
ಈಶಾನ್ಯ ದೆಹಲಿಯ ಮಿಲನ್ ಗಾರ್ಡನ್‌ನಲ್ಲಿ ನಿರ್ಮಾಣ ಹಂತದ ಮನೆ ಕುಸಿದು ತಂದೆ-ಮಗ ಮೃತಪಟ್ಟಿದ್ದಾರೆ.
ದೆಹಲಿಯಲ್ಲಿ ನಿರ್ಮಾಣ ಹಂತದ ಮನೆ ಕುಸಿತ: ತಂದೆ-ಮಗ ಸಾವು
ಮನೆ ಕುಸಿಯುವ ಸಂದರ್ಭದಲ್ಲಿ ಮೊದಲ ಮಹಡಿಯಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಕಟ್ಟಡ ಕುಸಿತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಈಶಾನ್ಯ ದೆಹಲಿಯ ಹರ್ಷ್ ವಿಹಾರ್‌ನ ಮಿಲನ್ ಗಾರ್ಡನ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆ ಕುಸಿದು ತಂದೆ ಮತ್ತು ಮಗ ಮೃತಪಟ್ಟಿದ್ದಾರೆ. ಭಾನುವಾರ ಸಂಜೆ ಸಂಭವಿಸಿದ ಈ ದುರಂತದಲ್ಲಿ 60 ವರ್ಷದ ಚಂದರ್‌ಪಾಲ್ ಮತ್ತು 33 ವರ್ಷದ ವಿಜಯ್ ಕುಮಾರ್ ಮೃತಪಟ್ಟಿದ್ದು, ಅವಶೇಷಗಳಡಿ ಸಿಲುಕಿರುವ ಮತ್ತೊಬ್ಬ ವ್ಯಕ್ತಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಮನೆ ಕುಸಿದ ಬಳಿಕ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಮಾಹಿತಿ ಲಭಿಸಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ತಂಡಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ರಾತ್ರಿಯಿಡೀ ನಡೆದ ಕಾರ್ಯಾಚರಣೆಯಲ್ಲಿ ಚಂದರ್‌ಪಾಲ್ ಮತ್ತು ವಿಜಯ್ ಕುಮಾರ್ ಅವರ ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ. ಇಬ್ಬರೂ ಹರ್ಷ್ ವಿಹಾರ್ ನಿವಾಸಿಗಳಾಗಿದ್ದಾರೆ.
ಎನ್‌ಡಿಆರ್‌ಎಫ್, ಡಿಡಿಎಂಎ ತಂಡಗಳಿಂದ ಕಾರ್ಯಾಚರಣೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA), ದೆಹಲಿ ಅಗ್ನಿಶಾಮಕ ಸೇವೆ ಮತ್ತು ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಅವಶೇಷಗಳಡಿ ಮತ್ತೊಬ್ಬ ವ್ಯಕ್ತಿ ಸಿಲುಕಿರುವ ಶಂಕೆಯಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮೊದಲ ಮಹಡಿಯಲ್ಲಿ ನಡೆಯುತ್ತಿತ್ತು ನಿರ್ಮಾಣ ಕಾಮಗಾರಿ
ಪೊಲೀಸರ ಮಾಹಿತಿ ಪ್ರಕಾರ, ಮನೋಜ್ ಕುಮಾರ್ ಎಂಬುವರಿಗೆ ಈ ಕಟ್ಟಡ ಸೇರಿದೆ ಎನ್ನಲಾಗಿದೆ. ಮನೆ ಕುಸಿಯುವ ಸಂದರ್ಭದಲ್ಲಿ ಮೊದಲ ಮಹಡಿಯಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಕಟ್ಟಡ ಕುಸಿತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
