
ಗಾಂಧೀನಗರದ ಕುಡಾಸನ್‌ನಲ್ಲಿ ನಿರ್ಮಾಣ ಹಂತದ ಕಟ್ಟಡದ ಲೋಹದ ಸ್ಲ್ಯಾಬ್ ಕುಸಿದು 15 ಕಾರ್ಮಿಕರನ್ನು ರಕ್ಷಿಸಲಾಗಿದೆ.
ನಿರ್ಮಾಣ ಹಂತದ ಕಟ್ಟಡದಲ್ಲಿ ಘೋರ ದುರಂತ- ಲೋಹದ ಸ್ಲ್ಯಾಬ್ ಕುಸಿದು 15 ಕಾರ್ಮಿಕರಿಗೆ ಗಂಭೀರ ಗಾಯ
ಅವಶೇಷ ತೆರವುಗೊಳಿಸಲು ಕಾಂಕ್ರೀಟ್ ಮತ್ತು ಲೋಹ ಕತ್ತರಿಸುವ ಯಂತ್ರಗಳು ಹಾಗೂ 300 ಟನ್‌ಗಿಂತ ಹೆಚ್ಚು ಸಾಮರ್ಥ್ಯದ ವಿಶೇಷ ಕ್ರೇನ್‌ಗಳನ್ನು ಸ್ಥಳಕ್ಕೆ ತರಲಾಗಿದೆ. ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ನಿರ್ಮಾಣ ಸ್ಥಳದ ಪ್ರತಿಯೊಂದು ಭಾಗವನ್ನೂ ಪರಿಶೀಲಿಸಲಾಗುತ್ತಿದೆ.
ಗುಜರಾತ್‌ನ ಗಾಂಧೀನಗರದ ಕುಡಾಸನ್ ಪ್ರದೇಶದಲ್ಲಿ ಬುಧವಾರ ರಾತ್ರಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬೃಹತ್ ಲೋಹದ ಸ್ಲ್ಯಾಬ್ ಕುಸಿದು ಅವಘಡ ಸಂಭವಿಸಿದೆ. ಘಟನೆಯಲ್ಲಿ ಸಿಲುಕಿದ್ದ 15 ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಈ ಪೈಕಿ 12 ಮಂದಿಯನ್ನು ಗಾಂಧೀನಗರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಕಾರ್ಮಿಕರಿಗೆ ಗಂಭೀರ ಗಾಯಗಳಾಗದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 12 ಕಾರ್ಮಿಕರ ಆರೋಗ್ಯ ಸ್ಥಿರವಾಗಿದ್ದು, ಯಾರೊಬ್ಬರೂ ಗಂಭೀರ ಸ್ಥಿತಿಯಲ್ಲಿಲ್ಲ ಎಂದು ಗುಜರಾತ್ ಉಪಮುಖ್ಯಮಂತ್ರಿ ಹರ್ಷ್ ಸಂಘವಿ ತಿಳಿಸಿದ್ದಾರೆ. ರಾತ್ರಿ ಸುಮಾರು 9 ಗಂಟೆಗೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಬೃಹತ್ ಲೋಹದ ಸ್ಲ್ಯಾಬ್ ಏಕಾಏಕಿ ಕುಸಿದಿದೆ.
ರಾತ್ರಿ ಪೂರ್ತಿ ರಕ್ಷಣಾ ಕಾರ್ಯಾಚರಣೆ
ಅವಶೇಷಗಳಡಿ ಇನ್ನೂ ಯಾರಾದರೂ ಸಿಲುಕಿರುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ಅಧಿಕಾರಿಗಳು ರಾತ್ರಿ ಪೂರ್ತಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಸ್ಥಳೀಯ ಆಡಳಿತ, ಮಹಾನಗರ ಪಾಲಿಕೆ, ಜಿಲ್ಲಾ ಪೊಲೀಸ್, ಜಿಲ್ಲಾಡಳಿತ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.
ಅವಶೇಷ ತೆರವುಗೊಳಿಸಲು ಕಾಂಕ್ರೀಟ್ ಮತ್ತು ಲೋಹ ಕತ್ತರಿಸುವ ಯಂತ್ರಗಳು ಹಾಗೂ 300 ಟನ್‌ಗಿಂತ ಹೆಚ್ಚು ಸಾಮರ್ಥ್ಯದ ವಿಶೇಷ ಕ್ರೇನ್‌ಗಳನ್ನು ಸ್ಥಳಕ್ಕೆ ತರಲಾಗಿದೆ. ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ನಿರ್ಮಾಣ ಸ್ಥಳದ ಪ್ರತಿಯೊಂದು ಭಾಗವನ್ನೂ ಪರಿಶೀಲಿಸಲಾಗುತ್ತಿದೆ.
ಆರಂಭದಲ್ಲಿ ಐವರು ಗಾಯಾಳು ಕಾರ್ಮಿಕರನ್ನು ರಕ್ಷಿಸಿ ಗಾಂಧೀನಗರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಸಚಿವ ಪ್ರಫುಲ್ ಪನ್ಶೇರಿಯಾ ಮಾಹಿತಿ ನೀಡಿದ್ದರು. ಬಳಿಕ ಮತ್ತಷ್ಟು ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಒಟ್ಟು 15 ಮಂದಿ ಸುರಕ್ಷಿತವಾಗಿ ಹೊರತರಲಾಗಿದೆ.

