ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ನಾಳೆ ಮಧ್ಯಾಹ್ನದವರೆಗೆ ಗಡುವು- ಸಿಜೆಪಿ ಒತ್ತಡಕ್ಕೆ ಮಣಿಯುತ್ತಾ ಕೇಂದ್ರ ಸರ್ಕಾರ?
x

ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ನಾಳೆ ಮಧ್ಯಾಹ್ನದವರೆಗೆ ಗಡುವು- ಸಿಜೆಪಿ ಒತ್ತಡಕ್ಕೆ ಮಣಿಯುತ್ತಾ ಕೇಂದ್ರ ಸರ್ಕಾರ?

ಸರ್ಕಾರದ ಎದುರು ಸಿಜೆಪಿ ಇಟ್ಟಿದ್ದ ಮೂರು ಬೇಡಿಕೆಗಳಲ್ಲಿ ಎರಡು ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಹೇಳಲಾಗುತ್ತಿದೆ.


Click the Play button to hear this message in audio format

NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದೊಂದಿಗೆ ನಡೆದ ಮಹತ್ವದ ಸಭೆಯ ಬಳಿಕ ಕಾಕ್ರೋಚ್ ಜನತಾ ಪಾರ್ಟಿ (CJP) ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆ ಕುರಿತು ಸರ್ಕಾರ ಶನಿವಾರ ಮಧ್ಯಾಹ್ನದೊಳಗೆ ಉತ್ತರ ನೀಡುವುದಾಗಿ ತಿಳಿಸಿದೆ ಎಂದು ಹೇಳಿದೆ. ರಾಜೀನಾಮೆ ನೀಡದಿದ್ದರೆ ದೇಶವ್ಯಾಪಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪಕ್ಷ ಎಚ್ಚರಿಕೆ ನೀಡಿದೆ.

ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು ನವದೆಹಲಿಯ ವಿಠಲ್ ಪಟೇಲ್ ಹೌಸ್‌ನಲ್ಲಿ CJP ಪ್ರತಿನಿಧಿಗಳಾದ ಸೌರವ್ ದಾಸ್ ಮತ್ತು ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಅವರೊಂದಿಗೆ ಸಭೆ ನಡೆಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ CJP ಮುಖ್ಯ ವಕ್ತಾರ ಸೌರವ್ ದಾಸ್, "ನಮ್ಮ ಮೊದಲ ಹಾಗೂ ಪ್ರಮುಖ ಬೇಡಿಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆ. ಇದರ ಜೊತೆಗೆ NEET ವಿವಾದದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಜುಲೈ ತಿಂಗಳ ಪ್ರತಿಭಟನೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಯುವಕರ ವಿರುದ್ಧ ಯಾವುದೇ ಎಫ್‌ಐಆರ್ ಅಥವಾ ಕಾನೂನು ಕ್ರಮ ಕೈಗೊಳ್ಳಬಾರದು. ಈಗಾಗಲೇ ಪ್ರಕರಣ ದಾಖಲಾಗಿದ್ದರೆ ಅವುಗಳನ್ನು ಹಿಂಪಡೆಯಬೇಕು ಎಂದು ನಾವು ಒತ್ತಾಯಿಸಿದ್ದೇವೆ" ಎಂದು ಹೇಳಿದರು.

ಎರಡು ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು CJP ಹೇಳಿದೆ. ಪ್ರತಿಭಟನೆಯಲ್ಲಿ ಶಾಂತಿಯುತವಾಗಿ ಭಾಗವಹಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿರುವುದು ಹಾಗೂ ಪರೀಕ್ಷಾ ಅಕ್ರಮಗಳ ಹಿನ್ನೆಲೆಯಲ್ಲಿ ಬಾಧಿತ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಪಕ್ಷದ ಪ್ರತಿನಿಧಿಗಳು ತಿಳಿಸಿದ್ದಾರೆ.

ಆದರೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕುರಿತು ಅಂತಿಮ ನಿರ್ಧಾರಕ್ಕೆ ಬರಲು ಸರ್ಕಾರ ಇನ್ನಷ್ಟು ಸಮಯ ಕೋರಿದೆ ಎಂದು ಸೌರವ್ ದಾಸ್ ಹೇಳಿದ್ದಾರೆ. "ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆ ಕುರಿತು ಸರ್ಕಾರದೊಂದಿಗೆ ಸುದೀರ್ಘ ಚರ್ಚೆ ನಡೆದಿದೆ. ಈ ವಿಚಾರದಲ್ಲಿ ನಿರ್ಧಾರ ತಿಳಿಸಲು ನಾಳೆಯವರೆಗೆ ಸಮಯ ಕೇಳಿದ್ದಾರೆ. ರಾಜೀನಾಮೆ ಆಗದಿದ್ದರೆ ನಮ್ಮ ಹೋರಾಟ ಇನ್ನಷ್ಟು ದೊಡ್ಡ ಮಟ್ಟಕ್ಕೆ ವಿಸ್ತರಿಸಲಿದೆ" ಎಂದು ಅವರು ಎಚ್ಚರಿಕೆ ನೀಡಿದರು.

ಆದರೆ CJP ಸಭೆಯ ಬಳಿಕ ಮಾಡಿದ ಈ ಹೇಳಿಕೆಗಳ ಬಗ್ಗೆ ಕೇಂದ್ರ ಸರ್ಕಾರದಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಅಥವಾ ದೃಢೀಕರಣ ಹೊರಬಂದಿಲ್ಲ. ಈ ಮಾತುಕತೆಗೂ ಮುನ್ನ ಶಿಕ್ಷಣ ಹೋರಾಟಗಾರ ಸೋನಂ ವಾಂಗ್ಚುಕ್ ಅವರು ಕೇಂದ್ರ ಸರ್ಕಾರದಿಂದ ಲಿಖಿತ ಭರವಸೆ ಪಡೆದ ಬಳಿಕ ತಮ್ಮ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದರು. NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ದೇಶದ ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸುವುದಾಗಿ ಕೇಂದ್ರ ಭರವಸೆ ನೀಡಿದೆ ಎಂದು ಅವರು ತಿಳಿಸಿದ್ದರು.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಕೂಡ ಪರೀಕ್ಷಾ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶದಿಂದ ವೇಗದ ನ್ಯಾಯಾಲಯಗಳ ಸ್ಥಾಪನೆ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಹೊಸ ಮಸೂದೆಯನ್ನು ಕೇಂದ್ರ ಸಚಿವ ಸಂಪುಟ ಪರಿಗಣಿಸಲಿದೆ ಎಂದು ಘೋಷಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆ ಕುರಿತಂತೆ ಕೇಂದ್ರ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದರತ್ತ ವಿದ್ಯಾರ್ಥಿಗಳು, ಪ್ರತಿಭಟನಾಕಾರರು ಹಾಗೂ ರಾಜಕೀಯ ವಲಯದ ಗಮನ ಕೇಂದ್ರೀಕೃತವಾಗಿದೆ.

Read More
Next Story