
ದೆಹಲಿ ಮಾಲಿನ್ಯ
ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಠಿಣ 'ವಿಂಟರ್ ಆಕ್ಷನ್ ಪ್ಲಾನ್' ಜಾರಿ
ಚಳಿಗಾಲದ ಮಾಲಿನ್ಯ ತಡೆಯಲು ದೆಹಲಿಯಲ್ಲಿ P ವರ್ಕ್ ಫ್ರಮ್ ಹೋಮ್, ವಾಹನ ಸಂಚಾರಕ್ಕೆ ನಿರ್ಬಂಧ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗಳ ನಿಷೇಧ ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಚಳಿಗಾಲದಲ್ಲಿ ಎದುರಾಗುವ ತೀವ್ರ ವಾಯು ಮಾಲಿನ್ಯವನ್ನು ನಿಯಂತ್ರಿಸಲು ದೆಹಲಿ ಸರ್ಕಾರವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಹೊಸ `ವಿಂಟರ್ ಆಕ್ಷನ್ ಪ್ಲಾನ್" ಸಿದ್ಧಪಡಿಸಿದೆ. ಪ್ರತಿ ವರ್ಷ ನವೆಂಬರ್ 1 ರಿಂದ ಫೆಬ್ರವರಿ 28 ರವರೆಗೆ ಜಾರಿಯಲ್ಲಿರಲಿರುವ ಈ ಮಹತ್ವದ ಯೋಜನೆಯಡಿ ಕಚೇರಿ ಉದ್ಯೋಗಿಗಳಿಗೆ ಶೇಕಡಾ 50 ರಷ್ಟು ವರ್ಕ್ ಫ್ರಮ್ ಹೋಮ್ ಕಡ್ಡಾಯಗೊಳಿಸುವ ಮತ್ತು ಕಚೇರಿ ಸಮಯವನ್ನು ಬದಲಾಯಿಸುವ ಪ್ರಸ್ತಾಪವನ್ನು ಮಾಡಲಾಗಿದೆ. ಈ ಅವಧಿಯಲ್ಲಿ ವಾಯು ಮಾಲಿನ್ಯ ತೀವ್ರಗೊಳ್ಳುವುದರಿಂದ ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಲು ದೆಹಲಿಯ ಅಧಿಕೃತ ಪಾರ್ಕಿಂಗ್ ಸ್ಥಳಗಳಲ್ಲಿ ಶುಲ್ಕವನ್ನು ದುಪ್ಪಟ್ಟು ಮಾಡಲು ನಿರ್ಧರಿಸಲಾಗಿದೆ.
ಇದಲ್ಲದೆ, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ಇಲ್ಲದ ವಾಹನಗಳಿಗೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ನೀಡದಿರಲು ಸರ್ಕಾರ ಚಿಂತನೆ ನಡೆಸಿದೆ. ನವೆಂಬರ್‌ನಿಂದ ಜನವರಿ ಅಂತ್ಯದವರೆಗೆ ದೆಹಲಿಯ ಹೊರಗಿನಿಂದ ಬರುವ ಬಿಎಸ್-VI ಅಲ್ಲದ ವಾಣಿಜ್ಯ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಲಾಗುತ್ತಿದ್ದು, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ವಿನಾಯಿತಿ ನೀಡಲಾಗುತ್ತದೆ.
ಮಾಲಿನ್ಯ ಹೆಚ್ಚಾಗುವ ಡಿಸೆಂಬರ್ 10 ರಿಂದ ಜನವರಿ 20 ರ ಅವಧಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳ ಮೇಲೆ ಕಟ್ಟುನಿಟ್ಟಿನ ನಿಷೇಧ ಇರಲಿದ್ದು, ದೊಡ್ಡ ನಿರ್ಮಾಣ ಸಂಸ್ಥೆಗಳು ಕಡ್ಡಾಯವಾಗಿ ಆಂಟಿ ಸ್ಮಾಗ್ ಗನ್‌ಗಳನ್ನು ಬಳಸಬೇಕಾಗುತ್ತದೆ. ಕಸ ಮತ್ತು ಒಣ ಎಲೆಗಳನ್ನು ಸುಡುವುದನ್ನು ತಡೆಯಲು ಡ್ರೋನ್ ಕಣ್ಗಾವಲು ಬಳಸಲು ನಿರ್ಧರಿಸಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಮತ್ತು ದಂಡ ವಿಧಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

