
ನಿರಂತರ ಕುಳಿತು ಕೆಲಸ ಮಾಡ್ತೀರಾ? ಗಂಟೆಗೊಮ್ಮೆ ಐದು ನಿಮಿಷದ ನಡಿಗೆಯೇ ಸಂಜೀವಿನಿ.!
ದೀರ್ಘಕಾಲ ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ಸ್ಥೂಲಕಾಯ , ಮಧುಮೇಹ , ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಇತರ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು.
ಆಧುನಿಕ ಜಗತ್ತಿನಲ್ಲಿ ನಮ್ಮ ಜೀವನಶೈಲಿ ಸಂಪೂರ್ಣ ಬದಲಾಗಿದೆ. ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದು, ಮೊಬೈಲ್ ನೋಡುತ್ತಾ ಕಾಲ ಕಳೆಯುವುದು ಸಾಮಾನ್ಯವಾಗಿದೆ. ಆದರೆ, ಇಂತಹ ದೀರ್ಘಕಾಲದ ಜಡ ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ಎಂತಹ ಗಂಭೀರ ಪರಿಣಾಮ ಬೀರುತ್ತಿದೆ ಎಂಬುದನ್ನು ವೈಜ್ಞಾನಿಕ ಅಧ್ಯಯನಗಳು ಪದೇ ಪದೇ ಎಚ್ಚರಿಸುತ್ತಿವೆ. ಇತ್ತೀಚೆಗೆ ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಪ್ರಕಟವಾದ ಒಂದು ಹೊಸ ಅಧ್ಯಯನವು ಇದಕ್ಕೆ ಪರಿಣಾಮಕಾರಿ ಮತ್ತು ಸರಳವಾದ ಪರಿಹಾರವನ್ನು ಸೂಚಿಸಿದೆ.
ಕೊಲಂಬಿಯಾ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳ ಸಂಶೋಧಕರು ನಡೆಸಿದ ಈ ಅಧ್ಯಯನವು, ಪ್ರತಿ ಒಂದು ಗಂಟೆಗೊಮ್ಮೆ ಕೇವಲ ಐದು ನಿಮಿಷಗಳ ನಡಿಗೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ನಡುವಿನ ಅತ್ಯುತ್ತಮ ಸಮತೋಲನವನ್ನು ಕಾಪಾಡುತ್ತದೆ ಎಂದು ಸಾಬೀತುಪಡಿಸಿದೆ.
ಜಡ ಜೀವನಶೈಲಿಯ ಅಪಾಯಗಳು
ದೀರ್ಘಕಾಲ ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ಸ್ಥೂಲಕಾಯ , ಮಧುಮೇಹ , ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಇತರ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು. ಇಷ್ಟೇ ಅಲ್ಲದೆ, ಇದು ಅಕಾಲಿಕ ಮರಣಕ್ಕೂ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಈಗಾಗಲೇ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ, ಕೆಲಸದ ನಡುವೆ ಸಣ್ಣ ವಿರಾಮದ ಚಲನವಲನಗಳನ್ನು ಮಾಡುವುದು ಹೇಗೆ ಪರಿಣಾಮಕಾರಿ ಎಂಬುದನ್ನು ಈ ಸಂಶೋಧನೆ ಪರೀಕ್ಷಿಸಿದೆ. ಸುಮಾರು 19,300ಕ್ಕೂ ಹೆಚ್ಚು ವಯಸ್ಕರ ಮೇಲೆ ಈ ಅಧ್ಯಯನವನ್ನು ನಡೆಸಲಾಗಿದೆ. ಅಮೆರಿಕದ ನ್ಯಾಷನಲ್ ಪಬ್ಲಿಕ್ ರೇಡಿಯೋ ಆಯೋಜಿಸಿದ್ದ 'ಬಾಡಿ ಎಲೆಕ್ಟ್ರಿಕ್ ಚಾಲೆಂಜ್' ಭಾಗವಾಗಿ ಈ ಮಾಹಿತಿ ಸಂಗ್ರಹಿಸಲಾಗಿದೆ. ಭಾಗವಹಿಸಿದವರು ವಿವಿಧ ವಯಸ್ಸಿನವರು, ವಿವಿಧ ವೃತ್ತಿಗಳವರು ಮತ್ತು ಬೇರೆ ಬೇರೆ ಕೆಲಸದ ಪರಿಸರದಲ್ಲಿ ಕೆಲಸ ಮಾಡುವವರಾಗಿದ್ದರು.
ಅಧ್ಯಯನದ ಪ್ರಯೋಗವು ಮೊದಲ 7 ದಿನಗಳು ಭಾಗವಹಿಸುವವರು ತಮ್ಮ ಎಂದಿನ ದಿನಚರಿಯನ್ನು ಪಾಲಿಸಿದರು. ಮುಂದಿನ 14 ದಿನಗಳ ಕಾಲ, ಅವರು ದಿನಕ್ಕೆ ಪ್ರತಿ 30, 60 ಅಥವಾ 120 ನಿಮಿಷಕ್ಕೊಮ್ಮೆ 5 ನಿಮಿಷಗಳ ನಡಿಗೆಯನ್ನು ಕೈಗೊಂಡರು. ದೈನಂದಿನ ಇಮೇಲ್ ಸಮೀಕ್ಷೆಗಳ ಮೂಲಕ ಅವರ ಆಯಾಸದ ಮಟ್ಟ, ಮನಸ್ಥಿತಿ ಮತ್ತು ಕೆಲಸದ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲಾಯಿತು.
ಏಕೆ 60 ನಿಮಿಷದ ನಡಿಗೆ ಅತ್ಯುತ್ತಮ?
ಸಂಶೋಧನೆಯ ಪ್ರಕಾರ, ಮೂರೂ ವಿಧದ ವಿರಾಮಗಳು (30, 60 ಮತ್ತು 120 ನಿಮಿಷಗಳು) ಆರೋಗ್ಯಕ್ಕೆ ಉತ್ತಮವಾಗಿದ್ದರೂ, ಪ್ರತಿ ಗಂಟೆಗೊಮ್ಮೆ (60 ನಿಮಿಷಕ್ಕೊಮ್ಮೆ) ತೆಗೆದುಕೊಳ್ಳುವ ವಿರಾಮವು ಅತ್ಯಂತ ಸಮರ್ಥನೀಯ ಮತ್ತು ಪರಿಣಾಮಕಾರಿ ಎಂದು ಕಂಡುಬಂದಿದೆ. 30 ನಿಮಿಷದ ನಡಿಗೆಯು ಆಯಾಸ ಮತ್ತು ಮನಸ್ಥಿತಿಯನ್ನು ಸುಧಾರಿಸುವಲ್ಲಿ ಅತ್ಯಂತ ಪರಿಣಾಮಕಾರಿ ಆಗಿದ್ದರೂ, ಕೆಲಸದ ನಡುವೆ ಪದೇ ಪದೇ ಎದ್ದು ಹೋಗುವುದು ಪ್ರಾಯೋಗಿಕವಾಗಿ ಎಲ್ಲರಿಗೂ ಸುಲಭವಾಗಿರಲಿಲ್ಲ. 120 ನಿಮಿಷದ ನಡಿಗೆಯು ತುಂಬಾ ಸುಲಭವಾಗಿ ಪಾಲಿಸಬಹುದಾದ ಕ್ರಮವಾಗಿತ್ತು, ಆದರೆ ಆರೋಗ್ಯದ ಮೇಲೆ ಪರಿಣಾಮ ಬೀರುವ ದೃಷ್ಟಿಯಿಂದ ಇದು ಕಡಿಮೆ ಪರಿಣಾಮಕಾರಿಯಾಗಿತ್ತು. 60 ನಿಮಿಷದ ನಡಿಗೆ ಎರಡರ ನಡುವಿನ ಸುವರ್ಣ ಮಧ್ಯಮ ಮಾರ್ಗವಾಗಿದೆ. ಕೆಲಸದ ಒತ್ತಡಕ್ಕೆ ತೊಂದರೆಯಾಗದಂತೆ, ಅದೇ ಸಮಯದಲ್ಲಿ ಆರೋಗ್ಯಕ್ಕೆ ಗರಿಷ್ಠ ಲಾಭ ನೀಡುವ ಈ ಕ್ರಮವನ್ನು ಬಹುತೇಕ ಭಾಗವಹಿಸುವವರು ಆಯ್ಕೆ ಮಾಡಿಕೊಂಡರು.
ಕೆಲಸದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಇಲ್ಲ
ಅನೇಕ ಉದ್ಯೋಗಿಗಳು, ನಡುವೆ ವಿರಾಮ ತೆಗೆದುಕೊಂಡರೆ ಕೆಲಸದ ಉತ್ಪಾದಕತೆ ಕಡಿಮೆಯಾಗುತ್ತದೆಯೇ? ಎಂದು ಭಯಪಡುತ್ತಾರೆ. ಆದರೆ ಈ ಅಧ್ಯಯನವು ಅಂತಹ ಯಾವುದೇ ಋಣಾತ್ಮಕ ಪರಿಣಾಮ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಬದಲಿಗೆ, ಈ ಚಿಕ್ಕ ವಿರಾಮಗಳು ಮನಸ್ಥಿತಿಯನ್ನು ಹಸನಾಗಿಸಿ, ಆಯಾಸವನ್ನು ಕಡಿಮೆ ಮಾಡಿ, ದೀರ್ಘಕಾಲ ಕೆಲಸ ಮಾಡಲು ಸ್ಫೂರ್ತಿ ನೀಡುತ್ತವೆ ಎಂದು ಕಂಡುಬಂದಿದೆ. ಸಂಶೋಧಕರ ಪ್ರಕಾರ, ಈ ಐದು ನಿಮಿಷದ ವಿರಾಮಗಳನ್ನು ಸಾರ್ವಜನಿಕ ಆರೋಗ್ಯ ಕಾರ್ಯತಂತ್ರಗಳು ಮತ್ತು ದೈಹಿಕ ಚಟುವಟಿಕೆಯ ಮಾರ್ಗಸೂಚಿಗಳಲ್ಲಿ ಸೇರಿಸಿಕೊಳ್ಳಬೇಕು. ಕಚೇರಿಗಳಲ್ಲಿ ಕೆಲಸ ಮಾಡುವವರು, ಶಿಕ್ಷಣ ಸಂಸ್ಥೆಗಳಲ್ಲಿ ಪಾಠ ಕೇಳುವವರು ಮತ್ತು ದೀರ್ಘಕಾಲ ಕುಳಿತು ಕೆಲಸ ಮಾಡುವ ಪ್ರತಿಯೊಬ್ಬರೂ ಈ ಸರಳ ಕ್ರಮವನ್ನು ಅಳವಡಿಸಿಕೊಳ್ಳಬಹುದು.

