
ಚುನಾವಣಾ ಆಯೋಗದ ಕೇಂದ್ರ ಕಚೇರಿಯಿಂದ ಭಾನುವಾರ ಈ ಅಧಿಕೃತ ಆದೇಶ ಹೊರಬಿದ್ದಿದ್ದು, ಚುನಾವಣಾ ಅಕ್ರಮಗಳನ್ನು ತಡೆಯಲು ಆಯೋಗವು ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ.
ಪಶ್ಚಿಮ ಬಂಗಾಳ ಚುನಾವಣೆ: ಮುಕ್ತ ಮತದಾನಕ್ಕಾಗಿ 173 ಪೊಲೀಸ್ ಠಾಣೆಗಳ ಅಧಿಕಾರಿಗಳ ಎತ್ತಂಗಡಿ
ಕೂಚ್ ಬೆಹಾರ್, ಮಾಲ್ಡಾ, ಮುರ್ಷಿದಾಬಾದ್, ಬೀರ್‌ಭೂಮ್, ಪಶ್ಚಿಮ ಮೇದಿನಿಪುರ, ಹೌರಾ ಹಾಗೂ ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳ ವ್ಯಾಪ್ತಿಯಲ್ಲೂ ಹಲವು ಇನ್ಸ್‌ಪೆಕ್ಟರ್ ಹಾಗೂ ಸಬ್-ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು ಸಂಪೂರ್ಣ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗವು ಮಹತ್ವದ ಹೆಜ್ಜೆ ಇಟ್ಟಿದ್ದು, ರಾಜ್ಯದಾದ್ಯಂತ 173 ಪೊಲೀಸ್ ಠಾಣೆಗಳ ಮುಖ್ಯಸ್ಥರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಈ ಬೃಹತ್ ವರ್ಗಾವಣೆ ಪ್ರಕ್ರಿಯೆಯಲ್ಲಿ ಕೋಲ್ಕತ್ತಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 31 ಅಧಿಕಾರಿಗಳು ಕೂಡ ಸೇರಿದ್ದಾರೆ. ನವದೆಹಲಿಯಲ್ಲಿರುವ ಚುನಾವಣಾ ಆಯೋಗದ ಕೇಂದ್ರ ಕಚೇರಿಯಿಂದ ಭಾನುವಾರ ಈ ಅಧಿಕೃತ ಆದೇಶ ಹೊರಬಿದ್ದಿದ್ದು, ಚುನಾವಣಾ ಅಕ್ರಮಗಳನ್ನು ತಡೆಯಲು ಆಯೋಗವು ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ.
ಪ್ರಮುಖ ಠಾಣೆಗಳ ಅಧಿಕಾರಿಗಳ ಬದಲು
ರಾಜ್ಯದ ಹೈವೋಲ್ಟೇಜ್ ಕಣವಾಗಿರುವ ಕೋಲ್ಕತ್ತಾದ ಭವಾನಿಪುರ ಹಾಗೂ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ಸೇರಿದಂತೆ ಹಲವು ಪ್ರಮುಖ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಲಾಗಿದೆ. ವಿಶೇಷ ಕಾರ್ಯಪಡೆಯಲ್ಲಿದ್ದ (ಎಸ್ಟಿಎಫ್) ಸೌಮಿತ್ರ ಬಸು ಅವರನ್ನು ಭವಾನಿಪುರ ಪೊಲೀಸ್ ಠಾಣೆಯ ನೂತನ ಅಧಿಕಾರಿಯಾಗಿ (ಐಸಿ) ನೇಮಿಸಲಾಗಿದೆ. ಈ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಹಳೆಯ ಆಪ್ತ ಹಾಗೂ ಹಾಲಿ ಪ್ರತಿಸ್ಪರ್ಧಿ ಸುವೇಂದು ಅಧಿಕಾರಿ ಅವರನ್ನು ಎದುರಿಸಲಿದ್ದು, ಈ ಕಣವು ರಾಷ್ಟ್ರಮಟ್ಟದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಇದರ ಜೊತೆಗೆ ಅಲಿಪೋರ್, ಎಕ್ಬಾಲ್‌ಪೋರ್, ಹರಿದೇವ್‌ಪುರ್, ಎಂಟಾಲಿ, ನ್ಯೂ ಮಾರ್ಕೆಟ್ ಸೇರಿದಂತೆ ಕೋಲ್ಕತ್ತಾದ ಪ್ರಮುಖ ಠಾಣೆಗಳ ಅಧಿಕಾರಿಗಳನ್ನು ಸಹ ಎತ್ತಂಗಡಿ ಮಾಡಲಾಗಿದೆ.
ಆಯೋಗದ ಬೃಹತ್ ಕಾರ್ಯಾಚರಣೆ
ಕೂಚ್ ಬೆಹಾರ್, ಮಾಲ್ಡಾ, ಮುರ್ಷಿದಾಬಾದ್, ಬೀರ್‌ಭೂಮ್, ಪಶ್ಚಿಮ ಮೇದಿನಿಪುರ, ಹೌರಾ ಹಾಗೂ ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳ ವ್ಯಾಪ್ತಿಯಲ್ಲೂ ಹಲವು ಇನ್ಸ್‌ಪೆಕ್ಟರ್ ಹಾಗೂ ಸಬ್-ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ದೇವದುಲಾಲ್ ಮಂಡಲ್ ಅವರನ್ನು ಹಲ್ದಿಯಾಕ್ಕೆ, ಕಾಜಲ್ ದತ್ತಾ ಅವರನ್ನು ಕೋಲಾಘಾಟ್‌ಗೆ ಹಾಗೂ ಸುಶಾಂತ ಚಟ್ಟೋಪಾಧ್ಯಾಯ ಅವರನ್ನು ಎಗ್ರಾಕ್ಕೆ ನಿಯೋಜಿಸಲಾಗಿದೆ. ಚುನಾವಣಾ ಸಮಯದಲ್ಲಿ ಸ್ಥಳೀಯ ರಾಜಕೀಯ ನಾಯಕರ ಪ್ರಭಾವವನ್ನು ತಗ್ಗಿಸಿ, ಕಾನೂನು ಸುವ್ಯವಸ್ಥೆಯಲ್ಲಿ ಸಂಪೂರ್ಣ ತಟಸ್ಥತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದಲೇ ಈ ಬೃಹತ್ ಮಟ್ಟದ ವರ್ಗಾವಣೆ ಮಾಡಲಾಗಿದೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಶೀತಲ ಸಮರ
ಚುನಾವಣಾ ಹೊಸ್ತಿಲಲ್ಲಿ ನಡೆಯುತ್ತಿರುವ ಈ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವಿನ ಶೀತಲ ಸಮರ ಮತ್ತಷ್ಟು ತೀವ್ರಗೊಂಡಿದೆ. ಆಯೋಗದ ಈ ವರ್ಗಾವಣೆಗಳು ರಾಜಕೀಯ ಪ್ರೇರಿತ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಹಿಂದೆಯೂ ಹಲವು ಬಾರಿ ಗಂಭೀರ ಆರೋಪ ಮಾಡಿದ್ದರು. ಒಟ್ಟು 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.

