
ಘಾಜಿಯಾಬಾದ್ ಸಹೋದರಿಯರ ಆತ್ಮಹತ್ಯೆ: ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಶಾಕಿಂಗ್ ಸಂಗತಿ
ಬಾಲಕಿಯರ ತಂದೆ ಚೇತನ್ ಕುಮಾರ್ ಅವರು ತಮ್ಮ ಪುತ್ರಿಯರು ಕಳೆದ ಮೂರು ವರ್ಷಗಳಿಂದ ಆನ್‌ಲೈನ್ ಟಾಸ್ಕ್ ಗೇಮ್ ಆಡುತ್ತಿದ್ದರು ಮತ್ತು ಕೊರಿಯಾಕ್ಕೆ ಹೋಗಲು ಹಠ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಘಾಜಿಯಾಬಾದ್‌ನಲ್ಲಿ ಮೂವರು ಅಪ್ರಾಪ್ತ ಸಹೋದರಿಯರು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮರಣೋತ್ತರ ಪರೀಕ್ಷೆಯ ವರದಿ ಹೊರಬಿದ್ದಿದೆ. ಸುಮಾರು 80 ಅಡಿ ಎತ್ತರದಿಂದ ಬಿದ್ದ ಪರಿಣಾಮವಾಗಿ ಸಹೋದರಿಯರ ಪಕ್ಕೆಲುಬುಗಳು ಮುರಿದಿದ್ದವು ಮತ್ತು ಹೃದಯ, ಯಕೃತ್ತು (Liver), ಮೂತ್ರಪಿಂಡಗಳೂ ಸೇರಿದಂತೆ ದೇಹದ ಅಂಗಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದವು ಎಂದು ವರದಿ ತಿಳಿಸಿದೆ. ಅತಿಯಾದ ರಕ್ತಸ್ರಾವ ಮತ್ತು ಅಂಗಾಂಗ ವೈಫಲ್ಯವೇ ಸಾವಿಗೆ ಮುಖ್ಯ ಕಾರಣ ಎಂದು ವೈದ್ಯಕೀಯ ತಂಡ ಖಚಿತಪಡಿಸಿದೆ.
ತನಿಖೆಯಲ್ಲಿ ಕಂಡುಬಂದ ಪ್ರಮುಖ ಅಂಶಗಳು
ಆಹಾರ ಸೇವನೆ: ಹಿರಿಯ ಸಹೋದರಿಯ ಹೊಟ್ಟೆಯಲ್ಲಿ ಕೇವಲ 50 ಗ್ರಾಂ ಆಹಾರವಿತ್ತು, ಅಂದರೆ ಮಧ್ಯಾಹ್ನದ ನಂತರ ಆಕೆ ಏನನ್ನೂ ಸೇವಿಸಿರಲಿಲ್ಲ. ಆದರೆ ಉಳಿದ ಇಬ್ಬರು ಸಹೋದರಿಯರ ಹೊಟ್ಟೆಯಲ್ಲಿ 250 ರಿಂದ 300 ಗ್ರಾಂ ಆಹಾರವಿದ್ದು, ಅವರು ರಾತ್ರಿ ಊಟ ಮಾಡಿದ್ದರು ಎಂಬುದು ಸ್ಪಷ್ಟವಾಗಿದೆ.
ದೇಹದ ಮೇಲಿನ ಗಾಯಗಳು: ಮೂವರ ದೇಹದ ಮೇಲೆಯೂ ಯಾವುದೇ ಹಳೆಯ ಗಾಯದ ಗುರುತುಗಳು ಅಥವಾ ಹಿಂಸೆಯ ಕುರುಹುಗಳು ಪತ್ತೆಯಾಗಿಲ್ಲ.
ಕೊರಿಯನ್ ಕನೆಕ್ಷನ್: ಸ್ಥಳದಲ್ಲಿ ಸಿಕ್ಕ ಎಂಟು ಪುಟಗಳ ಆತ್ಮಹತ್ಯೆ ಪತ್ರದಲ್ಲಿ ತಮ್ಮ ನಾಲ್ಕನೇ (ಕಿರಿಯ) ಸಹೋದರಿಯನ್ನು ಕೊರಿಯನ್ ಗೆಳೆಯರೊಂದಿಗೆ ಮಾತನಾಡಿಸುತ್ತಿದ್ದ ಬಗ್ಗೆ ಉಲ್ಲೇಖವಿದೆ. ಆದರೆ ಈ ಗೆಳೆಯರು ಯಾರು ಮತ್ತು ಅವರನ್ನು ಯಾವ ಸೋಶಿಯಲ್ ಮೀಡಿಯಾ ಮೂಲಕ ಸಂಪರ್ಕಿಸಿದ್ದರು ಎಂಬುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ.
ಮೊಬೈಲ್ ಫೋನ್ ಮತ್ತು ಆನ್‌ಲೈನ್ ಗೇಮ್ ರಹಸ್ಯ
ಬಾಲಕಿಯರ ತಂದೆ ಚೇತನ್ ಕುಮಾರ್ ಅವರು ತಮ್ಮ ಪುತ್ರಿಯರು ಕಳೆದ ಮೂರು ವರ್ಷಗಳಿಂದ ಆನ್‌ಲೈನ್ ಟಾಸ್ಕ್ ಗೇಮ್ ಆಡುತ್ತಿದ್ದರು ಮತ್ತು ಕೊರಿಯಾಕ್ಕೆ ಹೋಗಲು ಹಠ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಆದರೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಅವರ ತಾಯಿಯ ಫೋನ್‌ನಲ್ಲಿ ಯಾವುದೇ ಕೊರಿಯನ್ ಆ್ಯಪ್ ಅಥವಾ ಗೇಮ್ ಪತ್ತೆಯಾಗಿಲ್ಲ.
ಕಾಣೆಯಾದ ಫೋನ್‌ಗಳ ಹುಡುಕಾಟ
ತನಿಖೆಯಲ್ಲಿ ತಿಳಿದುಬಂದಂತೆ, ತಂದೆ ಚೇತನ್ ಅವರು ಸುಮಾರು 6 ತಿಂಗಳ ಹಿಂದೆ ಇಬ್ಬರು ಪುತ್ರಿಯರಿಗೆ ಮೊಬೈಲ್ ಕೊಡಿಸಿದ್ದರು. ಆದರೆ ನಂತರ ಅವುಗಳನ್ನು ಅವರಿಂದ ಕಿತ್ತುಕೊಂಡು ಮಾರಿಬಿಟ್ಟಿದ್ದರು. ಈಗ ಪೊಲೀಸರು ಆ ಮಾರಾಟವಾದ ಫೋನ್‌ಗಳ IMEI ಸಂಖ್ಯೆಯನ್ನು ಆಧರಿಸಿ ಅವುಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಆ ಫೋನ್‌ಗಳು ಸಿಕ್ಕರೆ ಮಾತ್ರ ಈ 'ಕೊರಿಯನ್ ಕನೆಕ್ಷನ್' ಅಸಲಿಯತ್ತು ತಿಳಿಯಲಿದೆ.
ಕುಟುಂಬದ ಹಿನ್ನೆಲೆ
ಪೋಲೀಸರ ತನಿಖೆಯ ಪ್ರಕಾರ, ಈ ಮೂವರು ಸಹೋದರಿಯರು ಯಾವಾಗಲೂ ಒಗ್ಗಟ್ಟಾಗಿ ಇರುತ್ತಿದ್ದರು. ಊಟ ಮಾಡುವುದರಿಂದ ಹಿಡಿದು ಸ್ನಾನ ಮಾಡುವವರೆಗೆ ಎಲ್ಲವನ್ನೂ ಒಟ್ಟಿಗೇ ಮಾಡುತ್ತಿದ್ದರು. 14 ವರ್ಷದ ಪ್ರಾಚಿ ಈ ಗುಂಪಿನ ಲೀಡರ್ ಆಗಿದ್ದಳು ಮತ್ತು ಅವಳೇ ಎಲ್ಲವನ್ನೂ ನಿರ್ಧರಿಸುತ್ತಿದ್ದಳು. ಈ ಹಿಂದೆ ಪರೀಕ್ಷೆಯಲ್ಲಿ ಫೇಲ್ ಆಗಿದ್ದ ಕಾರಣಕ್ಕೆ ಮುಜುಗರದಿಂದ ಅವರು ಶಾಲೆಗೆ ಹೋಗುವುದನ್ನು ನಿಲ್ಲಿಸಿ ಮೊಬೈಲ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಪ್ರಸ್ತುತ ಘಾಜಿಯಾಬಾದ್ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದು, ಮೊಬೈಲ್ ಫೋನ್‌ಗಳನ್ನು ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸಿದ್ದಾರೆ.

