ಫೋರ್ಡ್‌ನಲ್ಲಿ ಕೈಕೊಟ್ಟ ಎಐ ತಂತ್ರಜ್ಞಾನ: ಹಳೇ ಇಂಜಿನಿಯರ್‌ಗಳ ಮತ್ತೆ ವಾಪಸ್!
x

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ತನ್ನ ವಾಹನಗಳ ಗುಣಮಟ್ಟದ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ನಂಬಿದ್ದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆ ಫೋರ್ಡ್‌ಗೆ ಭಾರಿ ನಿರಾಸೆಯಾಗಿದೆ.

ಫೋರ್ಡ್‌ನಲ್ಲಿ ಕೈಕೊಟ್ಟ ಎಐ ತಂತ್ರಜ್ಞಾನ: ಹಳೇ ಇಂಜಿನಿಯರ್‌ಗಳ ಮತ್ತೆ ವಾಪಸ್!

ಎಐ ತಂತ್ರಜ್ಞಾನದಿಂದ ವಾಹನಗಳ ಗುಣಮಟ್ಟ ಕಾಯ್ದುಕೊಳ್ಳಲು ವಿಫಲವಾದ ಫೋರ್ಡ್ ಕಂಪನಿ, ಕೃತಕ ಬುದ್ಧಿಮತ್ತೆಗೆ ಮರು-ತರಬೇತಿ ನೀಡಲು ತನ್ನ 350 ಹಿರಿಯ ಅನುಭವಿ ಇಂಜಿನಿಯರ್‌ಗಳನ್ನು ಮತ್ತೆ ಕೆಲಸಕ್ಕೆ ಕರೆತಂದಿದೆ.


Click the Play button to hear this message in audio format

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ತನ್ನ ವಾಹನಗಳ ಗುಣಮಟ್ಟದ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ನಂಬಿದ್ದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆ ಫೋರ್ಡ್‌ಗೆ ಭಾರಿ ನಿರಾಸೆಯಾಗಿದೆ. ದಶಕಗಳ ಕಾಲದ ಮಾನವ ಅನುಭವ ಮತ್ತು ಇಂಜಿನಿಯರಿಂಗ್ ಕೌಶಲ್ಯವಿಲ್ಲದೆ ಕೇವಲ ಎಐ ತಂತ್ರಜ್ಞಾನದಿಂದ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಿಲ್ಲ ಎಂಬುದು ಕಂಪನಿಗೆ ಮನವರಿಕೆಯಾಗಿದೆ.

ಈ ಹಿನ್ನೆಲೆಯಲ್ಲಿ ಫೋರ್ಡ್ ಸಂಸ್ಥೆಯು ತನ್ನ ನೂರಾರು ಹಿರಿಯ ಅನುಭವಿ ಇಂಜಿನಿಯರ್‌ಗಳನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದು, ಈ ಹೊಸ ತಂತ್ರ ಇದೀಗ ಕಂಪನಿಗೆ ಉತ್ತಮ ಫಲಿತಾಂಶ ನೀಡಲು ಆರಂಭಿಸಿದೆ.

ಎಐನಿಂದ ಗುಣಮಟ್ಟ ಸಾಧ್ಯವಿಲ್ಲ ಎಂದು ಅರಿತ ಆಟೋಮೊಬೈಲ್ ದೈತ್ಯ

ಕಳೆದ ಮೂರು ವರ್ಷಗಳಲ್ಲಿ ಫೋರ್ಡ್ ಸಂಸ್ಥೆಯು ತನ್ನ ಮಾಜಿ ಉದ್ಯೋಗಿಗಳು ಹಾಗೂ ಪೂರೈಕೆದಾರ ಕಂಪನಿಗಳ ತಜ್ಞರು ಸೇರಿದಂತೆ ಸುಮಾರು 350 ಕ್ಕೂ ಹೆಚ್ಚು ಹಿರಿಯ ಇಂಜಿನಿಯರ್‌ಗಳನ್ನು ಮರುನೇಮಕ ಮಾಡಿಕೊಂಡಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಕಂಪನಿಯು ಕೇವಲ ಆಟೊಮೇಷನ್ ಹಾಗೂ ತಂತ್ರಜ್ಞಾನದ ಮೇಲೆ ಅತಿಯಾದ ನಂಬಿಕೆ ಇಟ್ಟು, ಹಲವು ತಲೆಮಾರುಗಳ ವಾಹನ ವಿನ್ಯಾಸದಲ್ಲಿ ಅನುಭವ ಹೊಂದಿದ್ದ ಉದ್ಯೋಗಿಗಳ ಜ್ಞಾನವನ್ನು ನಿರ್ಲಕ್ಷಿಸಿರುವುದು ಈ ಸಮಸ್ಯೆಗೆ ಮುಖ್ಯ ಕಾರಣ ಎಂದು ಕಂಪನಿಯ ಉನ್ನತ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಕೇವಲ ಎಐ ತಂತ್ರಜ್ಞಾನವನ್ನು ಅಳವಡಿಸಿ, ಅದಕ್ಕೆ ವಿನ್ಯಾಸದ ಅಗತ್ಯತೆಗಳನ್ನು ಇನ್‌ಪುಟ್ ಮಾಡುವುದರಿಂದಲೇ ಉತ್ತಮ ಗುಣಮಟ್ಟದ ಉತ್ಪನ್ನ ಸಿಗುತ್ತದೆ ಎಂದು ತಾವು ತಪ್ಪಾಗಿ ಭಾವಿಸಿದ್ದಾಗಿ ಫೋರ್ಡ್ ಕಂಪನಿಯ ವೆಹಿಕಲ್ ಹಾರ್ಡ್‌ವೇರ್ ಇಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷ ಚಾರ್ಲ್ಸ್ ಪೂನ್ ತಿಳಿಸಿದ್ದಾರೆ. ಎಐ ಅತ್ಯುತ್ತಮ ಸಾಧನ ಹೌದಾದರೂ, ಅದಕ್ಕೆ ತರಬೇತಿ ನೀಡಲು ಬಳಸುವ ಮಾಹಿತಿ ಎಷ್ಟು ನಿಖರವಾಗಿರುತ್ತದೆಯೋ ಅಷ್ಟೇ ಉತ್ತಮವಾಗಿ ಅದು ಕೆಲಸ ಮಾಡುತ್ತದೆ. ಹಿರಿಯ ಇಂಜಿನಿಯರ್‌ಗಳು ಕಂಪನಿ ತೊರೆಯುವ ಮುನ್ನ ಅವರ ಜ್ಞಾನವನ್ನು ಸೂಕ್ತವಾಗಿ ಬಳಸಿಕೊಳ್ಳದ ಕಾರಣ, ಎಐ ತಂತ್ರಜ್ಞಾನಕ್ಕೆ ವಾಹನ ತಯಾರಿಕೆಯ ನೈಜ ಸವಾಲುಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಅವರು ವಿವರಿಸಿದ್ದಾರೆ.

ಗ್ರೇ ಬೇರ್ಡ್ ಇಂಜಿನಿಯರ್‌ಗಳ ಶಕ್ತಿ ಪ್ರದರ್ಶನ

ಕಂಪನಿಯ ಒಳಗಡೆ "ಗ್ರೇ ಬೇರ್ಡ್" (ಅನುಭವಿಗಳು) ಎಂದು ಕರೆಯಲಾಗುವ ಈ ಹಿರಿಯ ಇಂಜಿನಿಯರ್‌ಗಳು ಇದೀಗ ಯುವ ಉದ್ಯೋಗಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅದರೊಂದಿಗೆ ಎಐ ಪರಿಕರಗಳಿಗೆ ಮರು-ತರಬೇತಿ ನೀಡುವ ಮೂಲಕ, ವಾಹನಗಳು ಪ್ರೊಡಕ್ಷನ್ ಲೈನ್‌ಗೆ ಬರುವ ಮುನ್ನವೇ ಗುಣಮಟ್ಟದ ದೋಷಗಳನ್ನು ಪತ್ತೆಹಚ್ಚಲು ನೆರವಾಗುತ್ತಿದ್ದಾರೆ. ಸಮಸ್ಯೆಗಳು ಎದುರಾದ ನಂತರ ಅವುಗಳನ್ನು ಸರಿಪಡಿಸುವ ಬದಲು, ಸಮಸ್ಯೆಗಳು ಸೃಷ್ಟಿಯಾಗದಂತೆ ತಡೆಯುವ ನಿಟ್ಟಿನಲ್ಲಿ ಈ ಹಿರಿಯ ತಜ್ಞರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಗಲ್ಹೋತ್ರಾ ತಿಳಿಸಿದ್ದಾರೆ. ಈ ಬದಲಾವಣೆಯಿಂದಾಗಿ ಇತ್ತೀಚಿನ ಜೆ.ಡಿ. ಪವರ್ ಇನಿಶಿಯಲ್ ಕ್ವಾಲಿಟಿ ಸರ್ವೆಯಲ್ಲಿ ಫೋರ್ಡ್ ಕಂಪನಿಯು ಮುಂಚೂಣಿ ಸ್ಥಾನಕ್ಕೇರಲು ಸಾಧ್ಯವಾಗಿದೆ.

ಹಾಗೂ ಎಂದಿಗೂ ಫೋರ್ಡ್ ಕಂಪನಿ ಎಐ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಕೈಬಿಡುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. ಬದಲಿಗೆ, ಹಿರಿಯ ಇಂಜಿನಿಯರ್‌ಗಳ ಅನುಭವದ ದತ್ತಾಂಶವನ್ನು ಬಳಸಿಕೊಂಡು ಎಐ ತಂತ್ರಜ್ಞಾನವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ. ಸಾಫ್ಟ್‌ವೇರ್ ಗುಣಮಟ್ಟವನ್ನು ಸೂಕ್ತವಾಗಿ ಪರೀಕ್ಷಿಸಲು ಸುಮಾರು 1 ಲಕ್ಷಕ್ಕೂ ಹೆಚ್ಚು ಹೊಸ ಎಐ-ಚಾಲಿತ ಪರೀಕ್ಷಾ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಗ್ರಾಹಕರಿಗೆ ವಾಹನಗಳು ತಲುಪುವ ಮುನ್ನವೇ ಎಲ್ಲಾ ರೀತಿಯ ತಾಂತ್ರಿಕ ದೋಷಗಳನ್ನು ನಿವಾರಿಸಲು ಕಂಪನಿ ಮುಂದಾಗಿದೆ.

Read More
Next Story