Gen Zಗಳ ಆಕ್ರೋಶಕ್ಕೆ ಮೋದಿ ಸರ್ಕಾರದ 'ಮೊದಲ ವಿಕೆಟ್' ಪತನ- ಕೊನೆಗೂ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
NEET 2026 ಅಕ್ರಮ ವಿರೋಧಿಸಿ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಹೋರಾಟಕ್ಕೆ ಕೇಂದ್ರ ಮಣಿದಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಲ್ಲಿಸಿದ್ದು, ತಮ್ಮ 2 ಪುಟಗಳ ಭಾವನಾತ್ಮಕ ಪತ್ರದಲ್ಲಿ ನೀಟ್ ಅಕ್ರಮ, ಮರುಪರೀಕ್ಷೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಉಲ್ಲೇಖಿಸಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ವಿರೋಧಿಸಿ ರಾಷ್ಟ್ರವ್ಯಾಪಿ ಕಾಕ್ರೋಚ್ ಜನತಾ ಪಾರ್ಟಿ ಮತ್ತು ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಕೇಂದ್ರ ಸರ್ಕಾರ ಮಣಿದಿದೆ.
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ರಾಜೀನಾಮೆ ಪತ್ರವನ್ನು ಪೋಸ್ಟ್ ಮಾಡಿರುವ ಅವರು ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವ ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಬೃಹತ್ ಯುವ ಪ್ರತಿಭಟನೆಯನ್ನು ದೇಶವಿರೋಧಿ ಶಕ್ತಿಗಳು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರ ತಳೆದಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರತಿಭಟನಾನಿರತರ ಪ್ರಮುಖ ಬೇಡಿಕೆಯೇ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯಾಗಿತ್ತು. ಕಾಕ್ರೋಚ್ ಜನತಾ ಪಾರ್ಟಿ (CJP) ಮತ್ತು ಕೇಂದ್ರ ಸರ್ಕಾರದ ನಡುವೆ ನಡೆಯಬೇಕಿದ್ದ ಮೂರನೇ ಹಂತದ ಮಾತುಕತೆಗೆ ಕೆಲವೇ ಗಂಟೆಗಳ ಮೊದಲು ಪ್ರಧಾನ್ ಅವರು 'X' (ಟ್ವಿಟರ್) ಖಾತೆಯಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಮೋದಿ ಸರ್ಕಾರದ ಮೊದಲ ವಿಕೆಟ್ ಪತನ
ಇನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 12 ವರ್ಷಗಳು ಕಳೆದಿವೆ.ಇಷ್ಟು ವರ್ಷದಲ್ಲಿ ಇದೇ ಮೊದಲ ಬಾರಿಗೆ ಭ್ರಷ್ಟಾಚಾರದ ಆರೋಪದಲ್ಲಿ ಸಚಿವರೊಬ್ಬರು ರಾಜೀನಾಮೆ ಕೊಡುತ್ತಿರುವುದು. ಇದು ಸರ್ಕಾರಕ್ಕೆ ಭಾರೀ ಮುಜುಗರದ ಸಂಗತಿಯಾಗಿದೆ.
ಪ್ರಧಾನ್ ರಾಜೀನಾಮೆ ಪತ್ರದಲ್ಲೇನಿದೆ?
NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನಡುವೆಯೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಎರಡು ಪುಟಗಳ ರಾಜೀನಾಮೆ ಪತ್ರದಲ್ಲಿ ಅವರು ವಿದ್ಯಾರ್ಥಿಗಳಿಗೆ ಭಾವನಾತ್ಮಕ ಸಂದೇಶ ನೀಡಿದ್ದು, ಕಳೆದ ಕೆಲವು ದಿನಗಳ ಬೆಳವಣಿಗೆಗಳಿಂದ ಮನಸ್ಸಿಗೆ ನೋವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಕೃತಜ್ಞತೆ ಸಲ್ಲಿಸಿ, ರಾಷ್ಟ್ರಸೇವೆಯನ್ನು ಮುಂದುವರಿಸುವ ಸಂಕಲ್ಪ ವ್ಯಕ್ತಪಡಿಸಿದ್ದಾರೆ.
'ನನ್ನ ಯುವ ಸ್ನೇಹಿತರೇ' ಎಂದು ಆರಂಭವಾದ ಪತ್ರ
"ನನ್ನ ಯುವ ಸ್ನೇಹಿತರೇ" ಎಂದು ಆರಂಭವಾಗುವ ಪತ್ರದಲ್ಲಿ ಧರ್ಮೇಂದ್ರ ಪ್ರಧಾನ್, ಕಳೆದ ನಾಲ್ಕು ದಶಕಗಳಿಂದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸುಧಾರಣೆಗೆ ತಾವು ಸಮರ್ಪಿತರಾಗಿದ್ದೇನೆ ಎಂದು ಹೇಳಿದ್ದಾರೆ. ಭಾರತದ ಯುವಕರ ಕನಸು, ಆಶಯ ಮತ್ತು ನಿರೀಕ್ಷೆಗಳಿಗೆ ಸದಾ ಗೌರವ ನೀಡಿದ್ದೇನೆ. ಬಲಿಷ್ಠ, ಸಮಾನತೆ ಹೊಂದಿದ ಹಾಗೂ ಪಾರದರ್ಶಕ ಶಿಕ್ಷಣ ವ್ಯವಸ್ಥೆಯೇ ದೇಶದ ಅಭಿವೃದ್ಧಿಗೆ ಅಡಿಪಾಯ ಎಂದು ಅವರು ಉಲ್ಲೇಖಿಸಿದ್ದಾರೆ.
NEET ಅಕ್ರಮ ಉಲ್ಲೇಖ
2026ರ ಮೇ 3ರಂದು ನಡೆದ NEET-UG ಪರೀಕ್ಷೆಯಲ್ಲಿ ಅಕ್ರಮಗಳು ಬೆಳಕಿಗೆ ಬಂದಿದ್ದನ್ನು ಪತ್ರದಲ್ಲಿ ಉಲ್ಲೇಖಿಸಿರುವ ಪ್ರಧಾನ್, ಸರ್ಕಾರ ತಕ್ಷಣವೇ ತನಿಖೆಯನ್ನು ಸಿಬಿಐಗೆ ವಹಿಸಿತು ಎಂದು ತಿಳಿಸಿದ್ದಾರೆ. ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆ ನಡೆಸಲಾಗಿದ್ದು, ಮುಂದಿನ ವರ್ಷದಿಂದ NEET ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಿತ ಮೊದಲ ಆದ್ಯತೆ
20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಪರೀಕ್ಷೆ ಯಾವುದೇ ಅಡಚಣೆಯಿಲ್ಲದೆ ನಡೆಯುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿತ್ತು ಎಂದು ಪ್ರಧಾನ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಜಿಲ್ಲಾಡಳಿತ, ವಿದ್ಯಾರ್ಥಿಗಳು ಹಾಗೂ ಪೋಷಕರ ಸಹಕಾರದಿಂದ ಜೂನ್ 21ರಂದು ಮರುಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಅವರು ಹೇಳಿದ್ದಾರೆ.
'ಮೊದಲ ದಿನದಿಂದಲೇ ಹೊಣೆ ಹೊತ್ತಿದ್ದೆ'
"ಮೊದಲ ದಿನದಿಂದಲೇ ಈ ಪ್ರಕರಣದ ಸಂಪೂರ್ಣ ಹೊಣೆಗಾರಿಕೆಯನ್ನು ನಾನು ಹೊತ್ತಿದ್ದೆ. ಯಾವುದೇ ಪ್ರತಿಭಾವಂತ ವಿದ್ಯಾರ್ಥಿಯ ಭವಿಷ್ಯ ಪರೀಕ್ಷಾ ಮಾಫಿಯಾದಿಂದ ಹಾಳಾಗದಂತೆ ನೋಡಿಕೊಳ್ಳುವುದು ನನ್ನ ಸಂಕಲ್ಪವಾಗಿತ್ತು," ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. ಜುಲೈ 16ರಂದು ಪ್ರಕಟವಾದ NEET ಫಲಿತಾಂಶದಲ್ಲಿ ಬಡ ಹಿನ್ನೆಲೆಯ ಅನೇಕ ವಿದ್ಯಾರ್ಥಿಗಳು ಯಶಸ್ಸು ಸಾಧಿಸಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.
'ಕಳೆದ 10 ದಿನಗಳ ಘಟನೆಗಳಿಂದ ನೋವಾಗಿದೆ'
ಪತ್ರದ ಎರಡನೇ ಭಾಗದಲ್ಲಿ ಕಳೆದ 10 ದಿನಗಳ ಬೆಳವಣಿಗೆಗಳ ಬಗ್ಗೆ ಉಲ್ಲೇಖಿಸಿರುವ ಪ್ರಧಾನ್, "ಕಳೆದ ಹತ್ತು ದಿನಗಳ ಘಟನೆಗಳನ್ನು ನೋಡಿ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಇದು ನನ್ನ ವೈಯಕ್ತಿಕ ಪ್ರತಿಷ್ಠೆಯ ವಿಷಯವಲ್ಲ" ಎಂದು ಹೇಳಿದ್ದಾರೆ. ಭಾರತದ ಯುವಶಕ್ತಿಯೇ ದೇಶದ ನಿಜವಾದ ಶಕ್ತಿ. ಯುವಕರನ್ನು ಯಾವುದೇ ರೀತಿಯ ಭ್ರಮೆ ಅಥವಾ ಗೊಂದಲದಲ್ಲಿ ಸಿಲುಕಲು ಬಿಡುವುದಿಲ್ಲ ಎಂಬ ಸಂಕಲ್ಪವನ್ನು ಅವರು ವ್ಯಕ್ತಪಡಿಸಿದ್ದಾರೆ.
ಜಂತರ್ ಮಂತರ್ ಪ್ರತಿಭಟನೆ ಪ್ರಸ್ತಾಪ
ಜಂತರ್ ಮಂತರ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಉಂಟಾದ ಪರಿಸ್ಥಿತಿಯ ಲಾಭವನ್ನು ರಾಷ್ಟ್ರವಿರೋಧಿ ಶಕ್ತಿಗಳು ಪಡೆಯಬಾರದು ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. ದೇಶದ ಏಕತೆ ಉಳಿಯಬೇಕು. ವಿದ್ಯಾರ್ಥಿಗಳ ಭವಿಷ್ಯ ಕಾನೂನು ಗೊಂದಲಗಳಲ್ಲಿ ಸಿಲುಕಬಾರದು. ಅವರು ತಮ್ಮ ಸಮಯವನ್ನು ಶಿಕ್ಷಣ ಮತ್ತು ವೃತ್ತಿಜೀವನ ನಿರ್ಮಾಣಕ್ಕೆ ಮೀಸಲಿಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಎಲ್ಲ ವಿಚಾರಗಳನ್ನು ಪರಿಗಣಿಸಿ ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಮತ್ತು ಸಹೋದ್ಯೋಗಿಗಳಿಗೆ ಧನ್ಯವಾದ
ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನ, ವಿಶ್ವಾಸ ಹಾಗೂ ನಿರಂತರ ಬೆಂಬಲಕ್ಕಾಗಿ ಧರ್ಮೇಂದ್ರ ಪ್ರಧಾನ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ತಮ್ಮೊಂದಿಗೆ ಕೆಲಸ ಮಾಡಿದ ಸಚಿವ ಸಂಪುಟದ ಸಹೋದ್ಯೋಗಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗೂ ಅವರು ಧನ್ಯವಾದ ಸಲ್ಲಿಸಿದ್ದಾರೆ. "ರಾಷ್ಟ್ರಸೇವೆಯೇ ನನ್ನ ಜೀವನದ ಅತ್ಯುನ್ನತ ಆದ್ಯತೆ. ಮುಂದೆಯೂ ಭಾರತ ಮಾತೆ, ಒಡಿಶಾದ ಜನತೆ ಹಾಗೂ ದೇಶದ ಯುವಕರ ಸೇವೆಗೆ ನನ್ನನ್ನು ಸಮರ್ಪಿಸಿಕೊಳ್ಳುತ್ತೇನೆ" ಎಂದು ಪತ್ರದ ಕೊನೆಯಲ್ಲಿ ಅವರು ತಿಳಿಸಿದ್ದಾರೆ.

