
Flight Ticket Price| ಏರ್ ಇಂಡಿಯಾ ವಿಮಾನ ಪ್ರಯಾಣಿಕರಿಗೆ ಶಾಕ್: ಟಿಕೆಟ್ ದರದಲ್ಲಿ ಭಾರೀ ಏರಿಕೆ
ಪಶ್ಚಿಮ ಏಷ್ಯಾದ ಯುದ್ಧ ಭೀತಿಯಿಂದಾಗಿ ವಿಮಾನ ಇಂಧನ ಬೆಲೆ ಏರಿಕೆಯಾಗಿದೆ. ಇದು ಟಿಕೆಟ್ ದರದ ಮೇಲೂ ಪರಿಣಾಮ ಬೀರಲಿದೆ. ಯಾವ ಮಾರ್ಗಕ್ಕೆ ಎಷ್ಟು ಏರಿಕೆ? ಇಲ್ಲಿದೆ ಮಾಹಿತಿ.
ಪಶ್ಚಿಮ ಏಷ್ಯಾದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ಮತ್ತು ವಿಮಾನ ಇಂಧನ (ATF) ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಈ ಹೊರೆಯನ್ನು ಸರಿದೂಗಿಸಲು ಏರ್ ಇಂಡಿಯಾ ತನ್ನ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಯಾನದ ಮೇಲೆ ಹಂತ ಹಂತವಾಗಿ ʻಹೆಚ್ಚುವರಿ ಇಂಧನ ಶುಲ್ಕ' ವಿಧಿಸುವುದಾಗಿ ಘೋಷಿಸಿದೆ.
ಮೂರು ಹಂತಗಳಲ್ಲಿ ದರ ಏರಿಕೆ
ಏರ್ ಇಂಡಿಯಾ ತನ್ನ ಮಾರ್ಗಗಳ ಆಧಾರದ ಮೇಲೆ ಮೂರು ಹಂತಗಳಲ್ಲಿ ಈ ಪರಿಷ್ಕೃತ ಶುಲ್ಕವನ್ನು ಜಾರಿಗೆ ತರುತ್ತಿದೆ.
ಹಂತ 1 (ಮಾರ್ಚ್ 12, 2026 ರಿಂದ ಜಾರಿ)
ಏರ್ ಇಂಡಿಯಾ ಸಂಸ್ಥೆಯು ಮಾರ್ಚ್ 12 ರಿಂದ ಜಾರಿಗೆ ಬರುವಂತೆ ಮೊದಲ ಹಂತದ ದರ ಏರಿಕೆಯನ್ನು ಘೋಷಿಸಿದ್ದು, ಇದರ ಅನ್ವಯ ದೇಶೀಯ ಮತ್ತು ಸಾರ್ಕ್ (SAARC) ರಾಷ್ಟ್ರಗಳ ಮಾರ್ಗಗಳಲ್ಲಿ ಪ್ರತಿ ಟಿಕೆಟ್ ಮೇಲೆ 399 ರೂ. ಹೆಚ್ಚುವರಿ ಇಂಧನ ಶುಲ್ಕವನ್ನು ವಿಧಿಸಲಾಗುತ್ತದೆ. ಅಂತರಾಷ್ಟ್ರೀಯ ಮಾರ್ಗಗಳ ಪೈಕಿ ಪಶ್ಚಿಮ ಏಷ್ಯಾಗೆ 10 ಡಾಲರ್ ಹೆಚ್ಚಳವಾಗಲಿದ್ದರೆ, ಆಗ್ನೇಯ ಏಷ್ಯಾ ಮಾರ್ಗಗಳಿಗೆ 20 ಡಾಲರ್ ಏರಿಕೆಯಾಗಿ ಒಟ್ಟು ಶುಲ್ಕ 60 ಡಾಲರ್ ತಲುಪಲಿದೆ. ಅದೇ ರೀತಿ ಆಫ್ರಿಕಾ ಮಾರ್ಗಗಳ ಮೇಲೆ 30 ಡಾಲರ್ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದ್ದು, ಅಲ್ಲಿನ ಒಟ್ಟು ಇಂಧನ ಶುಲ್ಕ 90 ಡಾಲರ್‌ಗೆ ಏರಿಕೆಯಾಗಲಿದೆ.
ಹಂತ 2 (ಮಾರ್ಚ್ 18, 2026 ರಿಂದ ಜಾರಿ)
ಮಾರ್ಚ್ 18 ರಿಂದ ಜಾರಿಗೆ ಬರುವ ಎರಡನೇ ಹಂತದ ಪರಿಷ್ಕರಣೆಯಲ್ಲಿ ಏರ್ ಇಂಡಿಯಾ ಸಂಸ್ಥೆಯು ದೀರ್ಘಾವಧಿಯ ಅಂತರಾಷ್ಟ್ರೀಯ ವಿಮಾನ ಪ್ರಯಾಣದ ದರವನ್ನು ಏರಿಕೆ ಮಾಡಲಿದ್ದು, ಇದರ ಅನ್ವಯ ಯುರೋಪ್ ಮಾರ್ಗಗಳ ಟಿಕೆಟ್ ಮೇಲೆ 25 ಡಾಲರ್ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಇದರಿಂದ ಯುರೋಪ್ ವಿಮಾನಗಳ ಒಟ್ಟು ಇಂಧನ ಶುಲ್ಕ 125 ಡಾಲರ್‌ಗೆ ತಲುಪಲಿದೆ. ಅದೇ ರೀತಿ, ಉತ್ತರ ಅಮೆರಿಕಾ ಮತ್ತು ಆಸ್ಟ್ರೇಲಿಯಾ ಮಾರ್ಗಗಳಿಗೆ ಪ್ರತಿ ಟಿಕೆಟ್‌ಗೆ 50 ಡಾಲರ್ ಹೆಚ್ಚಳವಾಗಲಿದ್ದು, ಈ ಮಾರ್ಗಗಳ ಒಟ್ಟು ಹೆಚ್ಚುವರಿ ಶುಲ್ಕ 200 ಡಾಲರ್‌ಗೆ ಏರಿಕೆಯಾಗಲಿದೆ.
ಹಂತ 3 (ನಂತರ ಘೋಷಣೆ)
ಹಾಂಗ್ ಕಾಂಗ್, ಜಪಾನ್ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ದೂರದ ಪೂರ್ವದ ದೇಶಗಳ ವಿಮಾನ ದರ ಏರಿಕೆಯ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
ಹಳೆಯ ಬುಕಿಂಗ್‌ಗಳಿಗೆ ಅನ್ವಯಿಸುವುದಿಲ್ಲ
ಈ ಹೆಚ್ಚುವರಿ ಶುಲ್ಕವು ಕೇವಲ ಹೊಸ ಬುಕಿಂಗ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಈಗಾಗಲೇ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಯಾವುದೇ ತೊಂದರೆಯಿಲ್ಲ. ಆದರೆ, ಪ್ರಯಾಣದ ದಿನಾಂಕ ಬದಲಾವಣೆ ಮಾಡಿದರೆ ಹೊಸ ದರ ಅನ್ವಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಉದ್ಯಮದ ಮೇಲೆ ಯುದ್ಧದ ಪ್ರಭಾವ
ವಿಮಾನಯಾನ ಸಂಸ್ಥೆಯ ಒಟ್ಟು ನಿರ್ವಹಣಾ ವೆಚ್ಚದಲ್ಲಿ ಶೇ. 40ರಷ್ಟು ವಿಮಾನ ಇಂಧನಕ್ಕೇ ವ್ಯಯವಾಗುತ್ತದೆ. ಮಾರ್ಚ್ ಆರಂಭದಿಂದ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ವಿಮಾನಯಾನ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ.
ಸ್ಪೈಸ್‌ಜೆಟ್ ಅಧ್ಯಕ್ಷ ಅಜಯ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿ, "ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 90 ಡಾಲರ್ ದಾಟಿದರೆ, ಭಾರತೀಯ ವಿಮಾನಯಾನ ಸಂಸ್ಥೆಗಳು ತಮ್ಮ ವಿಸ್ತರಣಾ ಯೋಜನೆಗಳನ್ನು ಮರುಪರಿಶೀಲಿಸಬೇಕಾಗುತ್ತದೆ. ದರ ಏರಿಕೆ ಮಾಡುವುದು ಅನಿವಾರ್ಯವಾಗಬಹುದು," ಎಂದು ಎಚ್ಚರಿಸಿದ್ದಾರೆ. ಇಂಡಿಗೋ ಮತ್ತು ಸ್ಪೈಸ್‌ಜೆಟ್ ಸೇರಿದಂತೆ ಇತರ ಸಂಸ್ಥೆಗಳ ಮೇಲೂ ಇರಾನ್ ಸಂಘರ್ಷದ ಪರಿಣಾಮ ಬೀರುವ ಸಾಧ್ಯತೆಯಿದೆ.

