ISI and Bangladeshi terrorists linked: 8 suspects arrested for plotting major terror attack
x

ಸಾಂದರ್ಭಿಕ ಚಿತ್ರ

ಐಎಸ್‌ಐ ಮತ್ತು ಬಾಂಗ್ಲಾ ಉಗ್ರರ ನಂಟು: ಭಾರೀ ಉಗ್ರ ದಾಳಿಗೆ ಸಂಚು ರೂಪಿಸಿದ್ದ 8 ಶಂಕಿತರ ಬಂಧನ

ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಕಾರ್ಯಾಚರಣೆ ನಡೆಸಿರುವ ಭದ್ರತಾ ಪಡೆಗಳು, ಆರೋಪಿಗಳಿಂದ ಮೊಬೈಲ್ ಫೋನ್‌ಗಳು ಹಾಗೂ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದು, ಗಡಿಯಾಚೆಗಿನ ಉಗ್ರರ ನಂಟನ್ನು ಭೇದಿಸಿವೆ.


Click the Play button to hear this message in audio format

ಭಾರತದಲ್ಲಿ ಬೃಹತ್ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ ಹಾಗೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಮತ್ತು ಬಾಂಗ್ಲಾದೇಶ ಮೂಲದ ಉಗ್ರಗಾಮಿ ಸಂಘಟನೆಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎಂಟು ಮಂದಿ ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಕಾರ್ಯಾಚರಣೆ ನಡೆಸಿರುವ ಭದ್ರತಾ ಪಡೆಗಳು, ಆರೋಪಿಗಳಿಂದ ಮೊಬೈಲ್ ಫೋನ್‌ಗಳು ಹಾಗೂ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದು, ಗಡಿಯಾಚೆಗಿನ ಉಗ್ರರ ನಂಟನ್ನು ಭೇದಿಸಿವೆ.

ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಕಾರ್ಯಾಚರಣೆ

ಎನ್‌ಡಿಟಿವಿ ವರದಿಯ ಮೂಲಗಳ ಪ್ರಕಾರ, ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಆರು ಮಂದಿ ಶಂಕಿತರನ್ನು ಬಂಧಿಸಲಾಗಿದ್ದು, ಇನ್ನುಳಿದ ಇಬ್ಬರನ್ನು ಪಶ್ಚಿಮ ಬಂಗಾಳದಲ್ಲಿ ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ಮಿಜಾನುರ್ ರಹಮಾನ್, ಮೊಹಮ್ಮದ್ ಶಬತ್, ಉಮರ್, ಮೊಹಮ್ಮದ್ ಲಿಟನ್, ಮೊಹಮ್ಮದ್ ಶಾಹಿದ್ ಮತ್ತು ಮೊಹಮ್ಮದ್ ಉಜ್ಜಲ್ ಎಂದು ಗುರುತಿಸಲಾಗಿದೆ. ಈ ಶಂಕಿತರ ಪೈಕಿ ಓರ್ವ ಬಾಂಗ್ಲಾದೇಶದ ಪ್ರಜೆಯಾಗಿದ್ದು, ಇವರೆಲ್ಲರೂ ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸಿಕೊಂಡು ತಮ್ಮ ಗುರುತು ಮರೆಮಾಚಿದ್ದರು ಎಂಬ ಆಘಾತಕಾರಿ ಅಂಶ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆರೋಪಿಗಳಿಂದ ಎಂಟು ಮೊಬೈಲ್ ಫೋನ್‌ಗಳು ಮತ್ತು 16 ಸಿಮ್ ಕಾರ್ಡ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಗುಪ್ತಚರ ಇಲಾಖೆ ಎಚ್ಚರಿಕೆ

ಉಗ್ರರ ಬಂಧನದ ಬೆನ್ನಲ್ಲೇ ದೇಶದ ರಾಜಧಾನಿ ದೆಹಲಿಯಲ್ಲಿ ಸಂಭವನೀಯ ಭಯೋತ್ಪಾದಕ ದಾಳಿಯ ಕುರಿತು ಗುಪ್ತಚರ ಇಲಾಖೆ ಕಟ್ಟೆಚ್ಚರ ರವಾನಿಸಿದೆ. ಇದರ ಆಧಾರದ ಮೇಲೆ ಶನಿವಾರದಿಂದ ಕೆಂಪು ಕೋಟೆ ಮತ್ತು ಚಾಂದಿನಿ ಚೌಕ್‌ನ ಕೆಲವು ಭಾಗಗಳು ಸೇರಿದಂತೆ ದೆಹಲಿಯ ಪ್ರಮುಖ ಧಾರ್ಮಿಕ ಮತ್ತು ಪಾರಂಪರಿಕ ಸ್ಥಳಗಳ ಸುತ್ತ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‌ಇಟಿ) ಉಗ್ರಗಾಮಿ ಸಂಘಟನೆಯು ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಸುಳಿವು ನೀಡಿವೆ. ವಿಶೇಷವಾಗಿ ಚಾಂದಿನಿ ಚೌಕ್ ಪ್ರದೇಶದಲ್ಲಿರುವ ದೇವಾಲಯವೊಂದು ಉಗ್ರರ ಹಿಟ್‌ಲಿಸ್ಟ್‌ನಲ್ಲಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಐಇಡಿ ಸ್ಫೋಟದ ಶಂಕೆ ಮತ್ತು ಬಿಗಿ ಭದ್ರತೆ

ಕಳೆದ ಫೆಬ್ರವರಿ 6ರಂದು ಪಾಕಿಸ್ತಾನದ ಇಸ್ಲಾಮಾಬಾದ್‌ನ ಮಸೀದಿಯೊಂದರಲ್ಲಿ ನಡೆದ ಸ್ಫೋಟಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಲಷ್ಕರ್-ಎ-ತೈಬಾ ಉಗ್ರರು ಸುಧಾರಿತ ಸ್ಫೋಟಕ ಸಾಧನ (IED) ಬಳಸಿ ದಾಳಿ ನಡೆಸಲು ಯತ್ನಿಸುತ್ತಿರಬಹುದು ಎಂದು ತನಿಖಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿವೆ. ಗುಪ್ತಚರ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸೂಕ್ಷ್ಮ ಧಾರ್ಮಿಕ ಸ್ಥಳಗಳು ಹಾಗೂ ಜನನಿಬಿಡ ಸಾರ್ವಜನಿಕ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಕೇಂದ್ರ ತನಿಖಾ ಸಂಸ್ಥೆಗಳು ಮತ್ತು ದೆಹಲಿ ಪೊಲೀಸರ ಘಟಕಗಳು ನಿಕಟ ಸಮನ್ವಯ ಸಾಧಿಸುತ್ತಿದ್ದು, ಸಿಸಿಟಿವಿ ಕಣ್ಗಾವಲು, ವಾಹನ ತಪಾಸಣೆ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳಗಳು, ಶ್ವಾನ ದಳಗಳು ಮತ್ತು ಕ್ಷಿಪ್ರ ಕಾರ್ಯಪಡೆಗಳನ್ನು (QRT) ಯಾವುದೇ ತುರ್ತು ಪರಿಸ್ಥಿತಿ ನಿಭಾಯಿಸಲು ಸರ್ವಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.

ಹಿಂದಿನ ಕರಾಳ ಘಟನೆ

2025ರ ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ್ದ ಕಾರ್ ಸ್ಫೋಟದಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿ, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ಕರಾಳ ಘಟನೆಯ ಹಿನ್ನೆಲೆಯಲ್ಲಿ ಪ್ರಸ್ತುತ ಗುಪ್ತಚರ ಎಚ್ಚರಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ಎಲ್ಲಾ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಅಥವಾ ಅಪರಿಚಿತ ವಸ್ತುಗಳು ಕಂಡುಬಂದಲ್ಲಿ ತಕ್ಷಣವೇ ಮಾಹಿತಿ ನೀಡುವಂತೆ ಅಧಿಕಾರಿಗಳು ನಿವಾಸಿಗಳಿಗೆ ಮನವಿ ಮಾಡಿದ್ದಾರೆ.

Read More
Next Story