ಸಿಂಗಪುರದಲ್ಲಿ ಧಾರವಾಡ ಪೇಡಾ, ಕರ್ನಾಟಕದ ಮಾವಿಗೆ ಭರ್ಜರಿ ಬೇಡಿಕೆ!ಮಾರುಕಟ್ಟೆ ವಿಸ್ತರಣೆಗೆ ಪ್ರಲ್ಹಾದ ಜೋಶಿ ಪ್ರೋತ್ಸಾಹ
ಧಾರವಾಡ ಮಿಶ್ರ ಪೇಡಾ ಹಾಗೂ ಕರ್ನಾಟಕದ ಮಾವಿನ ಹಣ್ಣುಗಳು ಸಿಂಗಪುರದಲ್ಲಿ ಜನಪ್ರಿಯವಾಗುತ್ತಿವೆ. ಸ್ಥಳೀಯ ಉದ್ಯಮಿ ಪಿ. ಮಂಜುನಾಥ್ ಪ್ರಯತ್ನಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮೆಚ್ಚುಗೆ ಸೂಚಿಸಿದ್ದಾರೆ.
ಕರ್ನಾಟಕದ ಸಾಂಪ್ರದಾಯಿಕ ಸಿಹಿತಿನಿಸು ಧಾರವಾಡ ಮಿಶ್ರ ಪೇಡಾ ಹಾಗೂ ಉತ್ತರ ಕರ್ನಾಟಕದ ಮಾವಿನ ಹಣ್ಣುಗಳ ರುಚಿ ಇದೀಗ ಸಿಂಗಪುರದಲ್ಲೂ ಜನಪ್ರಿಯವಾಗುತ್ತಿದೆ. ಕರ್ನಾಟಕದ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆ ಒದಗಿಸುವ ಪ್ರಯತ್ನಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೋತ್ಸಾಹ ನೀಡಿದ್ದಾರೆ. ಸಿಂಗಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವ ಪ್ರಲ್ಹಾದ ಜೋಶಿ ಅವರು ಅಲ್ಲಿನ ಕನ್ನಡ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇದೇ ವೇಳೆ ಸಿಂಗಪುರದಲ್ಲಿ 'ಬಾಕ್ಸ್ ಮಾಮಾ' ಸಂಸ್ಥೆ ಸ್ಥಾಪಿಸಿ ಕರ್ನಾಟಕದ ಆಹಾರ ಉತ್ಪನ್ನಗಳನ್ನು ಪರಿಚಯಿಸುತ್ತಿರುವ ಧಾರವಾಡದ ಪಿ. ಮಂಜುನಾಥ್ ಅವರ ಕಾರ್ಯವನ್ನು ಶ್ಲಾಘಿಸಿದರು. ಮಂಜುನಾಥ್ ಅವರು ಕಳೆದ ವರ್ಷ ಸುಮಾರು 10 ಟನ್ ಧಾರವಾಡದ ಮಾವಿನ ಹಣ್ಣುಗಳನ್ನು ಹಾಗೂ 100 ಕೆ.ಜಿ.ಗೂ ಹೆಚ್ಚು ಧಾರವಾಡ ಮಿಶ್ರ ಪೇಡಾವನ್ನು ಸಿಂಗಪುರದಲ್ಲಿ ಮಾರಾಟ ಮಾಡಿದ್ದಾರೆ. ಶಿಗ್ಗಾಂವಿ ಭಾಗದ ಸಾಂಪ್ರದಾಯಿಕ ತಿಂಡಿ-ತಿನಿಸುಗಳನ್ನೂ ಅಲ್ಲಿನ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಕರ್ನಾಟಕದ ಆಹಾರ ಉತ್ಪನ್ನಗಳಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಿಸಲು ಸ್ಥಳೀಯವಾಗಿಯೇ ಗುಣಮಟ್ಟದ ಪ್ಯಾಕೇಜಿಂಗ್ ವ್ಯವಸ್ಥೆ ರೂಪಿಸುವಂತೆ ಸಚಿವರು ಸಲಹೆ ನೀಡಿದ್ದಾರೆ
