
ಮಾಜಿ ಸೇನಾ ಮುಖ್ಯಸ್ಥ ನರವಣೆ ರಚಿತ ಅಪ್ರಕಟಿತ ಪುಸ್ತಕ ಸೋರಿಕೆ: ಎಫ್‌ಐಆರ್ ದಾಖಲು
ಈ ಪುಸ್ತಕವು ಇನ್ನೂ ರಕ್ಷಣಾ ಸಚಿವಾಲಯದಿಂದ ಕಡ್ಡಾಯ ಅನುಮತಿ ಪಡೆದಿಲ್ಲ. ಆದರೂ ಇದರ ಪ್ರಿ-ಪ್ರಿಂಟ್ (ಮುದ್ರಣ ಪೂರ್ವ) ಪ್ರತಿಯು ಅನಧಿಕೃತವಾಗಿ ಆನ್‌ಲೈನ್‌ನಲ್ಲಿ ಹಂಚಿಕೆಯಾಗುತ್ತಿದೆ
ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಇನ್ನೂ ಪ್ರಕಟವಾಗದ "ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ" (Four Stars of Destiny) ಆತ್ಮಚರಿತ್ರೆಯ ಪ್ರತಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಸೋಮವಾರ (ಫೆ. 9) ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಈ ಪುಸ್ತಕವು ಇನ್ನೂ ರಕ್ಷಣಾ ಸಚಿವಾಲಯದಿಂದ ಕಡ್ಡಾಯ ಅನುಮತಿ ಪಡೆದಿಲ್ಲ. ಆದರೂ ಇದರ ಪ್ರಿ-ಪ್ರಿಂಟ್ (ಮುದ್ರಣ ಪೂರ್ವ) ಪ್ರತಿಯು ಅನಧಿಕೃತವಾಗಿ ಆನ್‌ಲೈನ್‌ನಲ್ಲಿ ಹಂಚಿಕೆಯಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಪೊಲೀಸ್ ಹೇಳಿಕೆ ಏನು?
ದೆಹಲಿ ಪೊಲೀಸರು ಹೊರಡಿಸಿರುವ ಹೇಳಿಕೆಯ ಪ್ರಕಾರ, "ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ಎಂಬ ಶೀರ್ಷಿಕೆಯ ಪುಸ್ತಕದ ಪ್ರಿ-ಪ್ರಿಂಟ್ ಪ್ರತಿಯನ್ನು ಅನುಮತಿಯಿಲ್ಲದೆ ಹಂಚಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಆನ್‌ಲೈನ್ ವೇದಿಕೆಗಳಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ನಾವು ಗಮನಿಸಿದ್ದೇವೆ. ಪರಿಶೀಲನೆಯ ನಂತರ, ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಿದ್ಧಪಡಿಸಿದ ಪಿಡಿಎಫ್ ಪ್ರತಿಯೊಂದು ಕೆಲವು ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವುದು ಕಂಡುಬಂದಿದೆ. ಅಲ್ಲದೆ, ಕೆಲವು ಆನ್‌ಲೈನ್ ಮಾರ್ಕೆಟಿಂಗ್ ಪ್ಲಾಟ್‌ಫಾರ್ಮ್‌ಗಳು ಪುಸ್ತಕ ಮಾರಾಟಕ್ಕಿದೆ ಎಂಬಂತೆ ಮುಖಪುಟವನ್ನು ಪ್ರದರ್ಶಿಸುತ್ತಿವೆ," ಎಂದು ತಿಳಿಸಲಾಗಿದೆ.
ಈ ಸೋರಿಕೆ ಅಥವಾ ನಿಯಮ ಉಲ್ಲಂಘನೆಯ ಹಿಂದಿನ ಸತ್ಯಾಸತ್ಯತೆಯನ್ನು ಪತ್ತೆಹಚ್ಚಲು ದೆಹಲಿ ಪೊಲೀಸರ ವಿಶೇಷ ದಳ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.
ರಾಹುಲ್ ಗಾಂಧಿ ಕೈಗೆ ಪುಸ್ತಕ ಸಿಕ್ಕಿದ್ದು ಹೇಗೆ?
ಕಳೆದ ವಾರ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಪುಸ್ತಕದ ಪ್ರತಿಯನ್ನು ಪ್ರದರ್ಶಿಸಿದ ನಂತರ ಈ ವಿವಾದ ಭುಗಿಲೆದ್ದಿದೆ. ಬಜೆಟ್ ಅಧಿವೇಶನದ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ, ರಾಹುಲ್ ಗಾಂಧಿ ಅವರು ಈ ಅಪ್ರಕಟಿತ ಪುಸ್ತಕದ ಕೆಲವು ಭಾಗಗಳನ್ನು ಉಲ್ಲೇಖಿಸಲು ಪ್ರಯತ್ನಿಸಿದ್ದರು. ರಕ್ಷಣಾ ಸಚಿವಾಲಯದ ಅನುಮತಿಗಾಗಿ ಕಾಯುತ್ತಿರುವ ಈ ಪುಸ್ತಕ ರಾಹುಲ್ ಗಾಂಧಿ ಅವರ ಕೈಗೆ ಹೇಗೆ ತಲುಪಿತು ಎಂಬ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ.
ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್ ತಾಣಗಳಲ್ಲಿ ಈ ಪುಸ್ತಕದ ಲಿಂಕ್‌ಗಳು ಕಂಡುಬಂದಿದ್ದರೂ, ಕ್ಲಿಕ್ ಮಾಡಿದಾಗ ಪುಟಗಳು ಲಭ್ಯವಿಲ್ಲ ಎಂಬ ಸಂದೇಶ ಬರುತ್ತಿದೆ ಎಂದು ವರದಿಗಳು ತಿಳಿಸಿವೆ.

