Digital India turns 11: A revolution that changed the governance system, says PM Modi
x

ಎಐ ಆಧಾರಿತ ಚಿತ್ರ

ಡಿಜಿಟಲ್ ಇಂಡಿಯಾಗೆ 11 ವರ್ಷ: ಆಡಳಿತ ವ್ಯವಸ್ಥೆ ಬದಲಿಸಿದ ಕ್ರಾಂತಿ ಎಂದ ಪ್ರಧಾನಿ ಮೋದಿ

ತಡೆರಹಿತ ಡಿಜಿಟಲ್ ಪಾವತಿಗಳು , ನೇರ ನಗದು ವರ್ಗಾವಣೆ ಹಾಗೂ ಪಾರದರ್ಶಕತೆಯ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದವರೆಗೆ ತಂತ್ರಜ್ಞಾನವು ಅತ್ಯಂತ ಪ್ರಬಲ ಸಾಧನವಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.


Click the Play button to hear this message in audio format

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಡಿಜಿತಲ್ ಇಂಡಿಯಾ' ಉಪಕ್ರಮವು ಬುಧವಾರ ಯಶಸ್ವಿಯಾಗಿ 11 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ದೇಶದ ಜನತೆಗೆ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, "ಡಿಜಿಟಲ್ ಇಂಡಿಯಾ ಅಭಿಯಾನವು ದೇಶದ ಆಡಳಿತ ವ್ಯವಸ್ಥೆಯನ್ನು ಮರು ವ್ಯಾಖ್ಯಾನಿಸಿದೆ. ನಾಗರಿಕರನ್ನು ಸಬಲೀಕರಣಗೊಳಿಸುವ ಮೂಲಕ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಸರ್ವತೋಮುಖ ಅಭಿವೃದ್ಧಿಯನ್ನು ವೇಗಗೊಳಿಸಿದೆ," ಎಂದು ಶ್ಲಾಘಿಸಿದ್ದಾರೆ.

ಹನ್ನೊಂದು ವರ್ಷಗಳ ಈ ಡಿಜಿಟಲ್ ಕ್ರಾಂತಿಯು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹೊಸ ಗುರುತನ್ನು ತಂದುಕೊಟ್ಟಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ 'ಎಕ್ಸ್‌ʼನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, "ಇಂದಿಗೆ ಡಿಜಿಟಲ್ ಇಂಡಿಯಾ ಉಪಕ್ರಮವು ಪ್ರಾರಂಭವಾಗಿ 11 ವರ್ಷಗಳು ಸಂದಿವೆ. ಈ ಯೋಜನೆಯು ಆಡಳಿತದಲ್ಲಿ ಪಾರದರ್ಶಕತೆ ತಂದಿದೆ, ಜನಸಾಮಾನ್ಯರಿಗೆ ಶಕ್ತಿ ತುಂಬಿದೆ ಮತ್ತು ದೇಶದ ಸರ್ವತೋಮುಖ ಪ್ರಗತಿಗೆ ವೇಗ ನೀಡಿದೆ. ಇದು ಪ್ರತಿಯೊಬ್ಬ ನಾಗರಿಕನ ಜೀವನದ ಅಂಗವಾಗಿದೆ," ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.


ಸುಲಭದ ಜೀವನಕ್ಕೆ ತಂತ್ರಜ್ಞಾನವೇ ದಾರಿದೀಪ

ತಡೆರಹಿತ ಡಿಜಿಟಲ್ ಪಾವತಿಗಳು , ನೇರ ನಗದು ವರ್ಗಾವಣೆ ಹಾಗೂ ಪಾರದರ್ಶಕತೆಯ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದವರೆಗೆ ತಂತ್ರಜ್ಞಾನವು ಇಂದು 'ಜೀವನದ ಸುಲಭತೆಯನ್ನು' ಹೆಚ್ಚಿಸುವಲ್ಲಿ ಅತ್ಯಂತ ಪ್ರಬಲ ಸಾಧನವಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

ಹಳ್ಳಿಗಳಿಗೂ ತಲುಪಿದ ನಾವೀನ್ಯತೆಯ ಅಲೆ

"ಡಿಜಿಟಲ್ ಇಂಡಿಯಾ ಕೇವಲ ನಗರಗಳಿಗೆ ಸೀಮಿತವಾಗಿಲ್ಲ. ಇದು ದೇಶದ ಮೂಲೆ ಮೂಲೆಗಳಿಗೆ, ವಿಶೇಷವಾಗಿ ಹಳ್ಳಿಗಳು, ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಿಗೂ ನಾವೀನ್ಯತೆಯ ಅಲೆಯನ್ನು ಕೊಂಡೊಯ್ದಿದೆ. ದೇಶದ ಸಣ್ಣ ಸಣ್ಣ ಪ್ರದೇಶಗಳಿಂದ ಉದಯಿಸುತ್ತಿರುವ ಯುವ ಉದ್ಯಮಿಗಳು, ಸ್ಟಾರ್ಟ್‌ಅಪ್‌ಗಳು ಮತ್ತು ನಾವೀನ್ಯಕಾರರು ಇಂದು ಜಾಗತಿಕ ಸವಾಲುಗಳಿಗೆ ಸ್ಥಳೀಯ ಮಟ್ಟದಲ್ಲೇ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದಾರೆ," ಎಂದು ಪ್ರಧಾನಿ ಹೆಮ್ಮೆಯಿಂದ ಹೇಳಿದ್ದಾರೆ.

ಶಿಕ್ಷಣ, ಆರೋಗ್ಯ ರಕ್ಷಣೆ, ಕೃಷಿ, ವಾಣಿಜ್ಯ ಮತ್ತು ಸಾರ್ವಜನಿಕ ಸೇವಾ ವಿತರಣಾ ವ್ಯವಸ್ಥೆಯನ್ನು ಈ ಉಪಕ್ರಮವು ಬಲಪಡಿಸಿದ್ದು, ಆಡಳಿತವನ್ನು ಹೆಚ್ಚು ಜನಸ್ನೇಹಿ ಮತ್ತು ಪರಿಣಾಮಕಾರಿಯಾಗಿಸಿದೆ ಎಂದು ಅವರು ತಿಳಿಸಿದ್ದಾರೆ.

ಮುಂಚೂಣಿಯಲ್ಲಿ ಉದಯೋನ್ಮುಖ ತಂತ್ರಜ್ಞಾನಗಳು

ಡಿಜಿಟಲ್ ಜಗತ್ತಿನಲ್ಲಿ ಭಾರತ ಇಟ್ಟಿರುವ ದಿಟ್ಟ ಹೆಜ್ಜೆಗಳ ಪರಿಣಾಮವಾಗಿ, ದೇಶವು ಇಂದು ಕೃತಕ ಬುದ್ಧಿಮತ್ತೆ (ಎಐ) ಸೆಮಿಕಂಡಕ್ಟರ್‌ಗಳು, ಕ್ವಾಂಟಮ್ ಕಂಪ್ಯೂಟಿಂಗ್ ಸೇರಿದಂತೆ ಮುಂಚೂಣಿಯ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ತ್ವರಿತ ಪ್ರಗತಿ ಸಾಧಿಸುತ್ತಿದೆ. ಇದು ಭವಿಷ್ಯದಲ್ಲಿ ಬೆಳವಣಿಗೆ ಮತ್ತು ಹೊಸ ಉದ್ಯೋಗಾವಕಾಶಗಳಿಗೆ ಹಾದಿ ಮಾಡಿಕೊಡಲಿದೆ. ಮಾನವೀಯತೆಯ ಸೇವೆ, ಸುಸ್ಥಿರ ಅಭಿವೃದ್ಧಿ ಹಾಗೂ ನಾಗರಿಕರ ಸಬಲೀಕರಣವೇ ನಮ್ಮ ಮುಂದಿನ ಗುರಿಯಾಗಿದೆ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.

ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತಕ್ಕೆ ಡಿಜಿಟಲ್ ಇಂಡಿಯಾವೇ ಬಲವಾದ ಅಡಿಪಾಯ ಎಂದ ಪ್ರಧಾನಿ, ಕಳೆದ 11 ವರ್ಷಗಳಲ್ಲಿ ಇದು ಬಡವರು ಮತ್ತು ವಂಚಿತ ವರ್ಗದವರ ಬದುಕನ್ನು ಸುಗಮಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದರು. ಆಪ್ಟಿಕಲ್ ಫೈಬರ್ ನೆಟ್‌ವರ್ಕ್ ವಿಸ್ತರಣೆ ಹಾಗೂ ಡಿಜಿಟಲ್ ವಹಿವಾಟುಗಳ ಅಭೂತಪೂರ್ವ ಯಶಸ್ಸು ಇಡೀ ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದೆ. 100 ಕೋಟಿಗೂ ಅಧಿಕ ಜನಸಂಖ್ಯೆ ತಂತ್ರಜ್ಞಾನವನ್ನು ಅಳವಡಿಸಿಕೊಂಡಾಗ ಇಂತಹ ಪರಿವರ್ತನೆ ಸಾಧ್ಯ ಎಂದು ಅವರು ಹೇಳಿದ್ದಾರೆ.

ಡಿಜಿಟಲ್ ಕ್ರಾಂತಿಯ ಮೈಲಿಗಲ್ಲುಗಳು

2015 ರ ಮೊದಲು ಸಾರ್ವಜನಿಕ ಸೇವೆಗಳೆಂದರೆ ದೀರ್ಘ ಸರತಿ ಸಾಲು, ಕಾಗದದ ಪತ್ರಗಳ ದಣಿವರಿಯದ ಕೆಲಸವಾಗಿತ್ತು. ಆದರೆ ಡಿಜಿಟಲ್ ಇಂಡಿಯಾ ಇಂಟರ್ನೆಟ್ ಕ್ರಾಂತಿಯ ಮೂಲಕ ಆನ್‌ಲೈನ್ ಸೇವೆಗಳನ್ನು ಒದಗಿಸಿ ಈ ಡಿಜಿಟಲ್ ಅಂತರವನ್ನು ಸಂಪೂರ್ಣವಾಗಿ ಕಡಿಮೆ ಮಾಡಿದೆ. ಅತ್ಯಂತ ಕೈಗೆಟುಕುವ ದರದಲ್ಲಿ ಇಂಟರ್ನೆಟ್ ಮತ್ತು ಡಿಜಿಟಲ್ ಪ್ರವೇಶವನ್ನು ಕಲ್ಪಿಸುವ ಮೂಲಕ ತಂತ್ರಜ್ಞಾನ ಎಲ್ಲರಿಗೂ ಸಿಗುವಂತೆ ಮಾಡಲಾಗಿದೆ. ಕಳೆದ ಒಂದು ದಶಕದಲ್ಲಿ ಈ ಯೋಜನೆ ದೇಶದ ಡಿಜಿಟಲ್ ಆರ್ಥಿಕತೆಯ ಬೆನ್ನೆಲುಬಾಗಿದೆ. ಪ್ರಸ್ತುತ ಜಾಗತಿಕ ನೈಜ-ಸಮಯದ ಡಿಜಿಟಲ್ ಪಾವತಿಗಳಲ್ಲಿ ಭಾರತವೇ ಜಗತ್ತಿಗೆ ನಾಯಕನಾಗಿದ್ದು, ವಿಶ್ವದ ಒಟ್ಟು ವಹಿವಾಟಿನ ಶೇ.49 ರಷ್ಟನ್ನು ನಮ್ಮ ದೇಶದ ಯುಪಿಐ ವ್ಯವಸ್ಥೆಯೊಂದೇ ನಿಭಾಯಿಸುತ್ತಿದೆ.

Read More
Next Story