ಆನ್‌ಲೈನ್‌ ಗೇಮ್‌ಗೆ ಬಲಿಯಾದ ಬಾಲಕಿಯರ ಸಾವಿನ ಹಿಂದೆ ಇದ್ಯಾ ಬೇರೆಯದ್ದೇ ಕಾರಣ?
x

ಗಾಜಿಯಾಬಾದ್‌ನಲ್ಲಿ ನಡೆದ ಮೂವರು ಅಪ್ರಾಪ್ತ ಸಹೋದರಿಯರ ಸಾಮೂಹಿಕ ಆತ್ಮಹತ್ಯೆ

ಆನ್‌ಲೈನ್‌ ಗೇಮ್‌ಗೆ ಬಲಿಯಾದ ಬಾಲಕಿಯರ ಸಾವಿನ ಹಿಂದೆ ಇದ್ಯಾ ಬೇರೆಯದ್ದೇ ಕಾರಣ?

ಈ ಮೂವರು ಸಹೋದರಿಯರು ಕೊರಿಯನ್ ಸಂಸ್ಕೃತಿಗೆ ಅತಿಯಾಗಿ ಮಾರುಹೋಗಿದ್ದರು. ತಾವು ಭಾರತೀಯರಲ್ಲ, ಕೊರಿಯನ್ನರು ಎಂದು ನಂಬುವಷ್ಟು ಆ ಜಗತ್ತಿನಲ್ಲಿ ಮುಳುಗಿದ್ದರು.


Click the Play button to hear this message in audio format

ಗಾಜಿಯಾಬಾದ್‌ನಲ್ಲಿ ನಡೆದ ಮೂವರು ಅಪ್ರಾಪ್ತ ಸಹೋದರಿಯರ ಸಾಮೂಹಿಕ ಆತ್ಮಹತ್ಯೆ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು,‌ ತನಿಖೆ ವೇಳೆ ಆಘಾತಕಾರಿ ಸಂಗತಿಗಳು ಬಯಲಾಗುತ್ತಿವೆ. ಈ ದುರಂತದ ಹಿಂದೆ ಕೌಟುಂಬಿಕ ಒತ್ತಡ ಹಾಗೂ ಕೊರಿಯನ್ ಜನಪ್ರಿಯ ಸಂಸ್ಕೃತಿಯ ಬಗ್ಗೆ ಆ ಹುಡುಗಿಯರಿಗಿದ್ದ ತೀವ್ರ ಆಕರ್ಷಣೆಯೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ.

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬುಧವಾರ ಮುಂಜಾನೆ ಅತ್ಯಂತ 12, 14 ಮತ್ತು 16 ವರ್ಷದ ಮೂವರು ಅಪ್ರಾಪ್ತ ಸಹೋದರಿಯರು ತಮ್ಮ ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಾಲಕಿಯರ ಮಾನಸಿಕ ದುರ್ಬಲತೆ ಮತ್ತು ಆನ್‌ಲೈನ್ ಜಗತ್ತಿನ ಆಕರ್ಷಣೆಯೇ ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಬೆಳಕಿಗೆ ಬಂದಿದೆ.

ಸಾಲದ ಸುಳಿಯಲ್ಲಿದ್ದ ತಂದೆ

ಸುಮಾರು ಎರಡು ಕೋಟಿ ರೂಪಾಯಿಗಳ ಸಾಲದ ಸುಳಿಯಲ್ಲಿದ್ದ ಮೃತ ಬಾಲಕಿಯರ ತಂದೆ ಚೇತನ್ ಕುಮಾರ್, ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಮಕ್ಕಳ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡಿದ್ದರು. ತನಿಖಾಧಿಕಾರಿಗಳ ಪ್ರಕಾರ, ಆ ಕುಟುಂಬವು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಫಾರೆಕ್ಸ್ ಟ್ರೇಡರ್ ಆಗಿದ್ದ ತಂದೆಯ ಮೇಲೆ ಸುಮಾರು 2 ಕೋಟಿ ರೂಪಾಯಿ ಸಾಲದ ಹೊರೆ ಇತ್ತು ಎಂದು ವರದಿಯಾಗಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಅವರು ತಮ್ಮ ಹೆಣ್ಣುಮಕ್ಕಳ ಮೊಬೈಲ್ ಫೋನ್‌ಗಳನ್ನು ಮಾರಿ, ಬಂದ ಹಣದಲ್ಲಿ ಕೇವಲ 800 ರೂಪಾಯಿಯನ್ನು ಮನೆಯ ವಿದ್ಯುತ್ ಮೀಟರ್ ರೀಚಾರ್ಜ್ ಮಾಡಲು ಬಳಸಿದ್ದರು ಎನ್ನಲಾಗಿದೆ. ಒಂದು ಕ್ಷಣದ ಕೋಪದಲ್ಲಿ ತಂದೆ ಹೆಣ್ಣುಮಕ್ಕಳಿಗೆ ಮದುವೆ ಮಾಡುವುದಾಗಿ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಸಹೋದರಿಯರು ʻʻನಾವು ಭಾರತೀಯರಲ್ಲ, ಕೊರಿಯನ್ನರು, ಆದ್ದರಿಂದ ನಾವು ಮದುವೆಯಾಗಲು ಸಾಧ್ಯವಿಲ್ಲʼʼ ಎಂದು ಹೇಳಿದ್ದರು ಎಂದು ತಿಳಿದುಬಂದಿದೆ.

ಇದಲ್ಲದೆ ಮಕ್ಕಳಿಗೆ ಆನ್‌ಲೈನ್ ಚಟುವಟಿಕೆಗಳಿಗೆ ತೀವ್ರ ನಿರ್ಬಂಧ ಹೇರಿದ್ದರು ಎಂಬ ಅಂಶ ತನಿಖೆಯಲ್ಲಿ ದೃಢಪಟ್ಟಿದೆ. ಮೃತ ಸಹೋದರಿಯರು ಸಾಮಾಜಿಕ ಜಾಲತಾಣಗಳಲ್ಲಿ ಮರಿಯಾ, ಅಲಿಜಾ ಮತ್ತು ಸಿಂಡಿಯಂತಹ ಕೊರಿಯನ್ ಶೈಲಿಯ ಹೆಸರುಗಳನ್ನು ಬಳಸುತ್ತಾ ಅತೀವವಾದ 'ಕೆ-ಡ್ರಾಮಾ' ಮತ್ತು 'ಕೆ-ಪಾಪ್' ವ್ಯಸನಕ್ಕೆ ಒಳಗಾಗಿದ್ದರು. ಸಾವಿಗೂ ಕೆಲವು ದಿನಗಳ ಮೊದಲು ತಂದೆಯು ಇವರ ಸೋಷಿಯಲ್ ಮೀಡಿಯಾ ಖಾತೆಗಳನ್ನು ಡಿಲೀಟ್ ಮಾಡಿ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು, ನೆಚ್ಚಿನ ಕೊರಿಯನ್ ಸರಣಿಗಳನ್ನು ವೀಕ್ಷಿಸಲು ಸಾಧ್ಯವಾಗದೆ ಹುಡುಗಿಯರು ತೀವ್ರ ಮಾನಸಿಕ ಸಂಕಟಕ್ಕೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.

ಅನ್ಯೋನ್ಯವಾಗಿದ್ದ ಸಹೋದರಿಯರು

ಮೃತಪಟ್ಟಿರುವ ಈ ಮೂವರು ಸಹೋದರಿಯರು ಕಳೆದ ಮೂರು ವರ್ಷಗಳಿಂದ ಶಾಲೆಗೆ ಹೋಗಿರಲಿಲ್ಲ ಮತ್ತು ಕೊರಿಯನ್ ಟಾಸ್ಕ್-ಆಧಾರಿತ ಆನ್‌ಲೈನ್ ಗೇಮ್‌ಗೆ ತೀವ್ರವಾಗಿ ಚಟ ಬೆಳೆಸಿಕೊಂಡಿದ್ದರು. ಇವರು ಎಷ್ಟು ಅನ್ಯೋನ್ಯವಾಗಿದ್ದರೆಂದರೆ ಊಟ, ನಿದ್ದೆ, ಸ್ನಾನ ಎಲ್ಲವನ್ನೂ ಜೊತೆಯಾಗಿಯೇ ಮಾಡುತ್ತಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ಮೊಬೈಲ್‌ಗಳನ್ನು ಹೊರಗೆ ಎಸೆದು, ಕೋಣೆಯ ಬಾಗಿಲು ಹಾಕಿಕೊಂಡು ಒಬ್ಬರ ನಂತರ ಒಬ್ಬರು ಬಾಲ್ಕನಿಯಿಂದ ಜಿಗಿದಿದ್ದಾರೆ ಎಂದು ತಿಳಿದುಬಂದಿದೆ.

ಆನ್‌ಲೈನ್ ಗೇಮ್‌ನ ಪ್ರಭಾವ

ಪೊಲೀಸ್ ತನಿಖೆಯ ಪ್ರಕಾರ, ಈ ಬಾಲಕಿಯರು ಕೊರಿಯನ್ ಲವ್ ಗೇಮ್ಎಂಬ ಚಟುವಟಿಕೆ ಆಧಾರಿತ ಆಪ್‌ಗೆ ದಾಸರಾಗಿದ್ದರು. ಇದು ಸಾಮಾನ್ಯ ಪ್ಲೇಸ್ಟೋರ್‌ಗಳಲ್ಲಿ ಲಭ್ಯವಿಲ್ಲದೆ ಖಾಸಗಿ ಲಿಂಕ್‌ಗಳ ಮೂಲಕ ಹರಡುತ್ತದೆ. ಇದರಲ್ಲಿ ವರ್ಚುವಲ್ ಪಾಲುದಾರರು ಕೊರಿಯನ್ ಭಾಷೆಯಲ್ಲಿ ಮಾತನಾಡಿ ಪ್ರತಿದಿನ ಟಾಸ್ಕ್‌ ನೀಡುತ್ತಾರೆ. ಈ ಗೇಮ್‌ನ ಹುಚ್ಚು ಎಷ್ಟಿತ್ತೆಂದರೆ ಅವರು ತಮಗೆ ಕೊರಿಯನ್ ಹೆಸರುಗಳನ್ನೇ ಇಟ್ಟುಕೊಂಡಿದ್ದರು.

ತಂದೆ ಚೇತನ್ ಕುಮಾರ್ ಹೇಳುವಂತೆ, ಮಕ್ಕಳು ಓದಿನಲ್ಲಿ ಹಿಂದೆ ಇದ್ದ ಕಾರಣ ಶಾಲೆಗೆ ಕಳುಹಿಸುತ್ತಿರಲಿಲ್ಲ. ಆದರೆ ಪೊಲೀಸರ ಪ್ರಕಾರ, 2 ಕೋಟಿ ರೂ. ಸಾಲವಿದ್ದ ಕಾರಣ ಶುಲ್ಕ ಪಾವತಿಸಲು ಸಾಧ್ಯವಾಗದೆ ಅವರು ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿದ್ದರು. ಕೋವಿಡ್ ಸಮಯದಲ್ಲಿ ಶುರುವಾದ ಈ ಮೊಬೈಲ್ ಚಟ, ನಂತರ ಅವರನ್ನು ಸಾಮಾಜಿಕವಾಗಿ ಸಂಪೂರ್ಣವಾಗಿ ಏಕಾಂಗಿಗಳನ್ನಾಗಿ ಮಾಡಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳು ಬರೆದಿಟ್ಟಿದ್ದ ಡೆತ್‌ನೋಟ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಹಲವು ಪುಟಗಳ ಡೆತ್ ನೋಟ್‌ನಲ್ಲಿ ಮಕ್ಕಳ ನೋವು ಮತ್ತು ಒಂಟಿತನ ವ್ಯಕ್ತವಾಗಿದ್ದು, ತಮ್ಮ ಆಸಕ್ತಿಗಳನ್ನು ಪೋಷಕರು ಅರ್ಥಮಾಡಿಕೊಳ್ಳಲಿಲ್ಲಎಂಬ ನೋವನ್ನು ಅವರು ತೋಡಿಕೊಂಡಿದ್ದಾರೆ.

ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬರೆದಿದ್ದ ಪತ್ರದಲ್ಲಿ, "ಈ ಡೈರಿಯಲ್ಲಿ ಬರೆದಿರುವ ಪ್ರತಿಯೊಂದನ್ನೂ ಓದಿ, ಅದೆಲ್ಲವೂ ಸತ್ಯ. ನಮಗೆ ಕ್ಷಮಿಸಿ ಪಪ್ಪಾ ಎಂದು ಬರೆದು ಅಳುತ್ತಿರುವ ಎಮೋಜಿಯನ್ನು ಬಿಡಿಸಿದ್ದಾರೆ. ಕೊರಿಯಾ ನಮಗೆ ಜೀವನ, ನೀವು ನಮ್ಮನ್ನು ಬಿಡಿಸಲು ಸಾಧ್ಯವಿಲ್ಲ, ಅದಕ್ಕಾಗಿ ನಾವು ಪ್ರಾಣ ಬಿಡುತ್ತಿದ್ದೇವೆ" ಎಂದು ಅವರು ಬರೆದಿದ್ದಾರೆ. ಅಲ್ಲದೆ ಗೋಡೆಯ ಮೇಲೆ ನಾನು ತುಂಬಾ ಒಬ್ಬಂಟಿ ಎಂದು ಬರೆದಿರುವ ಹುಡುಗಿಯರು, ಪದೇ ಪದೇ ತಂದೆಯ ಕ್ಷಮೆಯಾಚಿಸುತ್ತಲೇ ತಮ್ಮ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿರುವುದು ದುರಂತ.

Read More
Next Story