
ರಾಹುಲ್ ಗಾಂಧಿ ವಿರುದ್ಧ ಮಿತ್ರಪಕ್ಷಗಳ ನಾಯಕರ ಹೇಳಿಕೆ ಬಳಸಿ ಹೋರ್ಡಿಂಗ್
ಇಂಡಿಯಾ ಒಕ್ಕೂಟದ ಸಭೆ: ರಾಹುಲ್ ಗಾಂಧಿ, ಕೈ ನಾಯಕರ ವಿರುದ್ಧ ರಾರಾಜಿಸಿದ ವಿವಾದಾತ್ಮಕ ಪೋಸ್ಟರ್‌ಗಳು
ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ವಿಷಯಗಳು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಇಂಡಿಯಾ ಒಕ್ಕೂಟದ ನಾಯಕರು ಚರ್ಚಿಸಲು ಮುಂದಾಗಿದ್ದಾರೆ.
ವಿರೋಧ ಪಕ್ಷಗಳ ‘ಇಂಡಿಯಾ’ ಒಕ್ಕೂಟದ ಮಹತ್ವದ ಸಭೆ ಬುಧವಾರ ನವದೆಹಲಿಯಲ್ಲಿ ನಡೆಯಲಿದ್ದು, ಈ ಸಭೆಗೂ ಮುನ್ನವೇ ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಿಕೊಂಡು ಹಾಕಲಾಗಿರುವ ವಿವಾದಾತ್ಮಕ ಪೋಸ್ಟರ್ ಹಾಗೂ ಹೋರ್ಡಿಂಗ್‌ಗಳು ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿವೆ. ಪ್ರಮುಖವಾಗಿ ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಚರ್ಚಿಸಲು ವಿರೋಧ ಪಕ್ಷದ ಮುಖಂಡರು ಸಜ್ಜಾಗಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ದೆಹಲಿಯ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಲಾಗಿರುವ ಹೋರ್ಡಿಂಗ್‌ಗಳಲ್ಲಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ಟೀಕಿಸುವ ಸಂದೇಶಗಳನ್ನು ಮುದ್ರಿಸಲಾಗಿದೆ. ಅಚ್ಚರಿಯೆಂದರೆ, ಈ ಟೀಕಾತ್ಮಕ ಹೇಳಿಕೆಗಳನ್ನು ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳ ನಾಯಕರೇ ನೀಡಿರುವಂತೆ ಬಿಂಬಿಸಲಾಗಿದೆ. ಎನ್‌ಸಿಪಿ (ಶರದ್ ಪವಾರ್ ಬಣ) ಮುಖ್ಯಸ್ಥ ಶರದ್ ಪವಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಉಪಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಹೆಸರನ್ನು ಬಳಸಿಕೊಂಡು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಲಾಗಿದೆ.
ವಿರೋಧ ಪಕ್ಷಗಳ ಒಕ್ಕೂಟದಲ್ಲಿ ಯಾವುದೇ ಒಗ್ಗಟ್ಟಿಲ್ಲ ಮತ್ತು ನಾಯಕರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ರವಾನಿಸುವ ಉದ್ದೇಶದಿಂದ ಈ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ ಎಂದು ವರದಿಯಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಚರ್ಚೆ
ಪೋಸ್ಟರ್ ವಿವಾದಗಳ ಆಚೆಗೂ, ಬುಧವಾರ ನಡೆಯಲಿರುವ ಸಭೆಯು ಹಲವು ಗಂಭೀರ ವಿಚಾರಗಳ ಚರ್ಚೆಗೆ ವೇದಿಕೆಯಾಗಲಿದೆ. ಈ ಸಭೆಯ ಪ್ರಮುಖ ಅಜೆಂಡಾ ಚುನಾವಣಾ ಆಯೋಗದ ಕಾರ್ಯವೈಖರಿಯಾಗಿದೆ. ಪ್ರಸ್ತುತ ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಕುರಿತು ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಲಾಗುವುದು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಒಕ್ಕೂಟದ ನಾಯಕರು ಸಮಾಲೋಚನೆ ನಡೆಸಲಿದ್ದಾರೆ. ಇದರ ಜೊತೆಗೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ವಜಾ ನಿರ್ಣಯವನ್ನು ಮಂಡಿಸುವ ಪ್ರಸ್ತಾವನೆಯ ಸಾಧಕ-ಬಾಧಕಗಳ ಬಗ್ಗೆಯೂ ಈ ಸಭೆಯಲ್ಲಿ ನಿರ್ಣಾಯಕ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಸಭೆಗೆ ಆಗಮಿಸಿದ ಪ್ರಮುಖ ನಾಯಕರು
ವಿರೋಧ ಪಕ್ಷಗಳ ಈ ಹೈವೋಲ್ಟೇಜ್ ಸಭೆಯಲ್ಲಿ ಪಾಲ್ಗೊಳ್ಳಲು ಹಲವು ಪ್ರಮುಖ ನಾಯಕರು ಈಗಾಗಲೇ ದೆಹಲಿಯಲ್ಲಿ ಜಮಾವಣೆಯಾಗಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಈಗಾಗಲೇ ದೆಹಲಿಗೆ ತಲುಪಿದ್ದಾರೆ. ಇದಲ್ಲದೆ ಒಕ್ಕೂಟದ ಅಂಗಪಕ್ಷಗಳ ಹಲವು ಹಿರಿಯ ನಾಯಕರು ಸಭೆಯಲ್ಲಿ ಹಾಜರಿದ್ದು, ಚುನಾವಣಾ ಆಯೋಗದ ವಿಚಾರದಲ್ಲಿ ಮುಂದಿನ ರಾಜಕೀಯ ನಡೆ ಹಾಗೂ ಸರ್ಕಾರದ ವಿರುದ್ಧದ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಿದ್ದಾರೆ.

