ಮುಟ್ಟಿನ ರಜೆ ಕಡ್ಡಾಯವಾದರೆ ಮಹಿಳೆಯರಿಗೆ ಕೆಲಸ ಸಿಗಲ್ಲ: ಸುಪ್ರೀಂ ಕೋರ್ಟ್‌ ಆತಂಕ
x
ಮುಟ್ಟಿನ ರಜೆ ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ಹೇಳಿಕೆ(ಸಾಂದರ್ಭಿಕ ಚಿತ್ರ)

ಮುಟ್ಟಿನ ರಜೆ ಕಡ್ಡಾಯವಾದರೆ ಮಹಿಳೆಯರಿಗೆ ಕೆಲಸ ಸಿಗಲ್ಲ: ಸುಪ್ರೀಂ ಕೋರ್ಟ್‌ ಆತಂಕ

Menstrual Leave Policy| ಮಹಿಳೆಯರಿಗೆ ಮುಟ್ಟಿನ ರಜೆ ಕಡ್ಡಾಯಗೊಳಿಸಿದರೆ ಉದ್ಯೋಗದಾತರು ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಹಿಂಜರಿಯಬಹುದು ಎಂದು ಸಿಜೆಐ ಸೂರ್ಯ ಕಾಂತ್ ಕಳವಳ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ಮಹಿಳೆಯರಿಗೆ ಕಡ್ಡಾಯವಾಗಿ ಮುಟ್ಟಿನ ರಜೆ ನೀಡುವ ಕಾನೂನು ಜಾರಿಗೆ ತಂದರೆ, ಅದು ಅವರ ಉದ್ಯೋಗಾವಕಾಶಗಳ ಮೇಲೆ 'ಪ್ರತಿಕೂಲ ಪರಿಣಾಮ' ಬೀರಬಹುದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಶುಕ್ರವಾರ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯಗಳಿಗೆ ಮುಟ್ಟಿನ ರಜೆ ನಿಯಮಗಳನ್ನು ರೂಪಿಸಲು ನಿರ್ದೇಶನ ನೀಡುವಂತೆ ಕೋರಿ ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠವು ಈ ಮಹತ್ವದ ವಾದವನ್ನು ಮಂಡಿಸಿತು.

ಸಿಜೆಐ ಅವರ ಪ್ರಮುಖ ವಾದಗಳೇನು?

"ಜಾಗೃತಿ ಮೂಡಿಸುವುದು ಬೇರೆ ವಿಚಾರ, ಆದರೆ ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸಿ ಕಾನೂನು ತಂದ ಕ್ಷಣವೇ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಅಂತಹ ಕಾನೂನು ಬಂದರೆ ಯಾರೂ ಮಹಿಳೆಯರನ್ನು ನೇಮಿಸಿಕೊಳ್ಳುವುದಿಲ್ಲ," ಎಂದು ಸಿಜೆಐ ಎಚ್ಚರಿಸಿದರು.

ಇಂತಹ ಕಾನೂನು ದುಡಿಯುವ ಮಹಿಳೆಯರಲ್ಲಿ ತಾವೂ ಪುರುಷರಿಗಿಂತ 'ಕಡಿಮೆ' ಅಥವಾ 'ದುರ್ಬಲರು' ಎಂಬ ಮಾನಸಿಕ ಭಯ ಅಥವಾ ಕೀಳರಿಮೆಯನ್ನು ಸೃಷ್ಟಿಸಬಹುದು. ಮುಟ್ಟನ್ನು ಏನೋ ಒಂದು 'ಕೆಟ್ಟ' ಸಂಗತಿ ಎಂಬಂತೆ ನೋಡುವ ಅಪಾಯವಿದೆ ಎಂದು ಅವರು ವಾದಿಸಿದರು.

ಸ್ವಯಂಪ್ರೇರಿತ ನಡೆ v/s ಕಡ್ಡಾಯ

ವಿಚಾರಣೆ ವೇಳೆ ಹಿರಿಯ ನ್ಯಾಯವಾದಿ ಎಂ.ಆರ್. ಶಂಶಾದ್ ಅವರು ಕೇರಳ ಸರ್ಕಾರ ಮತ್ತು ಕೆಲವು ಖಾಸಗಿ ಕಂಪನಿಗಳು ಈಗಾಗಲೇ ರಜೆ ನೀಡುತ್ತಿರುವ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, "ಅವು ಸ್ವಯಂಪ್ರೇರಿತ ಕ್ರಮಗಳು. ಆದರೆ ಕಾನೂನಿನ ಮೂಲಕ ಇದನ್ನು ಕಡ್ಡಾಯಗೊಳಿಸಿದರೆ ನ್ಯಾಯಾಂಗ ಅಥವಾ ಸರ್ಕಾರಿ ಕೆಲಸಗಳಲ್ಲೂ ಮಹಿಳೆಯರಿಗೆ ಅವಕಾಶ ಕುಗ್ಗಬಹುದು. ಅವರ ವೃತ್ತಿಜೀವನಕ್ಕೆ ಮನೆಯಲ್ಲಿ ಕುಳಿತುಕೊಳ್ಳಿ ಎಂದು ಹೇಳುವ ಪರಿಸ್ಥಿತಿ ಬರಬಹುದು," ಎಂದರು.

ಹಕ್ಕು ಮತ್ತು ಘನತೆಯ ಬಗ್ಗೆ ಸುಪ್ರೀಂ ಕೋರ್ಟ್ ನಿಲುವು

ಇದೇ ವೇಳೆ, ಮುಟ್ಟಿನ ನೈರ್ಮಲ್ಯವು ಹೆಣ್ಣು ಮಗುವಿನ 'ಜೀವಿಸುವ ಹಕ್ಕು, ಘನತೆ, ಆರೋಗ್ಯ ಮತ್ತು ಶಿಕ್ಷಣದ ಅವಿಭಾಜ್ಯ ಅಂಗ' ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ತೀರ್ಪನ್ನು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರ ಪೀಠವು ಸ್ಮರಿಸಿತು. ಸಂವಿಧಾನದ 21ನೇ ವಿಧಿಯಡಿ ಮಹಿಳೆಯರ ಆರೋಗ್ಯ ರಕ್ಷಿಸುವುದು ಸರ್ಕಾರದ ಕರ್ತವ್ಯ ಎಂದು ಕೋರ್ಟ್ ಹೇಳಿದ್ದು, ಉಚಿತ ಸ್ಯಾನಿಟರಿ ನ್ಯಾಪ್‌ಕಿನ್ ಮತ್ತು ಪ್ರತ್ಯೇಕ ಶೌಚಾಲಯ ವ್ಯವಸ್ಥೆಗೆ ಕಡ್ಡಾಯ ನಿರ್ದೇಶನ ನೀಡಿದೆ.

Read More
Next Story