Farooq Abdullah| ಫಾರೂಕ್ ಅಬ್ದುಲ್ಲಾ ಹತ್ಯೆ ಯತ್ನ; ಕೂದಲೆಳೆ ಅಂತರದಲ್ಲಿ ಪಾರಾದ ಮಾಜಿ ಸಿಎಂ- ವಿಡಿಯೊ ವೈರಲ್‌
x
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮೇಲೆ ದಾಳಿಗೆ ಯತ್ನ

Farooq Abdullah| ಫಾರೂಕ್ ಅಬ್ದುಲ್ಲಾ ಹತ್ಯೆ ಯತ್ನ; ಕೂದಲೆಳೆ ಅಂತರದಲ್ಲಿ ಪಾರಾದ ಮಾಜಿ ಸಿಎಂ- ವಿಡಿಯೊ ವೈರಲ್‌

ಜಮ್ಮುವಿನ ವಿವಾಹ ಸಮಾರಂಭವೊಂದರಲ್ಲಿ ಜಮ್ಮು-ಕಾಶ್ಮೀರ ನಾಯಕ ಫಾರೂಕ್ ಅಬ್ದುಲ್ಲಾ ಅವರ ಮೇಲೆ ಭೀಕರ ಹತ್ಯೆ ಯತ್ನ ನಡೆದಿದೆ. ಎನ್‌ಎಸ್‌ಜಿ ಕಮಾಂಡೋಗಳ ಸಮಯಪ್ರಜ್ಞೆಯಿಂದ ಅಬ್ದುಲ್ಲಾ ಅಪಾಯದಿಂದ ಪಾರಾಗಿದ್ದಾರೆ.


Click the Play button to hear this message in audio format

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಬುಧವಾರ ಸಂಜೆ ಜಮ್ಮುವಿನಲ್ಲಿ ನಡೆದ ಭೀಕರ ಹತ್ಯೆ ಯತ್ನದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಗುಂಡು ಹಾರಿಸಿದ್ದು, ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.

ನಡೆದಿದ್ದೇನು?

ಜಮ್ಮುವಿನ ಗ್ರೇಟರ್ ಕೈಲಾಶ್‌ನಲ್ಲಿರುವ 'ರಾಯಲ್ ಪಾರ್ಕ್'ನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ಫಾರೂಕ್ ಅಬ್ದುಲ್ಲಾ ಅವರು ಭಾಗವಹಿಸಿದ್ದರು. ಈ ವೇಳೆ ಅವರ ಹಿಂದೆಯೇ ನಡೆದು ಬಂದ ದುಷ್ಕರ್ಮಿ, ಅಬ್ದುಲ್ಲಾ ಅವರ ಭುಜದ ನೇರಕ್ಕೆ ಪಿಸ್ತೂಲ್ ಹಿಡಿದು ಗುಂಡು ಹಾರಿಸಲು ಯತ್ನಿಸಿದ. ತಕ್ಷಣವೇ ಕಾರ್ಯಪ್ರವೃತ್ತರಾದ ಎನ್‌ಎಸ್‌ಜಿ (NSG) ಕಮಾಂಡೋಗಳು ಹಂತಕನನ್ನು ಪಕ್ಕಕ್ಕೆ ತಳ್ಳಿದ್ದಾರೆ. ಇದರಿಂದಾಗಿ ಗುಂಡು ಗುರಿ ತಪ್ಪಿದ್ದು, 88 ವರ್ಷದ ಅಬ್ದುಲ್ಲಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಇಡೀ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.

ಹಂತಕನ ಬಂಧನ ಮತ್ತು ಆಘಾತಕಾರಿ ಹೇಳಿಕೆ

ದಾಳಿ ನಡೆಸಿದ ವ್ಯಕ್ತಿಯನ್ನು ಜಮ್ಮುವಿನ ಪುರಾನಿ ಮಂಡಿ ನಿವಾಸಿ ಕಮಲ್ ಸಿಂಗ್ ಜಮ್ವಾಲ್ (65) ಎಂದು ಗುರುತಿಸಲಾಗಿದೆ. ದಾಳಿಯ ಬೆನ್ನಲ್ಲೇ ಅಲ್ಲಿದ್ದ ಸಾರ್ವಜನಿಕರು ಹಂತಕನಿಗೆ ಧರ್ಮದೇಟು ನೀಡಿದ್ದು, ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಹಂತಕ ಯಾವುದೇ ಪಶ್ಚಾತ್ತಾಪವಿಲ್ಲದೆ, "ಕಳೆದ 20 ವರ್ಷಗಳಿಂದ ನಾನು ಈ ಕ್ಷಣಕ್ಕಾಗಿ ಕಾಯುತ್ತಿದ್ದೆ" ಎಂದು ಹೇಳಿರುವುದು ಪೊಲೀಸರನ್ನು ಬೆಚ್ಚಿಬೀಳಿಸಿದೆ.

ಘಟನೆ ವಿಡಿಯೊ ಇಲ್ಲಿದೆ

ಭದ್ರತಾ ಲೋಪದ ಬಗ್ಗೆ ಓಮರ್ ಅಬ್ದುಲ್ಲಾ ಪ್ರಶ್ನೆ

ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣ 'X' ನಲ್ಲಿ ಆತಂಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, "ದೇವರು ದೊಡ್ಡವನು, ನನ್ನ ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, Z+ ಕೆಟಗರಿ ಹಾಗೂ ಎನ್‌ಎಸ್‌ಜಿ ಭದ್ರತೆ ಹೊಂದಿರುವ ವ್ಯಕ್ತಿಯ ಹತ್ತಿರ ಪಿಸ್ತೂಲ್ ಹಿಡಿದು ಇಷ್ಟು ಹತ್ತಿರ ಬರಲು ಹಂತಕನಿಗೆ ಹೇಗೆ ಸಾಧ್ಯವಾಯಿತು? ಇದು ಗಂಭೀರ ಭದ್ರತಾ ಲೋಪದ ಪ್ರಶ್ನೆಗಳನ್ನು ಎತ್ತುತ್ತಿದೆ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಟನೆಯ ವೇಳೆ ಅಬ್ದುಲ್ಲಾ ಅವರೊಂದಿಗೆ ಉಪಮುಖ್ಯಮಂತ್ರಿ ಸುರಿಂದರ್ ಚೌಧರಿ ಮತ್ತು ಮುಖ್ಯಮಂತ್ರಿಯವರ ಸಲಹೆಗಾರ ನಾಸಿರ್ ಸೊಗಾಮಿ ಕೂಡ ಇದ್ದರು. "ದೇವರ ದಯೆಯಿಂದ ಯಾರಿಗೂ ಗಾಯಗಳಾಗಿಲ್ಲ. ಹಂತಕನ ಉದ್ದೇಶವೇನು ಎಂಬುದು ಇನ್ನೂ ತಿಳಿದುಬಂದಿಲ್ಲ, ತನಿಖೆಯಿಂದ ಸತ್ಯ ಹೊರಬರಬೇಕಿದೆ," ಎಂದು ಸೊಗಾಮಿ ತಿಳಿಸಿದ್ದಾರೆ.

ಪ್ರಸ್ತುತ ಫಾರೂಕ್ ಅಬ್ದುಲ್ಲಾ ಅವರು ಸುರಕ್ಷಿತವಾಗಿದ್ದು, ಜಮ್ಮು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಹಂತಕನ ಹಿನ್ನೆಲೆ ಮತ್ತು ಈ ಸಂಚಿನ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

20 ವರ್ಷಗಳಿಂದ ಆತನ ಕೊಲೆಗೆ ಕಾಯುತ್ತಿದ್ದೆ ಎಂದ ಹಂತಕ

ನ್ಯಾಷನಲ್ ಕಾನ್ಫರೆನ್ಸ್ (NC) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿ, 63 ವರ್ಷದ ಜಮ್ಮು ನಿವಾಸಿ ಕಮಲ್ ಸಿಂಗ್ ಜಮ್ವಾಲ್, ತಾನು ಕಳೆದ 20 ವರ್ಷಗಳಿಂದ ಫಾರೂಕ್ ಅಬ್ದುಲ್ಲಾ ಅವರನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ತನ್ನದೇ ಪಿಸ್ತೂಲ್‌ ಬಳಸಿ ದಾಳಿ

ವಿಚಾರಣೆ ವೇಳೆ ಆರೋಪಿ ಕಮಲ್ ಸಿಂಗ್, ದಾಳಿಗೆ ಬಳಸಿದ ಆಯುಧ ತನ್ನದೇ ಎಂದು ಒಪ್ಪಿಕೊಂಡಿದ್ದಾನೆ. "ಫಾರೂಕ್ ಅಬ್ದುಲ್ಲಾ ಅವರನ್ನು ಕೊಲ್ಲುವುದು ನನ್ನ ವೈಯಕ್ತಿಕ ಅಜೆಂಡಾ ಆಗಿತ್ತು. ನಾನು ಕಳೆದ 20 ವರ್ಷಗಳಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದೆ. ದಾಳಿಗೆ ಬಳಸಿದ ಪಿಸ್ತೂಲು ನನಗೆ ಮಂಜೂರಾದ ಅಧಿಕೃತ ಪರವಾನಗಿ (Licenced Gun) ಹೊಂದಿರುವ ಆಯುಧವಾಗಿದೆ," ಎಂದು ಆತ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈ ಘಟನೆಯಲ್ಲಿ ಯಾವುದೇ ಭಯೋತ್ಪಾದನಾ ಆಯಾಮ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮದ್ಯದ ಅಮಲಿನಲ್ಲಿದ್ದ ಆರೋಪಿ

ಘಟನೆಯ ಸಮಯದಲ್ಲಿ ಆರೋಪಿ ಕಮಲ್ ಸಿಂಗ್ ಸಂಪೂರ್ಣವಾಗಿ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಿವಾಹ ಸಮಾರಂಭದ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಹಂತಕನು ಅಬ್ದುಲ್ಲಾ ಅವರ ಹಿಂದೆ ಅತ್ಯಂತ ಹತ್ತಿರಕ್ಕೆ ಬಂದು ಗುಂಡು ಹಾರಿಸುವುದು ಕಂಡುಬಂದಿದೆ. ಆದರೆ ಗುಂಡು ಗುರಿ ತಪ್ಪಿದ ತಕ್ಷಣವೇ ಎನ್‌ಎಸ್‌ಜಿ ಕಮಾಂಡೋಗಳು ಆತನನ್ನು ಹಿಡಿತಕ್ಕೆ ಪಡೆದಿದ್ದಾರೆ. ಈ ವೇಳೆ ಅಲ್ಲಿದ್ದ ಜನರು ಮತ್ತು ಎನ್‌ಸಿ ಕಾರ್ಯಕರ್ತರು ಆರೋಪಿಗೆ ತೀವ್ರವಾಗಿ ಥಳಿಸಿದ್ದಾರೆ.

ಹಂತಕನ ಹಿನ್ನೆಲೆ

ಆರೋಪಿ ಕಮಲ್ ಸಿಂಗ್ ಜಮ್ಮುವಿನ ಹಳೆಯ ನಗರ ಪ್ರದೇಶದಲ್ಲಿ ಕೆಲವು ಮಳಿಗೆಗಳನ್ನು ಹೊಂದಿದ್ದಾನೆ. ಈ ಮಳಿಗೆಗಳಿಂದ ಬರುವ ಬಾಡಿಗೆಯೇ ಆತನ ಜೀವನಕ್ಕೆ ಆಧಾರವಾಗಿದೆ. "ಇಂದು ನನಗೆ ಅವಕಾಶ ಸಿಕ್ಕಿತು, ಆದರೆ ಫಾರೂಕ್ ಅಬ್ದುಲ್ಲಾ ಅದೃಷ್ಟವಶಾತ್ ಬದುಕುಳಿದರು," ಎಂದು ಆತ ಪೊಲೀಸರ ಮುಂದೆ ಹೇಳಿದ್ದಾನೆ.

Read More
Next Story