ಪತ್ರಕರ್ತೆ ರಾಣಾ ಅಯ್ಯೂಬ್ ಟ್ವೀಟ್‌ಗಳು ಕ್ಷೇಪಾರ್ಹ: 24 ಗಂಟೆಯೊಳಗೆ ಕ್ರಮಕ್ಕೆ ದೆಹಲಿ ಹೈಕೋರ್ಟ್ ಸೂಚನೆ
x
ರಾಣಾ ಅಯ್ಯೂಬ್​ ( ಸಂಗ್ರಹ ಚಿತ್ರ)

ಪತ್ರಕರ್ತೆ ರಾಣಾ ಅಯ್ಯೂಬ್ ಟ್ವೀಟ್‌ಗಳು 'ಕ್ಷೇಪಾರ್ಹ': 24 ಗಂಟೆಯೊಳಗೆ ಕ್ರಮಕ್ಕೆ ದೆಹಲಿ ಹೈಕೋರ್ಟ್ ಸೂಚನೆ

ಸಾಮಾಜಿಕ ಜಾಲತಾಣದಿಂದ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರಿದ್ದ ಪೀಠ ಈ ಆದೇಶ ನೀಡಿದೆ.


Click the Play button to hear this message in audio format

ಪತ್ರಕರ್ತೆ ರಾಣಾ ಅಯ್ಯೂಬ್ ಅವರು ಮಾಡಿರುವ ಕೆಲವು ಟ್ವೀಟ್‌ಗಳನ್ನು 'ಅತ್ಯಂತ ಆಕ್ಷೇಪಾರ್ಹ, ಪ್ರಚೋದನಕಾರಿ ಮತ್ತು ಕೋಮುದ್ವೇಷದಿಂದ ಕೂಡಿದೆ' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ದೆಹಲಿ ಹೈಕೋರ್ಟ್, 24 ಗಂಟೆಯೊಳಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ, ದೆಹಲಿ ಪೊಲೀಸ್ ಮತ್ತು ಸಾಮಾಜಿಕ ಜಾಲತಾಣ 'ಎಕ್ಸ್' (X) ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಸಾಮಾಜಿಕ ಜಾಲತಾಣದಿಂದ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರಿದ್ದ ಪೀಠ ಈ ಆದೇಶ ನೀಡಿದೆ. ಹಿಂದೂ ದೇವತೆಗಳು ಮತ್ತು ಐತಿಹಾಸಿಕ ವ್ಯಕ್ತಿಗಳನ್ನು ಅವಮಾನಿಸುವ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ, ರಾಣಾ ಅಯ್ಯೂಬ್ ವಿರುದ್ಧ ಎಫ್‌ಐಆರ್ ದಾಖಲಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈ ಹಿಂದೆಯೇ ಆದೇಶಿಸಿದ್ದನ್ನು ಹೈಕೋರ್ಟ್ ಈ ವೇಳೆ ಉಲ್ಲೇಖಿಸಿತು. "ಈ ವಿಷಯವು ಗಂಭೀರ ಪರಿಗಣನೆಗೆ ಅರ್ಹವಾಗಿದೆ" ಎಂದ ನ್ಯಾಯಾಲಯ, ಕೇಂದ್ರ ಸರ್ಕಾರ, ರಾಣಾ ಅಯ್ಯೂಬ್ ಹಾಗೂ 'ಎಕ್ಸ್' ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು, ದೆಹಲಿ ಪೊಲೀಸರನ್ನು ಈ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಸೇರಿಸಿದೆ.

ಅರ್ಜಿದಾರರ ವಾದವೇನು?

ಸನಾತನ ಧರ್ಮವನ್ನು ಪಾಲಿಸುವ ಅಮಿತಾ ಸಚ್‌ದೇವ ಎಂಬುವವರು ಈ ಅರ್ಜಿ ಸಲ್ಲಿಸಿದ್ದರು. ರಾಣಾ ಅಯ್ಯೂಬ್ ಅವರ ಪೋಸ್ಟ್‌ಗಳು ಮೇಲ್ನೋಟಕ್ಕೆ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿದ್ದು, ಕೋಮು ಸೌಹಾರ್ದತೆಯನ್ನು ಕದಡುವಂತಿವೆ. ಇದರಿಂದ ನನ್ನ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆಯಾಗಿದೆ ಹಾಗೂ ಸಂವಿಧಾನದ 21 ಮತ್ತು 25ನೇ ವಿಧಿಯಡಿ ನನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ಈ ಮೊದಲು ಅವರು 'ಎಕ್ಸ್' ಕುಂದುಕೊರತೆ ಅಧಿಕಾರಿಯನ್ನು ಸಂಪರ್ಕಿಸಿದ್ದರೂ, ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಯಾವುದೇ ಪರಿಹಾರ ಸಿಕ್ಕಿರಲಿಲ್ಲ.

ಈ ಹಿಂದೆಯೇ ಎಫ್‌ಐಆರ್ ಆದೇಶ

2016-17ನೇ ಸಾಲಿನಲ್ಲಿ ರಾಣಾ ಅಯ್ಯೂಬ್ ಮಾಡಿದ್ದ ಕೆಲವು ಪೋಸ್ಟ್‌ಗಳು ಹಿಂದೂ ದೇವತೆಗಳನ್ನು ನಿಂದಿಸುವ, ಭಾರತ ವಿರೋಧಿ ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶ ಹೊಂದಿವೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 2025ರ ಜನವರಿ 25ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಐಪಿಸಿ ಸೆಕ್ಷನ್ 153A (ಧರ್ಮದ ಆಧಾರದ ಮೇಲೆ ದ್ವೇಷ ಪ್ರಚೋದನೆ), 295A (ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು) ಮತ್ತು 505 (ಸಾರ್ವಜನಿಕ ಅಶಾಂತಿ ಸೃಷ್ಟಿಸುವ ಹೇಳಿಕೆ) ರ ಅಡಿ ಎಫ್‌ಐಆರ್ ದಾಖಲಿಸಲು ದೆಹಲಿ ಪೊಲೀಸರಿಗೆ ಸೂಚನೆ ನೀಡಿತ್ತು.

Read More
Next Story