ದೆಹಲಿ ಪಿಜಿ ದುರಂತ: ಸಾವಿನಲ್ಲೂ ಸಾರ್ಥಕತೆ- ಮೃತ ವಿದ್ಯಾರ್ಥಿಯ ನೇತ್ರದಾನ
x

ಅವಶೇಷಗಳಡಿ ಸಿಲುಕಿದ್ದ 12 ಮಂದಿಯನ್ನು ರಕ್ಷಿಸಲಾಗಿದ್ದು, ಅವರಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.

ದೆಹಲಿ ಪಿಜಿ ದುರಂತ: ಸಾವಿನಲ್ಲೂ ಸಾರ್ಥಕತೆ- ಮೃತ ವಿದ್ಯಾರ್ಥಿಯ ನೇತ್ರದಾನ

ಅವಶೇಷಗಳಡಿ ಸಿಲುಕಿದ್ದ 12 ಮಂದಿಯನ್ನು ರಕ್ಷಿಸಲಾಗಿದ್ದು, ಅವರಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಕಟ್ಟಡ ಕುಸಿತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.


Click the Play button to hear this message in audio format

ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ಐದು ಅಂತಸ್ತಿನ ಪಿಜಿ ಕಟ್ಟಡ ಕುಸಿದು ಏಳು ಮಂದಿ ಮೃತಪಟ್ಟ ದುರಂತದಲ್ಲಿ ಮಧ್ಯಪ್ರದೇಶದ ಇಬ್ಬರು ವಿದ್ಯಾರ್ಥಿಗಳೂ ಬಲಿಯಾಗಿದ್ದಾರೆ. ಮೃತರಲ್ಲಿ 19 ವರ್ಷದ ಅಕ್ಷತ್ ಯಾದವ್ ಮತ್ತು 21 ವರ್ಷದ ಅರ್ಪಿತ್ ಜಾಜ್ ಸೇರಿದ್ದಾರೆ. ರಕ್ಷಾಬಂಧನ ಆಚರಿಸಿ ತಮ್ಮ ಕುಟುಂಬಗಳನ್ನು ಭೇಟಿಯಾಗಿ ದೆಹಲಿಗೆ ಮರಳಿದ್ದ ಬೆನ್ನಲ್ಲೇ ಇಬ್ಬರ ಬದುಕು ದುರಂತ ಅಂತ್ಯ ಕಂಡಿದೆ.

IAS ಅಧಿಕಾರಿಯಾಗುವ ಕನಸು ಕಂಡಿದ್ದ ಅಕ್ಷತ್

ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ತುಳಸಿ ನಗರ ಪ್ರದೇಶದ ನಿವಾಸಿಯಾಗಿದ್ದ ಅಕ್ಷತ್ ಯಾದವ್ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದರು. ಕಳೆದ ವರ್ಷ ಕಾಮನ್ ಯೂನಿವರ್ಸಿಟಿ ಎಂಟ್ರೆನ್ಸ್ ಟೆಸ್ಟ್‌ (CUET) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಅವರು, ಭವಿಷ್ಯದಲ್ಲಿ ಐಎಎಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದರು.

ಅಕ್ಷತ್ ಓದಿನಲ್ಲಿ ಅತ್ಯಂತ ಪ್ರತಿಭಾವಂತರಾಗಿದ್ದರು. ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸುವ ಕುರಿತು ತಮ್ಮೊಂದಿಗೆ ಆಗಾಗ್ಗೆ ಮಾತನಾಡುತ್ತಿದ್ದರು ಎಂದು ಅವರ ಬಾಲ್ಯದ ಸ್ನೇಹಿತ ಹಾಗೂ ಸಹಪಾಠಿ ಕೃಷ್ಣ ರಜಕ್ ತಿಳಿಸಿದ್ದಾರೆ. ರಕ್ಷಾಬಂಧನಕ್ಕಾಗಿ ಕಟ್ನಿಗೆ ತೆರಳಿದ್ದ ಅಕ್ಷತ್ ಸ್ನೇಹಿತನನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇದೀಗ ಆ ಭೇಟಿಯಾಗದ ನೋವು ಜೀವನಪೂರ್ತಿ ಕಾಡಲಿದೆ ಎಂದು ರಜಕ್ ಬೇಸರ ವ್ಯಕ್ತಪಡಿಸಿದ್ದಾರೆ. ಅಕ್ಷತ್ ಅವರ ತಂದೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಗೃಹಿಣಿಯಾಗಿದ್ದಾರೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ.

ಅರ್ಪಿತ್ ಕುಟುಂಬದಿಂದ ಕಣ್ಣಿನ ದಾನ

ಮಧ್ಯಪ್ರದೇಶದ ದೇವಾಸ್ ನಿವಾಸಿ ಅರ್ಪಿತ್ ಜಾಜ್ ದೆಹಲಿ ವಿಶ್ವವಿದ್ಯಾಲಯದ ಆತ್ಮರಾಮ ಸನಾತನ ಧರ್ಮ ಕಾಲೇಜಿನಲ್ಲಿ ಬಿಕಾಂ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದರು. ರಕ್ಷಾಬಂಧನದ ಬಳಿಕ ಭಾನುವಾರವೇ ಅವರು ದೆಹಲಿಗೆ ವಾಪಸಾಗಿದ್ದರು. ದೆಹಲಿಗೆ ಬಂದ ಬಳಿಕ ಪೋಷಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದ ಅರ್ಪಿತ್, ಪ್ರಯಾಣದ ಆಯಾಸದಿಂದ ಸ್ವಲ್ಪ ವಿಶ್ರಾಂತಿ ಪಡೆಯುವುದಾಗಿ ತಿಳಿಸಿದ್ದರು.

ಇದಾದ ಸುಮಾರು ಒಂದೂವರೆ ಗಂಟೆಯಲ್ಲೇ ಪಿಜಿ ಕಟ್ಟಡ ಕುಸಿದಿದ್ದು, ಕುಟುಂಬದವರು ಅವರೊಂದಿಗೆ ಸಂಪರ್ಕ ಕಳೆದುಕೊಂಡಿದ್ದರು. ಸೋಮವಾರ ಅರ್ಪಿತ್ ಮೃತಪಟ್ಟಿರುವುದು ದೃಢಪಟ್ಟಿತು. ದುರಂತದ ನಡುವೆಯೂ ಕುಟುಂಬದವರು ಅವರ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದು, ಅವರ ಸಾವಿನಲ್ಲೂ ಮತ್ತೊಬ್ಬರ ಬದುಕಿಗೆ ಬೆಳಕು ನೀಡುವ ಮಾನವೀಯ ನಿರ್ಧಾರ ಕೈಗೊಂಡಿದ್ದಾರೆ.

ಪಿಜಿ ಮಾಲೀಕ ದಂಪತಿ ಸೇರಿ ಮೂವರು ಬಂಧನ

ಕಟ್ಟಡದ ಮಾಲೀಕರು ಎಂದು ಗುರುತಿಸಲಾಗಿರುವ ಹರಿರಾಮ್ ಗುಪ್ತಾ, ಅವರ ಪತ್ನಿ ಉರ್ಮಿಳಾ ಗುಪ್ತಾ ಹಾಗೂ ಪುತ್ರ ಮಹೇಶ್ ಗುಪ್ತಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. 81 ವರ್ಷದ ಹರಿರಾಮ್ ಗುಪ್ತಾ ನಿವೃತ್ತ ವಾಯುಪಡೆ ಸಾರ್ಜೆಂಟ್ ಆಗಿದ್ದು, ಅವರ ಪತ್ನಿ ಉರ್ಮಿಳಾ ಅವರಿಗೆ 75 ವರ್ಷ ಹಾಗೂ ಪುತ್ರ ಮಹೇಶ್‌ಗೆ 52 ವರ್ಷ.

ಹರಿರಾಮ್ ಅವರನ್ನು ಹರಿಯಾಣ-ರಾಜಸ್ಥಾನ ಗಡಿಯ ಭಿವಾಡಿಯಲ್ಲಿ ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಆಸ್ತಿ ದಾಖಲೆಗಳಲ್ಲಿ ಉರ್ಮಿಳಾ ಗುಪ್ತಾ ಮಾಲೀಕರಾಗಿ ದಾಖಲಾಗಿದ್ದಾರೆ. ಹರಿರಾಮ್ ಮತ್ತು ಮಹೇಶ್ ಪಿಜಿಯನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ದೆಹಲಿಯ ನ್ಯಾಯಾಲಯ ಸೋಮವಾರ ಹರಿರಾಮ್ ಮತ್ತು ಉರ್ಮಿಳಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು, ಮಹೇಶ್ ಅವರನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಕಂಬ, ಬೀಮ್‌ಗಳಿಲ್ಲದ ಹಳೆಯ ಕಟ್ಟಡ

ದಶಕಗಳಷ್ಟು ಹಳೆಯದಾದ ಐದು ಅಂತಸ್ತಿನ ಕಟ್ಟಡದಲ್ಲಿ ಪ್ರತಿ ಮಹಡಿಯಲ್ಲಿ ಎರಡು ಕೊಠಡಿಗಳಿದ್ದು, ಪ್ರತಿ ಕೊಠಡಿಯಲ್ಲಿ ಎರಡು ಹಾಸಿಗೆಗಳಿದ್ದವು. ದೆಹಲಿ ವಿಶ್ವವಿದ್ಯಾಲಯದ ಸೌತ್ ಕ್ಯಾಂಪಸ್ ಸಮೀಪದ ಈ ಕಟ್ಟಡವನ್ನು ಬಾಲಕರ ಪಿಜಿಯಾಗಿ ಬಳಸಲಾಗುತ್ತಿತ್ತು.

ಭಾನುವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಕಟ್ಟಡ ಕುಸಿದಿದೆ. ಆ ಸಮಯದಲ್ಲಿ ನೆಲಮಾಳಿಗೆಯಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿತ್ತು. ನೆಲಮಾಳಿಗೆಯಲ್ಲಿ ದೀರ್ಘಕಾಲದಿಂದ ನೀರು ನಿಲ್ಲುವ ಸಮಸ್ಯೆಯೂ ಇತ್ತು ಎನ್ನಲಾಗಿದೆ. ಸುಮಾರು 55 ಚದರ ಮೀಟರ್ ವಿಸ್ತೀರ್ಣದ ಈ ಕಟ್ಟಡದಲ್ಲಿ ಕಂಬಗಳು ಮತ್ತು ಬೀಮ್‌ಗಳೇ ಇರಲಿಲ್ಲ ಎಂದು ವರದಿಯಾಗಿದೆ.

ಅವಶೇಷಗಳಡಿ ಸಿಲುಕಿದ್ದ 12 ಮಂದಿಯನ್ನು ರಕ್ಷಿಸಲಾಗಿದ್ದು, ಅವರಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಕಟ್ಟಡ ಕುಸಿತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

Read More
Next Story