ತೀವ್ರ ಚಂಡಮಾರುತಕ್ಕೆ ತತ್ತರಿಸಿದ ಒಡಿಶಾ- ನ.3ರಂದು ಆಂಧ್ರ ಕರಾವಳಿಗೆ ಅಪ್ಪಳಿಸುವ ಭೀತಿ
x

ಬಂಗಾಳ ಕೊಲ್ಲಿಯಲ್ಲಿ ಮುರಾಸು ಚಂಡಮಾರುತ ತೀವ್ರ ಸ್ವರೂಪ ಪಡೆದಿದೆ. ನವೆಂಬರ್ 3ರಂದು ದಕ್ಷಿಣ ಆಂಧ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದ್ದು, ಒಡಿಶಾದಲ್ಲೂ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.

ತೀವ್ರ ಚಂಡಮಾರುತಕ್ಕೆ ತತ್ತರಿಸಿದ ಒಡಿಶಾ- ನ.3ರಂದು ಆಂಧ್ರ ಕರಾವಳಿಗೆ ಅಪ್ಪಳಿಸುವ ಭೀತಿ

ಚಂಡಮಾರುತದ ಪ್ರಭಾವದಿಂದ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಒಡಿಶಾದ ರಾಯಗಢ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.


Click the Play button to hear this message in audio format

ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಮುರಾಸು ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡಿದ್ದು, ದಕ್ಷಿಣ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ನವೆಂಬರ್ 2ರ ಮಧ್ಯರಾತ್ರಿ ಮತ್ತು ನವೆಂಬರ್ 3ರ ಮುಂಜಾನೆ ನಡುವೆ ಚಂಡಮಾರುತ ಭೂಭಾಗ ಪ್ರವೇಶಿಸುವ ನಿರೀಕ್ಷೆಯಿದೆ.

ಭಾರತೀಯ ಹವಾಮಾನ ಇಲಾಖೆಯ ಇತ್ತೀಚಿನ ವರದಿ ಪ್ರಕಾರ, ಪಶ್ಚಿಮ-ಮಧ್ಯ ಮತ್ತು ನೈಋತ್ಯ ಬಂಗಾಳ ಕೊಲ್ಲಿಯ ಭಾಗದಲ್ಲಿ ತೀವ್ರ ಚಂಡಮಾರುತ ಕೇಂದ್ರೀಕೃತವಾಗಿದೆ. ಕಳೆದ ಆರು ಗಂಟೆಗಳಲ್ಲಿ ಗಂಟೆಗೆ ಸುಮಾರು 20 ಕಿ.ಮೀ. ವೇಗದಲ್ಲಿ ವಾಯುವ್ಯ ದಿಕ್ಕಿನತ್ತ ಚಲಿಸಿದೆ.

ನವೆಂಬರ್ 2ರ ಬೆಳಗ್ಗೆ 2.30ರ ವೇಳೆಗೆ ಚಂಡಮಾರುತ ಚೆನ್ನೈನಿಂದ ಸುಮಾರು 260 ಕಿ.ಮೀ. ದೂರದಲ್ಲಿತ್ತು. ನೆಲ್ಲೂರಿನಿಂದ 290 ಕಿ.ಮೀ., ಮಚಲಿಪಟ್ಟಣಂನಿಂದ 320 ಕಿ.ಮೀ. ಹಾಗೂ ವಿಶಾಖಪಟ್ಟಣಂನಿಂದ 470 ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿತ್ತು.

ಮುರಾಸು ಚಂಡಮಾರುತವು ನೆಲ್ಲೂರು ಮತ್ತು ನರಸಾಪುರ ನಡುವಿನ ಕರಾವಳಿ ಪ್ರದೇಶದಲ್ಲಿ, ಒಂಗೋಲ್ ಸಮೀಪ ಭೂಭಾಗ ಪ್ರವೇಶಿಸುವ ಸಾಧ್ಯತೆಯಿದೆ. ಈ ವೇಳೆ ಗಂಟೆಗೆ 100ರಿಂದ 110 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಗಾಳಿಯ ವೇಗ ಗಂಟೆಗೆ 120 ಕಿ.ಮೀ.ವರೆಗೂ ತಲುಪಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಒಡಿಶಾದಲ್ಲೂ ಮುನ್ನೆಚ್ಚರಿಕೆ ಕ್ರಮ ಚುರುಕು

ಚಂಡಮಾರುತದ ಪ್ರಭಾವದಿಂದ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಒಡಿಶಾದ ರಾಯಗಡ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಭಾನುವಾರ ತುರ್ತು ಸಭೆ ನಡೆಸಿ ಪರಿಸ್ಥಿತಿ ಎದುರಿಸಲು ಸಿದ್ಧತೆಗಳ ಕುರಿತು ಚರ್ಚಿಸಲಾಗಿದೆ.

ಜಿಲ್ಲೆಯ ಎಲ್ಲ 11 ಅಗ್ನಿಶಾಮಕ ಠಾಣೆಗಳ ತಂಡಗಳನ್ನು ತುರ್ತು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ರಸ್ತೆಗಳಲ್ಲಿ ಮರಗಳು ಅಥವಾ ಇತರ ಅಡೆತಡೆಗಳು ಉಂಟಾದರೆ ತಕ್ಷಣ ತೆರವುಗೊಳಿಸಲು ಜೆಸಿಬಿ, ಅಗೆಯುವ ಯಂತ್ರಗಳು ಹಾಗೂ ಹೈಡ್ರಾ ಕ್ರೇನ್‌ಗಳನ್ನು ಪ್ರಮುಖ ಸ್ಥಳಗಳಲ್ಲಿ ಸನ್ನದ್ಧವಾಗಿಡಲಾಗಿದೆ. ವಿಶೇಷವಾಗಿ ರಾಷ್ಟ್ರೀಯ ಹೆದ್ದಾರಿ 326ರಲ್ಲಿ ಸಂಚಾರಕ್ಕೆ ಅಡಚಣೆಯಾಗದಂತೆ ಗುಮ್ಮ ಘಾಟಿ ಮತ್ತು ಮುಕುಂದಪುರ ಘಾಟಿ ಪ್ರದೇಶಗಳಲ್ಲಿ ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದೆ.

ನವೆಂಬರ್ 2ರವರೆಗೆ ಯೆಲ್ಲೋ ಅಲರ್ಟ್

ಭಾರತೀಯ ಹವಾಮಾನ ಇಲಾಖೆ ಮತ್ತು ವಿಶೇಷ ಪರಿಹಾರ ಆಯುಕ್ತರ ವರದಿಯ ಆಧಾರದ ಮೇಲೆ ರಾಯಗಡ ಜಿಲ್ಲೆಯಲ್ಲಿ ನವೆಂಬರ್ 2ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನವೆಂಬರ್ 3 ಮತ್ತು 4ರಂದು ಆರೆಂಜ್ ಅಲರ್ಟ್ ನೀಡಲಾಗಿದೆ. ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು (BDO), ತಹಶೀಲ್ದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಯಂತ್ರೋಪಕರಣಗಳೊಂದಿಗೆ ಸ್ಥಳದಲ್ಲೇ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ. ಚಂಡಮಾರುತದಿಂದ ಉಂಟಾಗಬಹುದಾದ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಸಿದ್ಧಪಡಿಸಲಾಗಿದೆ.

Read More
Next Story