5 ವರ್ಷಗಳ ವಿಚ್ಛೇದನ ಹೋರಾಟ ಅಂತ್ಯ: ಕೋರ್ಟ್‌ನಲ್ಲೇ ಕಣ್ಣೀರಿಟ್ಟು ಒಂದಾದ ದಂಪತಿ!
x

ಪತ್ನಿಯು ವಿಚ್ಛೇದನದ ಪತ್ರಗಳನ್ನು ನ್ಯಾಯಾಲಯದಲ್ಲೇ ಹರಿದುಹಾಕಿ ಪತಿಯನ್ನು ತಬ್ಬಿಕೊಳ್ಳುವ ಮೂಲಕ ಈ ಕೇಸ್​ ಸುಖಾಂತ್ಯ ಕಂಡಿದೆ. 

5 ವರ್ಷಗಳ ವಿಚ್ಛೇದನ ಹೋರಾಟ ಅಂತ್ಯ: ಕೋರ್ಟ್‌ನಲ್ಲೇ ಕಣ್ಣೀರಿಟ್ಟು ಒಂದಾದ ದಂಪತಿ!

ಶಿಖಾ ಹಾಗೂ ಸೌರಭ್ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ, ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿದ್ದವು.


Click the Play button to hear this message in audio format

ನವದೆಹಲಿ: ನ್ಯಾಯಾಲಯದ ಕಟಕಟೆಯಲ್ಲಿ ವಿಚ್ಛೇದನಕ್ಕಾಗಿ ಕಾದು ಕುಳಿತಿದ್ದ ದಂಪತಿ, ಭಾವನಾತ್ಮಕವಾಗಿ ಒಂದಾದ ಅಪರೂಪದ ಘಟನೆ ದೆಹಲಿಯಲ್ಲಿ ನಡೆದಿದೆ. ಬರೋಬ್ಬರಿ ಐದು ವರ್ಷಗಳ ಕಾಲ ನಡೆದ ಸುದೀರ್ಘ ಕಾನೂನು ಹೋರಾಟ ಹಾಗೂ ಪರಸ್ಪರ ದ್ವೇಷವು ಕೆಲವೇ ಕ್ಷಣಗಳಲ್ಲಿ ಕರಗಿಹೋಗಿದೆ. ಪತ್ನಿಯು ವಿಚ್ಛೇದನದ ಪತ್ರಗಳನ್ನು ನ್ಯಾಯಾಲಯದಲ್ಲೇ ಹರಿದುಹಾಕಿ ಪತಿಯನ್ನು ತಬ್ಬಿಕೊಳ್ಳುವ ಮೂಲಕ ಪ್ರಕರಣ​ ಸುಖಾಂತ್ಯ ಕಂಡಿದೆ. ಕೌಟುಂಬಿಕ ಕಲಹದ ಕಾರಣದಿಂದ ದೂರವಾಗಿದ್ದ ಶಿಖಾ ಹಾಗೂ ಸೌರಭ್ ದಂಪತಿ, ಇದೀಗ ಎಲ್ಲ ಮನಸ್ತಾಪಗಳನ್ನು ಮರೆತು ಹೊಸ ಜೀವನ ಆರಂಭಿಸಲು ಸಜ್ಜಾಗಿದ್ದಾರೆ.

ಶಿಖಾ ಹಾಗೂ ಸೌರಭ್ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ, ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿದ್ದವು. ಇದರಿಂದಾಗಿ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸುದೀರ್ಘ ಕಾನೂನು ಹೋರಾಟವು ಶಿಖಾ ಅವರ ಕುಟುಂಬದ ಮೇಲೆ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಪರಿಣಾಮ ಬೀರಿತ್ತು. ವಕೀಲರ ಶುಲ್ಕ ಹಾಗೂ ನ್ಯಾಯಾಲಯದ ಅಲೆದಾಟದಿಂದಾಗಿ ಶಿಖಾ ಅವರ ತಂದೆ ತಮ್ಮ ಬಹುಪಾಲು ಉಳಿತಾಯವನ್ನು ಕಳೆದುಕೊಂಡಿದ್ದರು ಎನ್ನಲಾಗಿದೆ.

ಮಾನವೀಯತೆ ಮೆರೆದ ಅಳಿಯ

ಈ ಎಲ್ಲಾ ಸಂಕಷ್ಟಗಳ ನಡುವೆ ಶಿಖಾ ಅವರ ತಂದೆಗೆ ಹೃದಯಾಘಾತ ಸಂಭವಿಸಿತ್ತು. ಆರ್ಥಿಕ ಮುಗ್ಗಟ್ಟಿನಿಂದಾಗಿ ಅವರನ್ನು ಆರಂಭದಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದ್ವೇಷದ ವಾತಾವರಣವಿದ್ದರೂ, ಈ ವಿಷಯ ತಿಳಿದ ತಕ್ಷಣ ಪತಿ ಸೌರಭ್ ಮಾನವೀಯತೆ ಮೆರೆದರು. ತಕ್ಷಣವೇ ಮಧ್ಯಪ್ರವೇಶಿಸಿ, ಮಾವನನ್ನು ಗುರುಗ್ರಾಮದ ಸುಸಜ್ಜಿತ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿ ಉತ್ತಮ ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು. ಸೌರಭ್ ಅವರ ಈ ನಡೆಯು ಇಬ್ಬರ ನಡುವಿನ ಕಹಿ ಭಾವನೆಯನ್ನು ಹೋಗಲಾಡಿಸಲು ಪ್ರಮುಖ ಕಾರಣವಾಯಿತು.

ನ್ಯಾಯಾಲಯದಲ್ಲಿ ನಡೆದ ಭಾವನಾತ್ಮಕ ಕ್ಷಣ

ತಂದೆಯ ಪ್ರಾಣ ಉಳಿಸಿದ ಮರುದಿನವೇ ದಂಪತಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಎಂದಿನಂತೆ ವಕೀಲರು ತಮ್ಮ ವಾದ ಮಂಡಿಸುತ್ತಿದ್ದಾಗ, ನ್ಯಾಯಾಧೀಶರು ಸೌರಭ್ ಅವರನ್ನು "ನಿಮಗೆ ಇನ್ನೂ ವಿಚ್ಛೇದನ ಬೇಕೇ?" ಎಂದು ಪ್ರಶ್ನಿಸಿದರು. ಆಗ ಸೌರಭ್ ಪತ್ನಿಯತ್ತ ಮುಗುಳ್ನಕ್ಕು ಉತ್ತರಿಸಿದರು. ಈ ಒಂದು ನಗು ಶಿಖಾ ಅವರಲ್ಲಿದ್ದ ವರ್ಷಗಳ ಸಿಟ್ಟನ್ನು ಶಮನಗೊಳಿಸಿತು. ತಕ್ಷಣವೇ ಭಾವುಕರಾದ ಅವರು, ತಮ್ಮ ಕೈಯಲ್ಲಿದ್ದ ವಿಚ್ಛೇದನ ಪತ್ರಗಳನ್ನು ಹರಿದುಹಾಕಿ ಪತಿಯನ್ನು ಅಪ್ಪಿಕೊಂಡರು. ಈ ಮೂಲಕ ಐದು ವರ್ಷಗಳ ವಿರಹವು ಒಂದೇ ಒಂದು ಮಾನವೀಯತೆಯ ಕಾರ್ಯದಿಂದ ಮರೆಯಾಗಿ, ನ್ಯಾಯಾಲಯದ ಕೊಠಡಿಯಲ್ಲೇ ಇಬ್ಬರೂ ಕಣ್ಣೀರಿಡುತ್ತಾ ಮತ್ತೆ ಒಂದಾದರು.

Read More
Next Story