
ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟು ಹಾನಿಗೊಳಗಾಗಿರುವ ಬೈಕ್‌ಗಳು
ದೆಹಲಿಯಲ್ಲಿ ಭೀಕರ ಅಗ್ನಿ ಅನಾಹುತ; ಒಂದೇ ಕುಟುಂಬದ ಮೂವರ ಸಾವು, ಇಬ್ಬರ ಸ್ಥಿತಿ ಗಂಭೀರ
ಪಂಕಜ್ ಅವರ ಮತ್ತೊಬ್ಬ ಸಹೋದರಿ ಮೋನಿ (18) ಹಾಗೂ ಅವರ 70 ವರ್ಷದ ಅಜ್ಜಿ ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ದೇಶದ ರಾಜಧಾನಿ ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ಘೋರ ದುರಂತ ಸಂಭವಿಸಿದೆ. ಇಲ್ಲಿನ ತುಘಲಕಾಬಾದ್ ಎಕ್ಸ್‌ಟೆನ್ಷನ್‌ನಲ್ಲಿರುವ ಐದು ಅಂತಸ್ತಿನ ವಸತಿ ಕಟ್ಟಡವೊಂದರಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟ ಹೊಗೆ ಆವರಿಸಿದ ಪರಿಣಾಮ ಒಂದೇ ಕುಟುಂಬದ ಮೂವರು ಸಜೀವ ದಹನವಾಗಿದ್ದಾರೆ. 70 ವರ್ಷದ ವೃದ್ಧೆ ಸೇರಿದಂತೆ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ಗುರುತು ಪತ್ತೆ
ಬೆಂಕಿ ಅವಘಡದಲ್ಲಿ ಮೃತಪಟ್ಟಿರುವವರನ್ನು ಪಂಕಜ್ (28), ಅವರ ತಾಯಿ ಗುಡ್ಡಿ (50) ಮತ್ತು ತಂಗಿ ಸೋನಿ (20) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಈ ಐದು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿ ವಾಸಿಸುತ್ತಿದ್ದರು. ಪಂಕಜ್ ಅವರ ಮತ್ತೊಬ್ಬ ಸಹೋದರಿ ಮೋನಿ (18) ಹಾಗೂ ಅವರ 70 ವರ್ಷದ ಅಜ್ಜಿ ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಏನಿದು ಘಟನೆ ?
ಶುಕ್ರವಾರ ಮುಂಜಾನೆ ಸುಮಾರು 2.31 ರ ಸುಮಾರಿಗೆ ಗೋವಿಂದಪುರಿ ಪೊಲೀಸ್ ಠಾಣೆಗೆ ಬೆಂಕಿ ಬಿದ್ದಿರುವ ಬಗ್ಗೆ ತುರ್ತು ಕರೆ ಬಂದಿದೆ. ತಕ್ಷಣವೇ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಇಡೀ ಕಟ್ಟಡದಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿದ್ದರಿಂದ ನಿವಾಸಿಗಳು ಹೊರಬರಲಾಗದೆ ಒಳಗೆ ಸಿಲುಕಿಕೊಂಡಿದ್ದರು.
ಪೊಲೀಸರು ಮತ್ತು ಸ್ಥಳೀಯ ಸಾರ್ವಜನಿಕರು ತಕ್ಷಣವೇ ಜಂಟಿ ಕಾರ್ಯಾಚರಣೆ ನಡೆಸಿ, ಕಟ್ಟಡದೊಳಗೆ ಸಿಲುಕಿದ್ದ ಎಂಟು ಜನರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟವರನ್ನು ಚಿಕಿತ್ಸೆಗಾಗಿ ಸಫ್ದರ್ಜಂಗ್ ಆಸ್ಪತ್ರೆ ಹಾಗೂ ಏಮ್ಸ್ (AIIMS) ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ. ಸ್ಥಳೀಯ ನಿವಾಸಿಗಳು ತಕ್ಷಣವೇ ಮಾನವ ಸರಪಳಿ ನಿರ್ಮಿಸಿ, ಬಕೆಟ್‌ಗಳಲ್ಲಿ ನೀರು ಹೊತ್ತು ತಂದು ಜನರನ್ನು ಸ್ಥಳಾಂತರಿಸಲು ನೆರವಾಗಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ.
"ಕಟ್ಟಡದ ನೆಲ ಮಹಡಿಯಲ್ಲಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನೆಲ ಮಹಡಿಯಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳಿಗೆ ಮೊದಲು ಬೆಂಕಿ ಹೊತ್ತಿಕೊಂಡಿದ್ದು, ನಂತರ ಹೊಗೆ ಇಡೀ ಕಟ್ಟಡಕ್ಕೆ ಹರಡಿದೆ." ಎಂದು ಆಗ್ನೇಯ ದೆಹಲಿಯ ಪೊಲೀಸ್ ಉಪ ಆಯುಕ್ತ ಹೇಮಂತ್ ತಿವಾರಿ ತಿಳಿಸಿದ್ದಾರೆ.
ಒಂದು ವಾರದ ಅವಧಿಯಲ್ಲಿ ಎರಡನೇ ದುರಂತ!
ದಕ್ಷಿಣ ದೆಹಲಿಯ ಮಾಲ್ವಿಯಾ ನಗರದ ಹೋಟೆಲ್ ಒಂದರಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡು ವಿದೇಶಿಗರು ಸೇರಿದಂತೆ ಕನಿಷ್ಠ 21 ಜನರು ಸಜೀವ ದಹನವಾದ ಘಟನೆ ನಡೆದು ಕೇವಲ ಒಂದು ವಾರ ಕಳೆಯುವ ಮುನ್ನವೇ ದೆಹಲಿಯಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

