
71 ವರ್ಷದ ಮುಕುಲ್ ರಾಯ್ ಅವರು ಸೋಮವಾರ ಮುಂಜಾನೆ 1.30ರ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೇಂದ್ರದ ಮಾಜಿ ಸಚಿವ, ಹಿರಿಯ ರಾಜಕಾರಣಿ ಮುಕುಲ್ ರಾಯ್ ನಿಧನ
1998ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಸ್ಥಾಪನೆಯಾದಾಗ ಮುಕುಲ್ ರಾಯ್ ಅವರು ಪಕ್ಷದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಸುದೀರ್ಘ ಕಾಲ ಟಿಎಂಸಿಯಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಪಕ್ಷಗಳ ಪ್ರಮುಖ ತಂತ್ರಗಾರರಾಗಿ ಗುರುತಿಸಿಕೊಂಡಿದ್ದ ಹಿರಿಯ ರಾಜಕಾರಣಿ ಹಾಗೂ ಕೇಂದ್ರದ ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ಅವರು ಸೋಮವಾರ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೂಲಗಳು ಖಚಿತಪಡಿಸಿವೆ.
ಹಲವು ದಿನಗಳಿಂದ ಕೋಮಾದಲ್ಲಿದ್ದ ನಾಯಕ
71 ವರ್ಷದ ಮುಕುಲ್ ರಾಯ್ ಅವರು ಸೋಮವಾರ ಮುಂಜಾನೆ 1.30ರ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಹಲವು ದಿನಗಳಿಂದ ಅವರು ಕೋಮಾ ಸ್ಥಿತಿಯಲ್ಲಿದ್ದರು ಎಂದು ಅವರ ಪುತ್ರ ಶುಭ್ರಾಂಶು ರಾಯ್ ಮಾಹಿತಿ ನೀಡಿದ್ದಾರೆ. ತೀವ್ರ ಅನಾರೋಗ್ಯದ ಕಾರಣದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಸತತ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಮುಂಜಾನೆ ಹೃದಯಾಘಾತ ಸಂಭವಿಸಿ ಅವರು ಇಹಲೋಕ ತ್ಯಜಿಸಿದ್ದಾರೆ.
ಟಿಎಂಸಿ ಸಂಸ್ಥಾಪಕ ಸದಸ್ಯರಾಗಿದ್ದ ರಾಯ್
1998ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಸ್ಥಾಪನೆಯಾದಾಗ ಮುಕುಲ್ ರಾಯ್ ಅವರು ಪಕ್ಷದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಸುದೀರ್ಘ ಕಾಲ ಟಿಎಂಸಿಯಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು, ತದನಂತರ ಪಕ್ಷದ ನಾಯಕರೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ 2017ರಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರ್ಪಡೆಯಾಗಿದ್ದರು. 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಡಿ ಕೃಷ್ಣನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಚುನಾವಣೆ ಮುಗಿದ ಬಳಿಕ ಮತ್ತೆ ಟಿಎಂಸಿ ಮಡಿಲಿಗೆ ಮರಳಿದ್ದರು.
ಯುಪಿಎ-2 ಸರ್ಕಾರದಲ್ಲಿ ರೈಲ್ವೆ ಸಚಿವರಾಗಿ ಸೇವೆ
ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ರಾಜ್ಯ ಹಾಗೂ ಕೇಂದ್ರದಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದರು. ಯುಪಿಎ-2 ಸರ್ಕಾರದ ಅವಧಿಯಲ್ಲಿ ಟಿಎಂಸಿ ಕೇಂದ್ರ ಸರ್ಕಾರದ ಭಾಗವಾಗಿದ್ದಾಗ, 2011ರಲ್ಲಿ ಅವರು ಕೇಂದ್ರ ರೈಲ್ವೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಶಾಸಕರಾಗಿ, ಸಚಿವರಾಗಿ ಮಾತ್ರವಲ್ಲದೆ, ಪಶ್ಚಿಮ ಬಂಗಾಳದಿಂದ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿಯೂ ಅವರು ಆಯ್ಕೆಯಾಗಿ ಸಂಸತ್ತಿನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು.

