುವಂತೆ ಮಾಡಿದೆ.

ವಿಮಾನ ಹಾರಾಟ ರದ್ದತಿಯಿಂದ ಪೂರೈಕೆಗೆ ಹೊಡೆತ

ಭೌಗೋಳಿಕ-ರಾಜಕೀಯ ಅಪಾಯಗಳ ಜೊತೆಗೆ, ಚಿನ್ನದ ಪೂರೈಕೆಯ ಕಳವಳಗಳು ಕೂಡ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿವೆ. ಭಾರತಕ್ಕೆ ಅತಿಹೆಚ್ಚು ಚಿನ್ನ ಪೂರೈಸುವ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ದುಬೈನಿಂದ ಭೌತಿಕ ಚಿನ್ನದ ಸಾಗಣೆಗೆ ಇದೀಗ ತೀವ್ರ ಅಡೆತಡೆಯಾಗುವ ಆತಂಕ ಎದುರಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಹೆಚ್ಚಾಗಿರುವ ಕಾರಣ ವಿಮಾನಗಳ ಹಾರಾಟವನ್ನು ಬಹುತೇಕ ರದ್ದುಗೊಳಿಸಲಾಗಿದೆ. ಭದ್ರತೆ ಮತ್ತು ವಿಮಾ ಷರತ್ತುಗಳ ಕಾರಣದಿಂದಾಗಿ ಚಿನ್ನದ ಆಮದುಗಳನ್ನು ಪ್ರಧಾನವಾಗಿ ವಿಮಾನದ ಮೂಲಕವೇ ಸಾಗಿಸಲಾಗುತ್ತದೆ. ಹೀಗಾಗಿ ವಾಯು ಸಂಚಾರದಲ್ಲಿ ದೀರ್ಘಕಾಲದ ವ್ಯತ್ಯಯ ಉಂಟಾದರೆ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಪೂರೈಕೆ ಕಡಿತಗೊಂಡು ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಬದಲಾಗುತ್ತಿರುವ ರಾಜತಾಂತ್ರಿಕ ನಿಲುವುಗಳು ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆಯು ಸಹ ಚಿನ್ನದ ಬೆಲೆ ಏರಿಕೆ ಪ್ರವೃತ್ತಿಯನ್ನು ಬೆಂಬಲಿಸುತ್ತಿವೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಜಿಗಿತ

ದೇಶೀಯ ಮಾರುಕಟ್ಟೆಯಂತೆಯೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನ ಮತ್ತು ಬೆಳ್ಳಿಯ ದರಗಳು ಭಾರಿ ಏರಿಕೆ ದಾಖಲಿಸಿವೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸ್ಪಾಟ್ ಗೋಲ್ಡ್ ದರವು ಶೇಕಡಾ 2ರಷ್ಟು ಜಿಗಿದು ಪ್ರತಿ ಔನ್ಸ್‌ಗೆ 5,368.09 ಡಾಲರ್‌ಗೆ ತಲುಪಿದೆ. ಇದು ಕಳೆದ ನಾಲ್ಕು ವಾರಗಳಲ್ಲೇ ಗರಿಷ್ಠ ಮಟ್ಟವಾಗಿದೆ. ಅದೇ ರೀತಿ ಅಮೆರಿಕದ ಗೋಲ್ಡ್ ಫ್ಯೂಚರ್ಸ್ ದರವು ಶೇ. 2.58ರಷ್ಟು ಹೆಚ್ಚಾಗಿ ಪ್ರತಿ ಔನ್ಸ್‌ಗೆ 5,382.60 ಡಾಲರ್ ಮುಟ್ಟಿದೆ. ಸ್ಪಾಟ್ ಬೆಳ್ಳಿ ದರವೂ ಶೇ. 1.68ರಷ್ಟು ಏರಿಕೆಯಾಗಿ ಪ್ರತಿ ಔನ್ಸ್‌ಗೆ 95.35 ಡಾಲರ್ ತಲುಪಿದೆ. ಮಿಲಿಟರಿ ಕಾರ್ಯಾಚರಣೆಗಳ ಉಲ್ಬಣ, ರಾಜತಾಂತ್ರಿಕ ಅನಿಶ್ಚಿತತೆ ಹಾಗೂ ಪೂರೈಕೆಯಲ್ಲಿನ ಅಡೆತಡೆಗಳಿಂದಾಗಿ ಮುಂಬರುವ ದಿನಗಳಲ್ಲಿ ಬುಲಿಯನ್ ಮಾರುಕಟ್ಟೆಯಲ್ಲಿ ಈ ದರ ಏರಿಳಿತಗಳು ಮತ್ತಷ್ಟು ಮುಂದುವರಿಯಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

Read More
Next Story